logo

 

 

  • * ಮೇಕನಗದ್ದೆ ಲಕ್ಷ್ಮಣಗೌಡ

ಭೌಗೋಳಿಕವಾಗಿ 13 ಡಿಗ್ರಿ 23 ಅಂಗುಲ -13 ಡಿಗ್ರಿ 35 ಅಂಗುಲ ಉತ್ತರ ಅಕ್ಷಾಂಶ ಮತ್ತು 75 ಡಿಗ್ರಿ 57 ಅಂಗುಲ ಪೂರ್ವ ರೇಖಾಂಶಗಳನ್ನು ಹೊಂದಿರುವ ಮೂಡಿಗೆರೆ ತಾಲ್ಲೂಕು ಕರ್ನಾಟಕದಲ್ಲೆ ಅತ್ಯುತ್ತಮವಾದ ಹವಾಗುಣವನ್ನು ಹೊಂದಿರುವ ಪ್ರಶಸ್ತವಾದ ಸನ್ನಿವೇಶಗಳನ್ನೊಳಗೊಂಡ ಹಲವಾರು ತಾಣಗಳನ್ನೊಳಗೊಂಡಿದೆ. ಹತ್ತಾರು ರಮ್ಯ ರಮಣೀಯ ತಾಣಗಳನ್ನು ಪ್ರಾಕೃತಿಕ ವಿಸ್ಮಯಗಳನ್ನು ಹಲವಾರು ದೇವಾಲಯಗಳನ್ನು ಗಿರಿ ಶ್ರೇಣಿ ಪರ್ವತಗಳನ್ನು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಇಲ್ಲಿ ಹಲವಾರು ನದಿಗಳು ಹುಟ್ಟಿ ಹರಿಯುತ್ತಾ ತಮ್ಮ ಮೂಲವನ್ನು ಕಂಡುಕೊಂಡಿವೆ. ಇತಿಹಾಸದಲ್ಲಿ ಕೋಡು ಮೂಡಿಸಿ ಸುವರ್ಣಾಕ್ಷರದಲ್ಲಿ ಬರೆದಿಟ್ಟಿರುವ ರಾಜ ಮನೆತನಗಳು ಇಲ್ಲಿ ಉಗಮವಾಗಿ ಮೆರೆದಿವೆ. ಅದರ ಕುರುಹಾಗಿ ಅಲ್ಲಲ್ಲಿ ಹಲವಾರು ಕೋಟೆ ಕೊತ್ತಲಗಳು ಇಂದಿಗೂ ಕಂಡು ಬರುತ್ತಿವೆ. ಈ ಎಲ್ಲ ಹಿನ್ನಲೆಗಳನ್ನೊಳಗೊಂಡಿರುವುದರಿಂದ ಪ್ರತಿನಿತ್ಯವೂ ಸಹಸ್ರಾರು ಯಾತ್ರಾರ್ಥಿಗಳು ಇಲ್ಲಿಗೆ ಸಂದರ್ಶಿಸುತ್ತಿದ್ದಾರೆ.

ಇತ್ತೀಚೆಗೆ ಮೂಡಿಗೆರೆ ತಾಲ್ಲೂಕಿನಿಂದ ಕಳಸ ಪ್ರತ್ಯೇಕ ತಾಲ್ಲೂಕು ಆಗಿ ರೂಪುಗೊಂಡಿದ್ದು, ಭೌಗೋಳಿಕವಾಗಿ ಕಳಸ ಪ್ರತ್ಯೇಕವಾಗಿದ್ದರೂ ಐತಿಹಾಸಿಕವಾಗಿ, ಭಾವನಾತ್ಮಕವಾಗಿ ಎಂದೆಂದಿಗೂ ಅದು ಮೂಡಿಗೆರೆಯೊಂದಿಗೆ ಬೆಸೆದುಕೊಂಡಿದೆ.

