November 19, 2026
;
kaadaane 1

 

 

ಹಾಸನದ   ಬೇಲೂರು ತಾಲೂಕಿನಲ್ಲಿ ಆನೆಗಳ   ಹಾವಳಿ ಹೆಚ್ಚಾಗಿದೆ. ಇದರಿಂದ ಆನೆಯನ್ನ ಭದ್ರಾ ಅಭಯಾರಣ್ಯಕ್ಕೆ ಓಡಿಸಲು ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಮೂಡಿಗೆರೆ ಜನ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಹಾಸನ ಜಿಲ್ಲೆಯ ಶಾಸಕರು, ಸಚಿವರು, ಅಧಿಕಾರಿಗಳು ತಮ್ಮ ತಲೆ ತೊಳೆದುಕೊಳ್ಳಲು ಆನೆ ಸಮಸ್ಯೆಯನ್ನು ನಮ್ಮ ತಲೆಗೆ ಕಟ್ಟಲು ಮುಂದಾಗಿದ್ದಾರೆ. 50ಕ್ಕೂ ಹೆಚ್ಚು ಆನೆಗಳ ಹಿಂಡು ಬೇಲೂರು – ಮೂಡಿಗೆರೆ ತಾಲೂಕಿನ ಗಡಿಯಲ್ಲಿವೆ. ದನ-ಕರುಗಳೇ ನಾವು ಹೇಳಿದಂತೆ ಹೋಗಲ್ಲ, ಇನ್ನೂ ಆನೆಗಳು ಹೋಗ್ತಾವಾ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೇಲೂರಿನಿಂದ ಭದ್ರಾ ಅಭಯಾರಣ್ಯಕ್ಕೆ ಸುಮಾರು 100 ಕಿ.ಮೀ ದೂರವಿದೆ. 100 ಕಿ.ಮೀ ದೂರ 50 ಆನೆಯನ್ನ ಓಡಿಸೋದು ಅಂದ್ರೆ ಹುಡುಗಾಟನಾ? ಅಡಿಕೆ-ಕಾಫಿ ಕೊಯ್ಲಿನ ಸಮಯ, ತೋಟಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿರುತ್ತಾರೆ. ಇದರಿಂದ ಅವರೆಲ್ಲ ತೊಂದರೆಗೆ ಒಳಗಾಗುತ್ತಾರೆ.

ಆನೆಗಳಿಂದ ಅನಾಹುತವಾದರೆ ಹೊಣೆ ಯಾರು? ಬೇಲೂರು ಶಾಸಕರ ಸ್ಥಿತಿಯೇ ನಾಳೆ ಮೂಡಿಗೆರೆ ಶಾಸಕರಿಗೂ ಬರುತ್ತದೆ. ಆನೆಯನ್ನು ಓಡಿಸೋದು ಬಿಟ್ಟು, ಬೇರೆ ಮಾರ್ಗ ಯೋಚಿಸಿ, ಸೆರೆ ಹಿಡಿದು ಸ್ಥಳಾಂತರಿಸಬೇಕು. ಆನೆಯನ್ನು ಓಡಿಸುವ ಕ್ರಮಕ್ಕೆ ಮುಂದಾದರೆ  ಉಗ್ರ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಅಟ್ಟುವುದಕ್ಕೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಶೃಂಗೇರಿ, ಎನ್.ಆರ್.ಪುರ ತಾಲ್ಲೂಕುಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಭದ್ರಾ ಅಭಯಾರಣ್ಯಕ್ಕೆ ಆನೆಗಳನ್ನು ಓಡಿಸಿದರೆ ಅವು ಸುತ್ತಮುತ್ತಲ ಗ್ರಾಮಗಳಿಗೆ ನುಗ್ಗಿ ಹಾನಿಯುಂಟುಮಾಡಲಿವೆ. ಆದ್ದರಿಂದ ಭದ್ರಾ ಅಭಯಾರಣ್ಯಕ್ಕೆ ಆನೆಗಳನ್ನು ಅಟ್ಟಬಾರದು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

 

 

Leave a Reply

Your email address will not be published. Required fields are marked *