November 26, 2026
;
Screenshot_20261125-083034~2

 

 

ನೆಮ್ಮೆದಿಯ ಜೀವನಕ್ಕೆ  ಒತ್ತಡರಹಿತ ಬದುಕು ಸಹಕಾರಿ ಎಂದು ಸರ್ಕಾರಿ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ  ಸ್ತ್ರೀರೋಗ ತಜ್ಞೆ  ಡಾ||ಸನುದೀಪಕ್ ಅಭಿಪ್ರಾಯಿಸಿದರು.

ಚಿಕ್ಕಮಗಳೂರು    ಅಕ್ಕಮಹಾದೇವಿ ಮಹಿಳಾಸಂಘದ ಬಸವನಹಳ್ಳಿ ಬಡಾವಣೆಯ ಶರಣೆಗಂಗಾಂಬಿಕೆ ತಂಡ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ಗೌರಿ ಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಕ್ಕಮಹಾದೇವಿಯ ವಚನಗಳು ಬದುಕಿಗೆ ದಾರಿದೀಪ. ಏನೇ ತೊಂದರೆ ಬಂದರೂ ಅಂಜದೆ ಮುನ್ನುಗ್ಗಬೇಕೆಂಬ ಸಂದೇಶ ವಚನಗಳಲ್ಲಿದೆ.  ಜೀವನವನ್ನು ಖುಷಿಯಿಂದ ಸಾಗಿಸಬೇಕು.  ಆತ್ಮಗೌರವದಿಂದ ವಿಶ್ವಾಸಪೂರ್ಣವಾಗಿ ಪರಾವಲಂಬಿಯಾಗದಂತೆ ಸ್ವತಂತ್ರವಾಗಿ ಬದುಕುವ ಮನೋಭಾವ ಹೊಂದಬೇಕೆಂದರು.

ಮದುವೆಯ ನಂತರ ಮಕ್ಕಳು ಕುಟುಂಬದ ಪೋಷಣೆಯಲ್ಲೆ ಹೆಚ್ಚಿನ ಸಮಯ ಹೋಗುತ್ತದೆ.  ಕಲಿಕೆಗೆ ಪೂರಕ ವಾತಾವರಣ ಮದುವೆಯ ನಂತರ ಕ್ಷೀಣಿಸುತ್ತ ಹೋಗುತ್ತದೆ ಹಾಗಾಗಿ ತಾಯಿಯಮನೆಯಲ್ಲಿರುವಾಗಲೇ ಹೆಚ್ಚಿನ ಶಿಕ್ಷಣ ಓದು ಅಗತ್ಯ.  9ರಿಂದ 13 ವಯೋಮಾನ ಪ್ರೌಢಾವಸ್ಥೆಯ ಬದಲಾವಣೆಗಳ ಬಗ್ಗೆ ಹೆಚ್ಚಿನ ಅರಿವು ಅಗತ್ಯ.  ಸಹಪ್ರಕ್ರಿಯೆಯನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ನೋಡಬೇಕಾಗುತ್ತದೆ.  ಈ ಹಂತದಲ್ಲಿ ತಾಯಂದಿರ ಸಹಕಾರ-ಮಾರ್ಗದರ್ಶನ ಅಗತ್ಯ ಎಂದರು.

ಹೆಣ್ಣುಮಕ್ಕಳು ಹುಟ್ಟಿದಾಗಿನಿಂದ ಸಾಯುವವರೆಗೂ ಅನೇಕ ನೋವು-ಸಂಕಟ-ಸಂಕಷ್ಟಗಳನ್ನು ಎದುರಿಸುತ್ತಲೇ ಇರುತ್ತಾಳೆ.  ತನ್ನ ಆರೋಗ್ಯಪಾಲನೆಗೆ ಗಮನಹರಿಸಿ ಒತ್ತಡಕ್ಕೆ ಒಳಗಾಗದೆ ಬದುಕು ಸಾಗಿಸುವಲ್ಲಿ ಸಾರ್ಥಕತೆ ಇದೆ.  ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕøತಿ ಕಲಿಸುವ ಗುರುತರ ಹೊಣೆಗಾರಿಕೆ ತಾಯಂದಿರಿಗಿರುತ್ತದೆ ಎಂದರು.

ಹಿಂದೆ ಹೆಣ್ಣುಮಕ್ಕಳು ಹುಟ್ಟಿದರೆ ಮೂಗುಮುರಿಯುವ ಸಂದರ್ಭವಿತ್ತು,  ಆದರೆ ಇಂದು ಪರಿಸ್ಥಿತಿ ಸುಧಾರಿಸಿದೆ.  ಹೆಣ್ಣುಮಗಳನ್ನು ಗಂಡುಮಗನಂತೆ ಪ್ರಾಮುಖ್ಯತೆ ನೀಡಿ ಬೆಳೆಸುವ ಸಂದರ್ಭ ನೋಡುತ್ತಿದ್ದೇವೆ.  ಕೀಳರಿಮೆ ಮೂಡದಂತೆ ಮಕ್ಕಳನ್ನು ಪಾಲಿಸಿ ಪೋಷಿಸುವ ಅಗತ್ಯವಿದೆ ಎಂದರು.