ಐತಿಹಾಸಿಕ ಸ್ಥಳಗಳು :-

ಅಂಗಡಿ

ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಟ್ಟ ಪ್ರಸಿದ್ಧ ರಾಜ ಮನೆತನವೊಂದು ಮೂಡಿಗೆರೆ ತಾಲ್ಲೂಕಿನ ಇಂದಿನ ಅಂಗಡಿಯಲ್ಲಿ ಉಗಮವಾಗಿ ಸಮಗ್ರ ಕರ್ನಾಟಕವೂ ಸೇರಿದಂತೆ ಅದರಾಚೆಗೂ ತನ್ನ ಆಡಳಿತದ ವ್ಯಾಪ್ತಿಯನ್ನು ಸ್ಥಾಪಿಸಿ ಸಾರ್ವಭೌಮತ್ವವನ್ನು ಸ್ಥಾಪಿಸಿದ್ದು ಈ ನೆಲದ ಪೌರುಷದ ಪ್ರತೀಕವೂ ಹೌದು.
ಸೊಸೆಯೂರು ಎಂದು ಇತಿಹಾಸದಲ್ಲಿ ದಾಖಲಾಗಿರುವ ವಸಂತ ಪರಮೇಶ್ವರಿಯ ನೆಲೆವೀಡು ಎಂದು ಕರೆಯಲಾಗುವ  ಹೇಮಾವತಿ ನದಿಯ ದಡದಲ್ಲಿರುವ ಈ ಊರಿನಲ್ಲಿ ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಇಲ್ಲಿ ಸಳನೆಂಬ ವ್ಯಕ್ತಿ ಹುಲಿಯನ್ನು ಕೊಂದು ನಂತರ ಸಾಮ್ರಾಜ್ಯ ಸ್ಥಾಪಿಸಿದ ಎಂಬ ಕತೆಯ ಹುಟ್ಟಿಗೆ ಕಾರಣವಾದ ಹಲವಾರು ಅಂಶಗಳು ಇಲ್ಲಿ ಗೋಚರಿಸುತ್ತವಾದರೂ. ಐತಿಹಾಸಿಕ ಸತ್ಯವನ್ನು ಹೊರಗೆಡವಲು ಇಂದಿನವರೆಗೆ ಯಾವೊಬ್ಬ ಸಂಶೋಧಕನಿಗೂ ಸಾಧ್ಯವಾಗಿಲ್ಲ. ಈ ಕಾರಣದಿಂದ ಇದು ಈ ಭಾಗದ ಐತಿಹಾಸಿಕ ಸತ್ಯಾಸತ್ಯತೆಯ ನಿಷ್ಕರ್ಷೆಯ ದುರಂತವೆಂದೆ ಹೇಳಬೇಕಾಗುತ್ತದೆ.
ಅಂಗಡಿಯಲ್ಲಿ ಇಂದಿಗೂ ಪ್ರೇಕ್ಷಕರಿಗೆ ವೀಕ್ಷಣೆಗೆ ಲಭ್ಯವಾಗುವ ಹಲವಾರು ಅಂಶಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಸಪ್ತ ಮಾತೃಕೆಯರನ್ನೊಳಗೊಂಡ ವಸಂತ ಪರಮೇಶ್ವರಿ ಅಮ್ಮನವರ ಗುಡಿ. ಇದರ ಪಕ್ಕದಲ್ಲಿರುವ ತೀರ್ಥಂಕರರ ಬಸದಿಗಳು, ಇತಿಹಾಸಕ್ಕೆ ಆಧಾರಗಳನ್ನೊದಗಿಸುವ ಹಲವಾರು ಶಿಲಾ ಶಾಸನಗಳು ಇವೆ. ಇದರ ಸಮೀಪದಲ್ಲಿಯೇ ಚೆನ್ನಕೇಶವ, ಪಾತಾಳ ರುದ್ರ, ಮಲ್ಲಿಕಾರ್ಜುನ ದೇವಾಲಯಗಳೂ ಆಕರ್ಷಕವಾಗಿವೆ. ಸಮೀಪದಲ್ಲಿಯೇ ಹೇಮಾವತಿ ನದಿಯ ದಂಡೆಯ ಮೇಲೆ ಕೋಟೆಹರ ಎನ್ನುವ ಸ್ಥಳವಿದೆ. ಇಲ್ಲಿ ಪ್ರತಿ ವರ್ಷÀ ಮಕ್ಕಳ ಹುಣ್ಣಿಮೆಯಂದು ವಿಶೇಷ ಉತ್ಸವ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಇಲ್ಲಿ ಕೋಟೆ ಇದ್ದಿರಬಹುದಾದ ಸಾಧ್ಯತೆ ಇದೆ. ಬಹುಶಃ ಮಲೆನಾಡಿನ ವಾತಾವರಣಕ್ಕೆ ತಕ್ಕಂತೆ ವಿಪರೀತ ವರ್ಷಧಾರೆ ಹಾಗೂ ಮಳೆಗಾಲದಲ್ಲಿ ತುಂಬಿ ಹರಿಯುವ ಹೇಮಾವತಿ ನದಿಯ ಕಾರಣದಿಂದ ಜನ ಜೀವನದ ನಿರ್ವಹಣೆ ಹಾಗೂ ಸಂಪರ್ಕ ಕೊರತೆಯಿಂದ ನಂತರದ ದಿನಗಳಲ್ಲಿ ಪ್ರಶಸ್ಥವಾದ ಸ್ಥಳವನ್ನರಿಸಿ ಬೇಲೂರು ಹಳೇಬೀಡುಗಳಿಗೆ ಹೊಯ್ಸಳರು ತಮ್ಮ ರಾಜಧಾನಿ ಬದಲಾಯಿಸಿರುವ ಸಾಧ್ಯತೆಯಿದೆ.
ದುರ್ಗದಹಳ್ಳಿ :-
ಇದು ಮೂಡಿಗೆರೆ ತಾಲ್ಲೂಕು ಕೇಂದ್ರದಿಂದ ಸುಮಾರು 30 ಕಿಲೋ ಮೀಟರ್‍ಗಳಷ್ಟು ದೂರದಲ್ಲಿರುವ ಐತಿಹಾಸಿಕ ಹಾಗೂ ನಿಸರ್ಗ ರಮಣೀಯ ಸ್ಥಳ. ಕಳಸಕ್ಕೆ ಹೋಗುವ ಮಾರ್ಗದಲ್ಲಿರುವ ಸುಂಕಸಾಲೆಯಿಂದ ಕೆಲವೇ ಕಿಲೋ ಮೀಟರ್‍ಗಳಷ್ಟು ದೂರವಿರುವ ಈ ಊರಿನ ಸಮೀಪದಲ್ಲಿರುವ ಬೆಟ್ಟ ಪ್ರದೇಶದಲ್ಲಿ ಪಾಳೆಗಾರರ ಕಾಲದಲ್ಲಿ ನಿರ್ಮಾಣವಾದ ಕೋಟೆ ಹಾಗೂ ದೇವಸ್ಥಾನಗಳಿರುವ ಬಗ್ಗೆ ಉಲ್ಲೇಖವಿದೆ. ಅಂದಿನ ಪಾಳೆಗಾರರು ಅಲ್ಲಿಂದ ದಕ್ಷಿಣ ಕನ್ನಡದ ಬಂಗಾಡಿ ಹಾಗೂ ಇತರ ಪಾಳೇಗಾರಿಕೆಯ ಮನೆತನಗಳೊಂದಿಗೆ ಸಂಪರ್ಕ ಹೊಂದಿದ ಬಗ್ಗೆ ಮಾಹಿತಿ ದೊರೆಯುತ್ತದೆ. ಪಶ್ಚಿಮ ಘಟ್ಟದ ಗುಡ್ಡಬೆಟ್ಟಗಳ ರಮಣೀಯ ದೃಶ್ಯಗಳ ಸರಮಾಲೆ ಇಲ್ಲಿ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ.
ಅದಲ್ಲದೆ ಅಲ್ಲಲ್ಲಿ ತಲೆ ಎತ್ತಿದ ಪಾಳೇಗಾರರು ಹಲವಾರು ಕಡೆ ಕೋಟೆಗಳನ್ನು ಕಟ್ಟಿ ಸ್ಥಳಿಯ ಆಡಳಿತ ನಡೆಸುತ್ತಿದ್ದಂತೆ ಕಾಣುತ್ತದೆ. ಹಳೇಕೋಟೆ, ಬೈರವನ ಕೋಟೆ, ಘಟ್ಟದಹಳ್ಳಿ ಕೋಟೆ ಇನ್ನು ಮುಂತಾದ ಕಡೆ ಕೋಟೆಗಳಿದ್ದುದ್ದಾಗಿ ಇತಿಹಾಸಕ್ಕೆ ತನ್ನದೇ ಕೊಡುಗೆ ನೀಡಿದ್ದ ಮೂಡಿಗೆರೆ ತಾಲ್ಲೂಕಿನ ಹೆಸರಾಂತ ಸಂಶೋಧಕರಾದ ದಿವಂಗತ ಮಾಕೋನಹಳ್ಳಿ ದೊಡ್ಡಪ್ಪಗೌಡರು ತಮ್ಮ ಬರವಣಿಗೆಗಳಲ್ಲಿ ದಾಖಲಿಸಿದ್ದಾರೆ.

