ಮಧ್ಯಪ್ರಾಚ್ಯದ ಕೆಲ ದೇಶಗಳಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಸರಣಿ ಭೂಕಂಪನಗಳಿಂದ ಸಾವುನೋವಿನ ಆಕ್ರಂದನ ಮುಗಿಲುಮುಟ್ಟಿದೆ.
ಸುಮಾರು 6ದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಅವಶೇಷಗಳ ಅಡಿ ಸಿಲುಕಿ ಅದೆಷ್ಟೋ ಮಂದಿ ಸಾವು ಬದುಕಿನ ನಡುವೆ ನರಕಯಾತನೆ ಪಡುತ್ತಿದ್ದಾರೆ.
ಹೌದು, ಸೋಮವಾರ ಮುಂಜಾನೆ ಟರ್ಕಿ ಮತ್ತು ಸಿರಿಯಾ ದೇಶಗಳ ಗಡಿ ಭಾಗದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ನೆರೆಯ ಲೆಬನಾನ್ ಮತ್ತು ಇಸ್ರೇಲ್ ದೇಶಗಳಲ್ಲಿಯೂ ಭೂಕಂಪನದ ಅನುಭವವಾಗಿದೆ.


ಸೋಮವಾರ ಬೆಳಿಗ್ಗೆ 4.30 ರ ಸುಮಾರಿಗೆ ಸಂಭವಿಸಿದ ಈ ಭಯಾನಕ ಭೂಕಂಪನ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯನ್ನು ಹೊಂದಿತ್ತು. ಜನರು ನಿದ್ರಾವಸ್ಥೆಯಲ್ಲಿ ಇದ್ದಾಗಲೇ ಈ ಭೂಕಂಪನ ಸಂಭವಿಸಿರುವುದು ಸಾವುನೋವಿನ ಸಂಖ್ಯೆಯನ್ನು ಹೆಚ್ಚಿಸಿದೆ. ಮೊದಲ ಕಂಪನದ ನಂತರ ಒಂದು ಗಂಟೆ ಬಿಟ್ಟು ಮತ್ತೆ ಎರಡು ಬಾರಿ ಭೂಮಿ ಕಂಪಿಸಿದೆ.
ದೊಡ್ಡ ಕಂಪನದ ನಂತರ ಎರಡು ದಿನಗಳು ಕಳೆದರು ಮತ್ತೆ ಮತ್ತೆ ಭೂಮಿ ಕಂಪಿಸುತ್ತಲೇ ಇದೆ. ಇದರಿಂದ ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ನೆಲಸಮವಾಗಿರುವ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವ ಮಂದಿಯೆಷ್ಟು ? ಸಾವನ್ನಪ್ಪಿರುವವರ ಸಂಖ್ಯೆ ಎಷ್ಟು ? ಎಂದು ಯಾರೂ ಅಂದಾಜಿಸಲು ಸಾಧ್ಯವಾಗಿಲ್ಲ. ವಿಶ್ವಸಂಸ್ಥೆ ಅಂದಾಜಿಸಿರುವ ಪ್ರಕಾರ ಮಂಗಳವಾರ ಸಂಜೆ ಹೊತ್ತಿಗೆ ಸತ್ತವರ ಸಂಖ್ಯೆ 7800 ಎಂದು ಹೇಳಿದೆ. ಆದರೆ ವಾಸ್ತವವಾಗಿ 20 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಕೆಲ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಅನೇಕ ಕಟ್ಟಡಗಳು ಬಿರುಕು ಬಿಟ್ಟಿದ್ದು ಜನರು ಆ ಕಟ್ಟಡಗಳಲ್ಲಿ ವಾಸಿಸಲು ಯೋಗ್ಯವಲ್ಲದ ಸ್ಥಿತಿ ತಲುಪಿವೆ. ಹಾಗಾಗಿ ಲಕ್ಷಾಂತರ ಮಂದಿ ಬೀದಿಪಾಲಾಗಿದ್ದಾರೆ.
1999ರಲ್ಲಿ ಸಂಭವಿಸಿದ್ದ ಭೀಕರ ಭೂಕಂಪನದಲ್ಲಿ ಟರ್ಕಿಯಲ್ಲಿ ಸುಮಾರು 17 ಸಾವಿರ ಜನರು ಸಾವನ್ನಪ್ಪಿದ್ದರು. ಅಂದು ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ಹೊಂದಿತ್ತು. ಮೊನ್ನೆ ಸಂಭವಿಸಿರುವ ಭೂಕಂಪ ಅದಕ್ಕಿಂತಲೂ ತೀವ್ರವಾದ ಹಾನಿಯುಂಟುಮಾಡಿದ್ದು ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯನ್ನು ದಾಖಲಿಸಿದೆ.
ಭೂಕಂಪನಕ್ಕೆ ಇಡೀ ವಿಶ್ವವೇ ಮರುಗಿದ್ದು, ವಿವಿಧ ದೇಶಗಳು ಭೂಕಂಪನಪೀಡಿತ ಟರ್ಕಿ ಮತ್ತು ಸಿರಿಯಾಕ್ಕೆ ತಮ್ಮ ನೆರವಿನ ಹಸ್ತ ಚಾಚಿವೆ. ಭಾರತ ಸರ್ಕಾರವೂ ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿ ನೆರವಿಗೆ ಮುಂದಾಗಿದೆ.