ಹೆಣ್ಣುಮಕ್ಕಳಿಗೆ 20ರಿಂದ 35ವಯೋಮಾನ ಗರ್ಭವಸ್ಥೆಗೆ ಸೂಕ್ತವಾದದ್ದು.  ಮಧ್ಯವಯಸ್ಸು ದಾಟಿದ ನಂತರ ಮನೋಪಾಸ್‍ಗೆ ತುತ್ತಾಗುವುದು ಸಹಜ ಎಂದ ಡಾ||ಸನು, ಪೌಷ್ಠಿಕ ಆಹಾರ ಸೇವನೆ, ಯೋಗ, ಧ್ಯಾನ, ನಡಿಗೆ, ಲಘುವ್ಯಾಯಾಮ  ಒತ್ತಡರಹಿತ ಬದುಕಿಗೆ ಸಹಕಾರಿ.  ನಿತ್ಯ 7-8ತಾಸು ನಿದ್ರೆ ಮಾಡಬೇಕು.  ಹೆಚ್ಚು ನೀರು ಕುಡಿಯುವುದು ಒಳಿತು.  ತೂಕ ಇಳಿಸಿಕೊಂಡರೆ ಆರಾಮದಾಯಕವಾಗಿರುತ್ತದೆ.  ಕ್ಯಾಲ್ಸಿಯಂ, ವಿಟಮಿನ್ ಕೊರತೆ ಸಾಮಾನ್ಯವಾಗಿ ಕಾಡುತ್ತದೆ.   ಬೆಳಗಿನ ಸೂರ್ಯಕಿರಣಗಳಿಂದ ಇವುಗಳನ್ನು ಪಡೆಯಬಹುದು.  ಹಾಲು, ತುಪ್ಪ, ಮೊಸರು, ರಾಗಿ, ಮೊಟ್ಟೆ, ಸೊಪ್ಪು ಹಣ್ಣುಗಳನ್ನು ಸೇವಿಸುವುದು ಒಳಿತು ಎಂದರು.

ಅಕ್ಕಮಹಾದೇವಿ ಮಹಿಳಾ ಸಂಘ ಅಧ್ಯಕ್ಷೆ ಆಶಾಮಲ್ಲೇಶ್ ಅಧ್ಯಕ್ಷತೆವಹಿಸಿ ಮಾತನಾಡಿ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮಿಸುತ್ತೇವೆ.  ವಿಶ್ವಾದ್ಯಂತ ಕನ್ನಡ ಕಂಪು ಪಸರಿಸಿದೆ.  ಮನೆಗಳಲ್ಲಿ ಕನ್ನಡ ಸಂಸ್ಕøತಿಯನ್ನು ಉಳಿಸಿ-ಬೆಳೆಸುವಲ್ಲಿ ತಾಯಂದಿರು ಶ್ರಮಿಸಬೇಕೆಂದರು.

ತಂಡದ ಮುಖ್ಯಸ್ಥೆ ವೀಣಾಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ ‘ನಾನು’ ಎಂಬುದನ್ನು ಬಿಟ್ಟು ‘ನಾವು’ ಎಂದು ಎಲ್ಲರೂ ಒಟ್ಟಾಗಿ ಮಾಡುವ ಕಾರ್ಯ ಪರಿಣಾಮಕಾರಿಯಾಗಿರುತ್ತದೆ.  ಪ್ರತಿ ಹುಣ್ಣಿಮೆಯಲ್ಲಿ ಆಯಾಯ ತಂಡದ ಎಲ್ಲ ಸದಸ್ಯರೂ ಒಗ್ಗೂಡಿ ಸಹಕರಿಸಿದಾಗ ಕಾರ್ಯಕ್ರಮ ಉತ್ತಮವಾಗಿ ಮೂಡಿಬರುತ್ತದೆ ಎಂದರು.

ಉಪಾಧ್ಯಕ್ಷೆ ಕುಸುಮಾರಾಜಶೇಖರ್, ಕಾರ್ಯದರ್ಶಿ ಆಶಾಹೇಮಂತ್, ಖಜಾಂಚಿ ಪಾರ್ವತಿಬಸವರಾಜು ಸಹಕಾರ್ಯದರ್ಶಿ ಮಧುಮತಿ, ಸಂಘಟನಾಕಾರ್ಯದರ್ಶಿ ಮಂಜುಳಾ, ವೀಣಾ ವೇದಿಕೆಯಲ್ಲಿದ್ದರು.

ಸದಸ್ಯರಾದ ರುಕ್ಮಿಣಿಹರೀಶ್ ಸ್ವಾಗತಿಸಿ, ಇಂದಿರಾಹರ್ಷ ವಂದಿಸಿದರು. ಸ್ವರ್ಣಾರುದ್ರೇಶ್ ಕಾರ್ಯಕ್ರಮ ನಿರೂಪಸಿದ್ದು, ಶೈಲಾಶಿವು ಅತಿಥಿ ಪರಿಚಯಿಸಿದರು. ಪ್ರಮೀಳಾಕಲ್ಲೇಶ್ ಮತ್ತು ಸುಧಾಕಿಶನ್ ಪ್ರಾರ್ಥಿಸಿ,  ಸುಶೀಲಮ್ಮ, ವಾಣಿಶ್ರೀ ವೇದಘೋಷ ಮಾಡಿದರು.  ಮಧು, ಜಯಮಾಲಾ, ವೀಣಾ ತಂಡ ನಾಡಗೀತೆ ಹಾಡಿದರು.

ಸದಸ್ಯರಾದ ಪ್ರಮೀಳಾ, ಸುಮಾಮಹೇಶ್, ಲತಾ ತಂಡದ ಸಾಂಸ್ಕøತಿಕ ಕಾರ್ಯಕ್ರಮ ಆಕರ್ಷಕವಾಗಿತ್ತು.  ವಿವಿಧ ಆಟೋಟ ಸ್ಪರ್ಧಾವಿಜೇತರಿಗೆ ವೀಣಾಜಗದೀಶ್ ಬಹುಮಾನ ವಿತರಿಸಿದರು.

 

 

Leave a Reply

Your email address will not be published. Required fields are marked *