ಶ್ರೀ ಮಾಕೋನಹಳ್ಳಿ ದೊಡ್ಡಪ್ಪಗೌಡರ ಸಂಶೋಧನೆಯಿಂದ ಬೆಳಕು ಕಾಣಬೇಕಾಗಿರುವ ಮಹತ್ವದ ಅಂಶಗಳಲ್ಲಿ ಮೂಡಿಗೆರೆ ಪಟ್ಟಣದ ಸಮೀಪವಿರುವ ಹೊಯ್ಸಳ ದೊರೆ ವಿಷ್ಣುವರ್ಧನ ಸಮಾಧಿ ಒಂದು. ಮೂಡಿಗೆರೆ ಮಾಕೋನಹಳ್ಳಿ ರಸ್ತೆಯಲ್ಲಿ ಬೀಜುವಳ್ಳಿ ಸಮೀಪವಿರುವ ತೋಟಗಾರಿಕೆ ನರ್ಸರಿಯ ಜಾಗದಲ್ಲಿ ಸುಮಾರು 20 ಅಡಿ ಚಚ್ಚೌಕದಲ್ಲಿ ಸುಮಾರು ಎರಡೂವರೆ ಅಡಿ ಎತ್ತರದ ನಾಲ್ಕು ಕಲ್ಲುಗಳನ್ನು ನಿಲ್ಲಿಸಿರುವುದು ಇಂದಿಗೂ ಕಂಡುಬರುತ್ತವೆ. ಇದು ವಿಷ್ಣುವರ್ಧನ ಸಮಾಧಿ ಎನ್ನಲು ಸಾಕಷ್ಟು ಪುರಾವೆಗಳನ್ನು ಶ್ರೀ ದೊಡ್ಡಪ್ಪಗೌಡರು ಒದಗಿಸಿದ್ದಾರೆ. ಇದನ್ನು ಸಂರಕ್ಷಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.

