November 10, 2026
;
ananth nudi

 

 

ತಾವು ಸಚಿವೆಯಾಗಿದ್ದ ಸಂದರ್ಭದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದ ನನ್ನ ಅಣ್ಣನ ಮಗ ಎಂ.ಎಸ್. ಅನಂತ್ ಅವರು ಅತಿ ಚಿಕ್ಕ ವಯಸ್ಸಿನಲ್ಲೇ ಅಗಲಿರುವುದು ವೈಯಕ್ತಿಕವಾಗಿ ಅಪಾರ ನೋವು ತಂದಿದೆ ಎಂದು ಮಾಜಿ ಸಚಿವೆ ಶ್ರೀಮತಿ ಮೋಟಮ್ಮ ಭಾವುಕರಾಗಿ ಹೇಳಿದರು.

ಅವರು ಸೋಮವಾರ, ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಾಗರೀಕರ ವೇದಿಕೆಯಿಂದ ಏರ್ಪಡಿಸಿದ್ದ  ದಿವಂಗತ ಎಂ.ಎಸ್.ಅನಂತ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅನಂತ್ ಜಿ.ಪಂ. ಮಾಜಿ ಸದಸ್ಯರು, ಕಾಂಗ್ರೆಸ್ ಮುಖಂಡರು ಎಂಬುದಕ್ಕಿಂತ ಹೆಚ್ಚಾಗಿ ಜನರು ತಮ್ಮ ಅಣ್ಣನ ಮಗನೆಂದೇ ಗುರುತಿಸುತ್ತಿದ್ದರು. ರಾಜಕೀಯ ಜೀವನದಲ್ಲಿ ಹಾಗೂ ಕುಟುಂಬದ ವಿಚಾರದಲ್ಲಿ ಹಲವು ಆಪ್ತರನ್ನು ಕಳೆದುಕೊಂಡು ನೋವು ಅನುಭವಿಸಿದ್ದೇನೆ. ಅವರ ಚಿಕಿತ್ಸಾ ವೆಚ್ಚ ಸುಮಾರು 80 ಲಕ್ಷವಾಗಿತ್ತು. ಈ ಸಂದರ್ಭದಲ್ಲಿ ಅನೇಕ ಆತ್ಮೀಯರು ನೆರವು ನೀಡಿದ್ದಾರೆ. ಅವರೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ. ನನ್ನ ಉಸಿರಿರುವವರೆಗೂ ಅನಂತ್ ಅವರ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ನನ್ನ ಮಕ್ಕಳಿಗೂ ಅವರ ಜವಾಬ್ದಾರಿ ಹೊತ್ತುಕೊಳ್ಳುವಂತೆ ತಿಳಿಸಿದ್ದೇನೆ ಎಂದು ಭಾವುಕರಾದರು.

ಅನಂತ್ ಅವರ ಒಡನಾಡಿ ಮತ್ತು ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಯು.ಹೆಚ್. ಹೇಮಶೇಖರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅನಂತ್ ಅವರ ಪ್ರತಿಭೆ, ಬಡವರು ಬಗೆಗಿನ ಅವರು ತೋರುತ್ತಿದ್ದ ಕಾಳಜಿ, ಮಾನವೀಯ ಗುಣಗಳ ಅನೇಕ ನಿದರ್ಶನಗಳನ್ನು ಮೆಲುಕು ಹಾಕಿದರು.

ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ಅನಂತ್ ಅವರು ಯಾರನ್ನೂ ನೋಯಿಸಿದ ವ್ಯಕ್ತಿಯಲ್ಲ. ಜನರೊಂದಿಗೆ ಆತ್ಮೀಯವಾಗಿ ಬೆರೆತು, ಸಂಕಷ್ಟದಲ್ಲಿದ್ದವರಿಗೆ ನೆರವಾಗುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಅವರ ಸರಳ ವ್ಯಕ್ತಿತ್ವ ಮತ್ತು ಜನಪರ ಕಾಳಜಿ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದರು.

ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಹುಟ್ಟು ಅನಿರೀಕ್ಷಿತ, ಸಾವು ಖಚಿತ. ಆದರೆ ಬದುಕಿನ ಅವಧಿಯಲ್ಲಿ ಮಾಡುವ ಉತ್ತಮ ಕಾರ್ಯಗಳು ವ್ಯಕ್ತಿಯನ್ನು ಜನಮಾನಸದಲ್ಲಿ ಶಾಶ್ವತವಾಗಿ ಉಳಿಸುತ್ತವೆ. ಅನಂತ್ ಅವರ ಉತ್ತಮ ನಡವಳಿಕೆ, ಜನರ ಮೇಲಿನ ಕಾಳಜಿ ಹಾಗೂ ಸಮಾಜದ ಬದುಕಿಗೆ ಬೆಳಕಾಗುವ ಕಾರ್ಯದಿಂದ ಅಪಾರ ಜನಸಂಪರ್ಕ ಹೊಂದಿದ್ದರು. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಅನಂತ್ ಅವರು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಅವರು ಶೀಘ್ರ ಗುಣಮುಖರಾಗಿ ಮರಳಲಿ ಎಂದು ಇಡೀ ತಾಲೂಕಿನ ಜನರು ತಮ್ಮ ಕೈಲಾದ ಆರ್ಥಿಕ ನೆರವು ನೀಡಿದ್ದರು. ಇದು ಅವರ ಮೇಲಿದ್ದ ಜನರ ಪ್ರೀತಿ ಮತ್ತು ಅಭಿಮಾನಕ್ಕೆ ಸಾಕ್ಷಿಯಾಗಿದೆ. ಇಂತಹ ಸೌಹಾರ್ದತೆ ಮತ್ತು ಮಾನವೀಯ ಸಂಬಂಧಗಳು ಮುಂದುವರಿಯಬೇಕು. ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದರು.

ಅಂತಿಮಮವಾಗಿ ವಿವಿಧ ಪಕ್ಷ, ಸಂಘಟನೆ ಮುಖಂಡರು ಒಂದು ತಂಡ ರಚನೆ ಮಾಡಿ, ಆ ಮೂಲಕ ಅವರ ಕುಟುಂಬಕ್ಕೆ ನೆರವಾಗುವ ಸಂಕಲ್ಪ ಮಾಡಲಾಯಿತು.

ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಅನಂತ್ ಅವರ ಸ್ನೇಹಿತರು, ಕುಟುಂಬ ಸದಸ್ಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಅನಂತ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಂಬನಿ ಮಿಡಿದರು. ಬಕ್ಕಿ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

 

 

Leave a Reply

Your email address will not be published. Required fields are marked *