November 10, 2026
;
hundi 2

 

 

ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ದೇವಾಲಯದ ಬಾಗಿಲು ಒಡೆದು ಹುಂಡಿ ಹಾಗೂ ದೇವರ ಮೈಮೇಲಿನ ಆಭರಣ ಕಳ್ಳತನ ಮಾಡುತ್ತಿದ್ದ ಅಸ್ಸಾಂ ಮೂಲದ ಇಬ್ಬರು ಕಾರ್ಮಿಕರನ್ನು ಬಂಧಿಸಲಾಗಿದೆ.

ಮಾಕೋನಹಳ್ಳಿ ಗ್ರಾಮ ಶನೇಶ್ವರ, ತುದಿಯಾಲ ಗ್ರಾಮದ ಅಮ್ಮನವರ ಗುಡಿ ಸೇರಿದಂತೆ ಗ್ರಾಮದ ನಾಲ್ಕು ದೇವಾಲಯಗಳಲ್ಲಿ ಕಳೆದ ಕೆಲ ದಿನಗಳಿಂದ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ಆದರೆ ಆರೋಪಿಗಳ ಸುಳಿವು ಪತ್ತೆಯಾಗಿರಲಿಲ್ಲ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾಕೋನಹಳ್ಳಿ ಗ್ರಾಮದ ಕೃಷ್ಣೇಗೌಡ ಎಂಬುವವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣದ ಬೆನ್ನುಹತ್ತಿದ್ದ ಪೊಲೀಸರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಅಸ್ಸಾಂ ಮೂಲದ ಕಾರ್ಮಿಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಇಸ್ಲಾಂ ಮತ್ತು ಬಾಬರ್ ಎಂದು ಗುರುತಿಸಲಾಗಿದೆ.

ಬಂಧಿತ ಕಾರ್ಮಿಕರು ಮಾಕೋನಹಳ್ಳಿ ಗ್ರಾಮದ ಎಂ.ಬಿ. ಮಂಜುನಾಥಗೌಡ ಎಂಬುವವರ ತೋಟದ ಕೂಲಿ ಲೈನಿನಲ್ಲಿ ಕಳೆದ ಐದಾರು ತಿಂಗಳಿಂದ ವಾಸವಾಗಿದ್ದರು ಎನ್ನಲಾಗಿದೆ.

ಆರೋಪಿಗಳು ರಾತ್ರಿ ಸಮಯದಲ್ಲಿ ಕಾಲ್ನಡಿಗೆಯಲ್ಲಿಯೇ ಊರೊಳಗೆ ಸುತ್ತಾಡಿ ದೇವಸ್ಥಾನಗಳ ಬಾಗಿಲು ಒಡೆದು ಗರ್ಭಗುಡಿ ಪ್ರವೇಶಿಸಿ ದೇವರ ಮೇಲಿದ್ದ ಬೆಳ್ಳಿಯ ಆಭರಣಗಳನ್ನು ಹಾಗೂ ಕಾಣಿಕೆ ಹುಂಡಿಯ ಹಣವನ್ನು ದೋಚುತ್ತಿದ್ದರು. ಬೆಳ್ಳಿಯ ಆಭರಣಗಳನ್ನು ತೋಟವೊಂದರಲ್ಲಿ ಮಣ್ಣಿನಡಿ ಹುಗಿದು ಇಟ್ಟಿದ್ದರು ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿಗಳನ್ನು ಬಂಧಿಸಿದ ಮೂಡಿಗೆರೆ ಪೊಲೀಸರ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದರು. ದೇವಾಲಯಗಳ ಆವರಣಕ್ಕೆ ಸಿಸಿ ಕ್ಯಾಮರಗಳನ್ನು ಅಳವಡಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

 

 

Leave a Reply

Your email address will not be published. Required fields are marked *