ಈ ತಾಲ್ಲೂಕಿನ ವಿಫುಲವಾದ ಶಾಸನ ಸಂಪತ್ತು ಇದೆ. ಅವುಗಳಲ್ಲಿ ಈಗಾಗಲೇ ಹಲವಾರು ದಾಖಲಾಗಿದ್ದು ಎಪಿಗ್ರಾಫಿಯ ಕರ್ನಾಟಕದಲ್ಲಿ ಅಚ್ಚಾಗಿದೆ. ಸುಮಾರು 10ಕ್ಕೂ ಹಎಚ್ಚು ಶಾಸನಗಳನ್ನು ಮೇಕನಗದ್ದೆ ಲಕ್ಷ್ಮಣಗೌಡ ಇವರು ಪತ್ತೆ ಹಚ್ಚಿ ದಾಖಲಿಸಿದ್ದಾರೆ. ಮಾಕೋನಹಳ್ಳಿ ದೊಡ್ಡಪ್ಪಗೌಡರು ಶಾಸನ ಸಂಗ್ರಹಣೆ ಮಾಡಿದ್ದಾರೆ. ಡಾ. ಡಿ.ಎಸ್. ಜಯಪ್ಪಗೌಡರು ಕೆಲವು ಶಾಸನಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅಲ್ಲದೆ ತಾಲ್ಲೂಕಿನಾದ್ಯಂತ ಹಲವಾರು ಶಾಸನಗಳು ಓದಲಾರದ ಸ್ಥಿತಿಗೆ ತಲುಪಿ ತಮ್ಮ ಎದೆಯೊಳಗೆ ಅಡಗಿಸಿಟ್ಟುಕೊಂಡಿದ್ದ ಅಮೂಲ್ಯ ಮಾಹಿತಿಯನ್ನು ಈ ತಲೆಮಾರಿಗೆ ವರ್ಗಾಹಿಸಲಾರದೆ ಸವೆದು ಹೋಗಿವೆ. ಶಿಲ್ಪ ಕಲೆಗೆ ಸಂಬಂಧಿಸಿದಂತೆ ಅಮೂಲ್ಯ ಅಪರೂಪದ ಕೆತ್ತನೆಗಳನ್ನೊಳಗೊಂಡಿರುವ ವೀರಗಲ್ಲುಗಳು, ಮಾಸ್ತಿ ಕಲ್ಲುಗಳು ಹಳ್ಳಿ ಹಳ್ಳಿಗಳಲ್ಲಿ ಇವೆಯಾದರೂ ಅವುಗಳಿಗೆ ಸರಿಯಾದ ರಕ್ಷಣೆ ಇಲ್ಲದೆ ಅವೆಲ್ಲ ಯಾರ್ಯಾರದೋ ಮನೆಯ ಮೆಟ್ಟಿಲು ಕಲ್ಲುಗಳಾಗಿರುವುದು ಇತಿಹಾಸಕ್ತರ ದುರಂತ ಎಂದು ಹೇಳಬೇಕಾಗುತ್ತದೆ.

ಭಕ್ತಿ ಪ್ರಧಾನ ಕ್ಷೇತ್ರಗಳು :-
ಮೂಡಿಗೆರೆ ತಾಲ್ಲೂಕಿನಾದ್ಯಂತ ಹಲವಾರು ಭಕ್ತಿ ಪ್ರಧಾನ ದೇವ ದೇವಿಯರ ಸನ್ನಿದಾನಗಳು ಹರಡಿವೆ. ಅವುಗಳಲ್ಲಿ ಕೆಲವು ಸ್ಥಳೀಯವಾಗಿ ಪ್ರಸಿದ್ಧವಾಗಿದ್ದರೆ ಅವುಗಳಲ್ಲಿ ಕೆಲವು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧ ಪಡೆದಿವೆ.
ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ, ಹೊರನಾಡು :-
ಶಿವನ ಅರ್ಧಾಂಗಿಯಾದ ಪಾರ್ವತಿಯು ಮಾತೆ ಶ್ರೀ ಅನ್ನಪೂರ್ಣೇಶ್ವರಿ ರೂಪದಲ್ಲಿ ಮೂಡಿಗೆರೆ ತಾಲ್ಲೂಕಿನ ಹೊರನಾಡಿನಲ್ಲಿ ನೆಲೆಸಿ ರಾಜ್ಯಾದ್ಯಾಂತ ಭಕ್ತರನ್ನು ತನ್ನತ್ತ ಸೆಳೆದು ಅಭಯ ಹಸ್ತ ನೀಡುತ್ತಿದ್ದಾಳೆ. ಭದ್ರಾ ನದಿಯ ದಂಡೆಯಲ್ಲಿರುವ ಈ ಕ್ಷೇತ್ರವು ಅನ್ನದಾಸೋಹಕ್ಕೆ ಹೆಸರುವಾಸಿಯಾದ ಪವಿತ್ರ ಕ್ಷೇತ್ರ. ಮೂಡಿಗೆರೆ ತಾಲ್ಲೂಕು ಕೇಂದ್ರದಿಂದ 60 ಕಿಲೋ ಮೀಟರ್ ಹಾಗೂ ಕಳಸದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಈ ಕ್ಷೇತ್ರಕ್ಕೆ ಯಾತ್ರಾರ್ಥಿಗಳ ಅನುಕೂಲಕ್ಕೆ ಉತ್ತಮ ಸಾರಿಗೆ ಸೌಲಭ್ಯ ಹಾಗೂ ಇತರ ಸೌಕರ್ಯಗಳು ಲಭ್ಯವಿವೆ.

ಮೂಡಿಗೆರೆ ತಾಲ್ಲೂಕಿನ ಹೆಗ್ಗಳಿಕೆ ಎಂಬಂತೆ ಇಲ್ಲಿ ಪ್ರಸಿದ್ಧ ಕಾಶಿ ಕ್ಷೇತ್ರಕ್ಕೆ ಸಮಾನವಾದ ಪುಣ್ಯಪ್ರದವಾದ ಪಲವನ್ನೀವ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾದ ಸ್ಥಳಗಳಿವೆ. ಅವುಗಳಲ್ಲಿ ಕಳಸದ ಕಳಸೇಶ್ವರ ಸ್ವಾಮಿ ದೇವಾಲಯ ಹಾಗೂ ದೇವವೃಂದದ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ಕ್ಷೇತ್ರ.
ಕಳಸ :-
ಭದ್ರ ನದಿಯ ಬಲದಂಡೆಯಲ್ಲಿರುವ ಪಶ್ಚಿಮ ಘಟ್ದ ಗಿರಿ ಶ್ರೇಣಿಗಳ ನಡುವೆ ಇರುವ ಬೃಹತ್ ದೇವಸ್ಥಾನವು ನಮ್ಮ ನಾಡಿನ ಪ್ರಸಿದ್ಧ ದೇಗುಲಗಳಲ್ಲೊಂದು ಪೌರಾಣಿಕ ಹಿನ್ನಲೆಯ ಪ್ರಕಾರ ಶೃತಬಿಂದು ರಾಜನು ಪಾಪ ಪರಿಹಾರ್ಥವಾಗಿ ಈ ದೇವಸ್ಥಾನ ಕಟ್ಟಿಸಿದನೆಂಬ ಐತಿಹ್ಯವಿದೆ. ಇಲ್ಲಿನ ಪ್ರಧಾನ ದೇವರ ಜೊತೆಗೆ ಅಂಬುತೀರ್ಥ ಸ್ನಾನ ಘಟ್ಟ, ಮಾಧವ ಬಂಡೆ ಆನೆಯ ರೂಪದ ಗಣೇಶ ವಿಗ್ರಹ ಹಾಗೂ ಹಲವಾರು ಶಿಲಾ ಶಾಸನಗಳು ಇಲ್ಲಿ ಲಭ್ಯವಿದೆ. ಇಲ್ಲಿನ ಬಾಗಿಲಿನ ದ್ವಾರ ಪಾಲಕನ ಕೈಲಿ ಗುಲಗಂಜಿ ಇರುವುದರಿಂದ ಈ ಕ್ಷೇತ್ರ ದರ್ಶನ ಮಾಡಿದವರಿಗೆ ಕಾಶಿ ಕ್ಷೇತ್ರಕ್ಕಿಂತ ಒಂದು ಗುಲಗಂಜಿ ತೂಕ ಹೆಚ್ಚು ಪುಣ್ಯ ದೊರೆಯುವುದೆಂಬ ಪ್ರತೀತಿಯಿದೆ.
ದೇವವೃಂದ :-
ಮೂಡಿಗೆರೆ ತಾಲ್ಲೂಕಿನ ಇನ್ನೊಂದು ಪುರಾಣೀತಿಹಾಸ ಪ್ರಸಿದ್ಧವಾದ ಕ್ಷೇತ್ರ ದೇವವೃಂದ. ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ಇಲ್ಲಿನ ಅಧಿ ದೇವತೆ. ಇಲ್ಲಿ ಸೊಬಗಿಗೆ ಮೈ ಸೋತು ದೇವೇಂದ್ರನು ತನ್ನ ಪರಿವಾರ ಸಮೇತ ಈ ಸ್ಥಳದಲ್ಲಿ ನೆಲೆಸಿದನೆಂಬ ಹಿನ್ನಲೆಯಲ್ಲಿ ಈ ಸ್ಥಳಕ್ಕೆ ದೇವವೃಂದ ಎಂಬ ನಾಮಾಂಕಿಯವನ್ನೊಳಗೊಂಡಿದೆ. ನಂತರ ಪರಶುರಾಮನು ಮಾತೃಹತ್ಯಾದೋಷಾ ಪಹಾರಾರ್ಥವಾಗಿ ತಪಸ್ಸಿಗಾಗಿ ಇಲ್ಲಿಗೆ ಬಂದಿದ್ದಾಗ ಶಿವನು ಸ್ವಯಂ ಲಿಂಗಾಕಾರವಾಗಿ ಇಲ್ಲಿ ಪ್ರತ್ಯಕ್ಷನಾದುದ್ದದಿಂದ ಆತನಿಂದಲೇ ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟು ಪ್ರಸನ್ನ ರಾಮೇಶ್ವರನೆಂಬ ಅಭಿದಾನವನ್ನು ಹೊಂದಿರುವುದಾಗಿ ಐತಿಹ್ಯವಿದೆ.
ಇಲ್ಲಿ ಶ್ರೀ ರಾಮೇಶ್ವರ ಸ್ವಾಮಿಯ ಜೊತೆಗೆ ಪರಿವಾರ ದೇವತೆಗಳಾಗಿ ವೀರಭದ್ರ ಭೈರೇಶ್ಚರ, ಚೆನ್ನಕೇಶವ, ಅಮ್ಮನವರು, ನವಗ್ರಹ, ಕೋಟಿ ಆಂಜನೇಯ, ಕೋಟಿ ಗಣಪತಿ, ಸುಗ್ಗಿ ಅಮ್ಮನವರು ನಾಗಬನ ಇತ್ಯಾದಿಗಳಿವೆ. ಮೂಡಿಗೆರೆ ತಾಲ್ಲೂಕು ಕೇಂದ್ರದಿಂದ 25 ಕಿಲೋ ಮೀಟರ್ ದೂರವಿರುವ ಈ ಕ್ಷೇತ್ರಕ್ಕೆ ಬಂದು ಹೋಗುವವರಿಗೆ ಉತ್ತಮ ಸಾರಿಗೆ ವ್ಯವಸ್ಥೆಯಿದೆ. ಯುಗಾದಿಯಂದು ಐದು ಸಾವಿರ ಸೀಮೆ ಜನರು ಸೇರಿ ಜಾತ್ರೆ ನೆರವೇರಿಸುತ್ತಾರೆ.
ಶಿಲಾಮಯವಾದ ದೇವಾಲಯದ ಸುಂದರಕೆತ್ತನೆ ಹಾಗೂ ನಿರ್ಮಲ ಪುಷ್ಕರಣಿಯೊಂದಿಗೆ ಸಮೀಪದಲ್ಲಿ ಸುವರ್ಣ ಕದಳೀವನವೆಂದು ವರ್ಣಿತವಾಗಿರುವ ನವಿಲುಗುಡ್ಡ ಎಂಬ ಪ್ರದೇಶವಿದೆ. ಇಲ್ಲಿ ಕಪಿಲ ಮಹರ್ಷಿಗಳು ತಪಸ್ಸು ಮಾಡಿದ್ದರೆಂದು ಹೇಳಲಾಗುವ ಅತ್ಯಂತ ರಮಣೀಯವಾದ ಈ ಪ್ರದೇಶದ ಹತ್ತಿರದಲ್ಲಿ ಜಪಾವತಿ ನದಿ ಹರಿಯುತ್ತದೆ.

ಜಾವಳಿ :

ಜಾಬಾಲ ಋಷಿಗಳು ತಪಸ್ಸು ಮಾಡಿದ್ದರೆಂಬ ಐತಿಹ್ಯವುಳ್ಳ ಜಾವಳಿ ಗ್ರಾಮದಲ್ಲಿ ಹೇಮಾವತಿ ನದಿ ಉಗಮವಾಗುತ್ತದೆ. ಹೇಮಾವತಿ ನದಿ ಉಗಮಸ್ಥಳದಲ್ಲಿಯೇ ಗಣಪತಿ ದೇವಾಲಯವಿದೆ. ಪ್ರಕೃತಿಯ ಮಡಿಲಲ್ಲಿ ಇರುವ ಈ ಸ್ಥಳ ಇತ್ತೀಚೆಗೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಭೈರವಾಲಯಗಳು :-
ಈ ನಾಡಿನ ಸಂಸ್ಕøತಿಗೆ ತನ್ನದೇ ಕೊಡುಗೆಯನ್ನು ನೀಡಿರುವ ಕೃಷಿಕರ ಆರಾಧ್ಯ ದೈವ ಎನಿಸಿಕೊಂಡಿರುವ ಭೈರವೇಶ್ವರ ಸ್ವಾಮಿಯ ನೆಲೆವೀಡುಗಳು ಈ ತಾಲ್ಲೂಕಿನ ಅನೇಕ ಕಡೆಗಳಲ್ಲಿವೆ. ಅವುಗಳಲ್ಲಿ ಪ್ರಮುಖವಾದವು ಗಿರಿ ಶ್ರೇಣಿಗಳ ತಪ್ಪಲಿನಲ್ಲಿ ಸೌಂದರ್ಯೋಪಾಸಕರ ಆರಾಧನಾ ತಾಣಗಳಂತಿರುವ ನಿಸರ್ಗದ ರಮಣೀಯ ಘಟ್ಟ ಪ್ರದೇಶಗಳಲ್ಲಿ ನೆಲೆಗೊಂಡಿರುವ ಪ್ರಸನ್ನ ನಾಣ್ಯ ಭೈರೇಶ್ವರ ಸ್ವಾಮಿ ಭೈರಾಪುರ, ಬೆಟ್ಟದ ಭೈರವೇಶ್ವರ ಸ್ವಾಮಿ ಮರಗುಂದ, ಕಾಲ ಭೈರವೇಶ್ವರ ಸ್ವಾಮಿ ದೇವರ ಮನೆ ಮುಂತಾದವುಗಳಿವೆ.
ನಾಣ್ಯದ ಭೈರವೇಶ್ವರ ಸ್ವಾಮಿ ಹಾಗೂ ಶಿಶಿಲ ಬೆಟ್ಟ :-
ಮೂಡಿಗೆರೆ ತಾಲ್ಲೂಕಿನಿಂದ 30 ಕಿಲೋ ಮೀಟರ್‍ಗಳಷ್ಟು ದೂರದಲ್ಲಿರುವ ಭೈರಾಪುರ ಗ್ರಾಮದಲ್ಲಿರುವ ಶ್ರೀ ಪ್ರಸನ್ನ ನಾಣ್ಯದ ಭೈರವೇಶ್ವರ ಸ್ವಾಮಿ ಊರುಬಗೆ ಸಾವಿರದ ಒಕ್ಕಲುಗಳ ಮನೆದೇವರು. ಇಲ್ಲಿ ಶಿಲಾಮಯವಾದ ದೇವಾಲಯವಿದ್ದು ಅದು ಸಾವಿರಾರು ವರ್ಷಗಳ ಹಿಂದೆ ನಿರ್ಮಿತವಾದದ್ದೆಂಬ ಅಭಿಪ್ರಾಯವಿದೆ. ಇತ್ತೀಚೆಗೆ ಇದು ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‍ನಿಂದ ಜೀರ್ಣೋದ್ಧಾರಗೊಂಡಿದೆ.
ಇಲ್ಲಿಗೆ ಸಮೀಪದಲ್ಲಿ ಶಿಶಿಲ ಬೆಟ್ಟ ಎಂಬ ಪರ್ವತವಿದ್ದು ಇದು ನಿಸರ್ಗದ ಕೌತುಕಗಳಲ್ಲಿ ಒಂದು ಎಂಬಂತೆ ಪ್ರವಾಸಿಗರನ್ನು ಹಾಗೂ ಚಾರಣಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಎತ್ತಿನ ಭುಜ ಎಂದು ಕರೆಯಲ್ಪಡುವ ಈ ಪರ್ವತವು ಅತ್ಯಂತ ಕಡಿದಾದ ರೀತಿಯಲ್ಲಿ ಚೂಪಾಗಿ ರೂಪುಗೊಂಡಿದ್ದು, ಅದನ್ನೇರಿದವರಿಗೆ ಘಟ್ಟ ಪ್ರದೇಶದ ಮಲೆನಾಡಿನ ಪರ್ವತಾರಣ್ಯದ ಪ್ರತ್ಯಕ್ಷ ದರ್ಶನವಾಗುವುದಲ್ಲದೆ ರೋಮಾಂಚನಕಾರಿ ಅನುಭವವನ್ನುಂಟು ಮಾಡುತ್ತದೆ.
ಪಾಂಡವರ ಗುಡ್ಡ ಹಾಗೂ ಬೆಟ್ಟದ ಭೈರವೇಶ್ವರ ಸ್ವಾಮಿ :-
ಮೂಡಿಗೆರೆಯಿಂದ 25 ಕಿಲೋಮೀಟರ್ ದೂರದಲ್ಲಿರುವ ಮೇಕನಗದ್ದೆಯಿಂದ ಹೊರ ಭಾಗದಲ್ಲಿರುವ ಬೆಟ್ಟ ಪ್ರದೇಶದಲ್ಲಿರುವ ಪಾಂಡವರ ಗುಡ್ಡ ಪ್ರಕೃತಿ ಪ್ರಿಯರಿಗೊಂದು ಪ್ರೇಕ್ಷಣೀಯ ಸ್ಥಳ. ಸಾವಿರಾರು ಅಡಿ ಎತ್ತರದಲ್ಲಿರು ಈ ಪ್ರದೇಶದಲ್ಲಿ ಲಭ್ಯ ಕುರುಹುಗಳು ಪುರಾಣ ಕಾಲಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಒದಗಿಸುತ್ತದೆ. ಹಳೆಯ ಶಿಲಾಯುಗದ ಪಳೆಯುಳಿಕೆಗಳು ಎಂದು ಹೇಳಲಾಗುವ ಬಸವಣ್ಣ ಕೋಳಿಹುಂಜ ಒನಕೆ ಇನ್ನು ಮುಂತಾದ ಆಕೃತಿಗಳು ಇಲ್ಲಿ ಲಭ್ಯವಿದೆ.
ಸಹಸ್ರಾರು ಎಕರೆಗೆ ಹಬ್ಬಿ ಹರಡಿರುವ ಹಸಿರು ವನರಾಜಿ, ಎತ್ತರೆತ್ತರಕ್ಕೆ ಚಾಚಿರುವ ಬೆಟ್ಟಗಳು ತನ್ನದೇ ಆದ ಲೋಕಕ್ಕೆ ಕೊಂಡೊಯ್ದು ನಿಸರ್ಗದ ರಮಣೀಯತೆಯನ್ನು ಪರಿಚಯಿಸಿಕೊಡುತ್ತವೆ. ಪಕ್ಜದಲ್ಲಿಯೇ ಸದಾ ತುಂಬಿರುವ ಕೆರೆ, ಸಮೀಪದಲ್ಲಿ ಬೆಟ್ಟದ ಭೈರವೇಶ್ವರ ಸ್ವಾಮಿಯ ಸನ್ನಿದಿಯಿದ್ದು ಸಾವಿರಾರು ಭಕ್ತರನ್ನು ತನ್ನಡೆಗೆ ಆಕರ್ಷಿಸುತ್ತದೆ. ಇಲ್ಲಿಗೆ ಸಮೀಪದಲ್ಲಿ ಸಕಲೇಶಪುರ ತಾಲ್ಲೂಕಿಗೆ ಸೇರಿದ ಜೇನುಕಲ್ಲು ಬೆಟ್ಟವು ಗಿರಿಗಳ ಸಾಲಿನಲ್ಲಿ ಮೆರೆಯುತ್ತದೆ. ಇವುಗಳ ಪಕ್ಕದಲ್ಲಿ ದಿಗ್ಗಲ್ಲು ಬೆಟ್ಟವೂ ಆಕರ್ಷಣೀಯವಾಗಿದೆ.
ದೇವರಮನೆ ಕಾಲಭೈರಶ್ವರ ಸ್ವಾಮಿ :-
ಮೂಡಿಗೆರೆಯಿಂದ ಸುಮಾರು 20 ಕಿಲೋ ಮೀಟರ್‍ಗಳಷ್ಟು ದೂರ ಇರುವ ಗುತ್ತಿಹಳ್ಳಿಯ ಸಮೀಪದ ದೇವರಮನೆಯಲ್ಲಿ ಪ್ರಸಿದ್ಧವಾದ ಶ್ರೀ ಕಾಲ ಭೈರಶ್ವರ ಸ್ವಾಮಿಯ ದೇಗುಲವಿದೆ. ಪುರಾಣೀತಿಹಾಸಗಳ ಉಲ್ಲೇಖಗಳನ್ನೊಳಗೊಂಡ ಈ ದೇವಾಲಯದ ಐತಿಹ್ಯಗಳು ಇತರ ಭೈರವ ದೇವಾಲಯಗಳ ಸಾಲಿಗೆ ಸೇರುತ್ತದೆ. ಮುಕ್ಕುನ್ನಾಡು ಸಾವಿರ ಸೀಮೆಗೆ ಸೇರಿದ ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ಆಚರಣೆಗಳು ಜರುಗುತ್ತವೆ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ವಿಶೇಷಾಗಿ ಸುಗ್ಗಿಹಬ್ಬ ನಡೆಯುತ್ತದೆ.
ಸಮೀಪದಲ್ಲಿರುವ ಎತ್ತರವಾದ ಗಿರಿಶ್ರೇಣಿ ಸುತ್ತಲೂ ಹರಡಿರುವ ಅರಣ್ಯ ಪ್ರದೇಶ ಹಾಗೂ ಸೌಂದರ್ಯವನ್ನು ಎರಕ ಹೊಯ್ದಂತಿದೆ.
ಫಲ್ಗುಣಿ :-
ಕಲಾನಾಥೇಶ್ವರ ಸ್ವಾಮಿ ದೇವಸ್ಥಾನವಿರುವ ಫಲ್ಗುಣಿ ಮೂಡಿಗೆರೆಯಿಂದ ಸುಮಾರು 10 ಕಿಲೋ ಮೀಟರ್‍ಗಳಷ್ಟು ದೂರದಲ್ಲಿದೆ. ಇದು ಹೇಮಾವತಿಯ ನದಿಯ ದಂಡೆಯಲ್ಲಿರುವ ಕ್ಷೇತ್ರ. ಇಲ್ಲಿ ಶಿಲಾಮಯವಾದ ಆಕರ್ಷಕ ದೇವಾಲಯವಿದೆ. ಮುಕ್ಕುನ್ನಾಡು ಸಾವಿರದ ಸೀಮೆಯ ಜನರು – ಅಂದರೆ ಕೋಳೂರು, ತ್ರಿಪುರ, ಬಣಕಲ್ಲು ಸಾವಿರ ಸೀಮೆಗೆ ಸೇರಿದ ಜನರು ದೇವಸ್ಥಾನದಲ್ಲಿ ಸೇರಿ ಫಾಲ್ಗುಣ ಮಾಸದಲ್ಲಿ ಜಾತ್ರೆ ಆಚರಿಸುತ್ತಾರೆ. ಹೋಳಿ ಹಬ್ಬದಂದು ಜರುಗುವ ಈ ಜಾತ್ರೆಯಲ್ಲಿ ಸ್ವಾಮಿಯ ರಥೋತ್ಸವ ಜರುಗುತ್ತದೆ.
ಪುರಾಣದಲ್ಲಿ ಉಲ್ಲೇಖಿತ ಅರ್ಜುನನಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಆತನ ಹೆಸರಿನಿಂದಲೇ ಪ್ರಸಿದ್ಧವಾಗಿ ಈ ಊರು ಫಲ್ಗುಣಿ ಎಂದು ಕರೆಯಲ್ಪಡುತ್ತದೆ ಎಂಬ ಮಾಹಿತಿಯಿದೆ.

ನಾಗ ಸನ್ನಿಧಿಗಳು :-
ಮೂಡಿಗೆರೆ ತಾಲ್ಲೂಕಿನಲ್ಲಿ ಎರಡು ಪ್ರಸಿದ್ಧವಾದ ನಾಗ ಸನ್ನಿಧಿಗಳಿವೆ. ಅವುಗಳೆಂದರೆ ಒಂದು ಅಗ್ರಹಾರ ಇನ್ನೊಂದು ಹಳುವಳ್ಳಿ.
ಅಗ್ರಹಾರ : ಮೂಡಿಗೆರೆಯಿಂದ 15 ಕಿಲೋ ಮೀಟರ್‍ಗಳಷ್ಟು ದೂರವಿರುವ ಗೋಣಿಬೀಡಿನ ಸಮೀಪವಿರುವ ಅಗ್ರಹಾರ ಒಂದು ಪ್ರಸಿದ್ಧ ಕ್ಷೇತ್ರ. ಹೇಮಾವತಿ ದಂಡೆಯಲ್ಲಿರುವ ಈ ಕ್ಷೇತ್ರವು ಕುಕ್ಕೆ ಸುಬ್ರಮಣ್ಯ ಸ್ವಾಮಿಯವರ ಮೂಲ ಸ್ಥಾನ ಎಂಬ ಪ್ರತೀತಿಯಿದ್ದು ಆದಿ ಸುಬ್ರಮಣ್ಯ ಸ್ವಾಮಿ ಕ್ಷೇತ್ರ ಎಂದು ಪ್ರಸಿದ್ಧವಾಗಿದೆ. ಫೆಬ್ರವರಿ ತಿಂಗಳಲ್ಲಿ ಇಲ್ಲಿ ಪ್ರಸಿದ್ಧವಾದ ಜಾತ್ರೆ ನಡೆಯುತ್ತದೆ.
ಹಳುವಳ್ಳಿ : ಮೂಡಿಗೆರೆಯಿಂದ 60 ಕಿಲೋ ಮೀಟರ್ ಹಾಗೂ ಕಳಸದಿಂದ ಐದಾರು ಕಿಲೋ ಮೀಟರ್‍ಗಳಷ್ಟ್ಟು ದೂರದಲ್ಲಿರುವ ಹಳುವಳ್ಳಿ ಇನ್ನೊಂದು ಸುಬ್ರಮಣ್ಯ ಸ್ವಾಮಿಯ ಕ್ಷೇತ್ರ. ಭದ್ರಾ ನದಿಯ ದಂಡೆಯ ಮೇಲಿನ ಈ ಕ್ಷೇತ್ರದಲ್ಲಿ ಸುಬ್ರಮಣ್ಯ ಸ್ವಾಮಿಗೆ ವಿಶೇಷವಾದ ಪೂಜೆ, ಹರಕೆ ಹಾಗೂ ಸಂತರ್ಪಣೆ ಮುಂತಾದವುಗಳನ್ನು ಮಾಡಲು ವಿಶೇಷವಾದ ಅವಕಾಶವಿದೆ. ಪ್ರತಿ ವರ್ಷವೂ ಇಲ್ಲಿ ವಿಶೇಷವಾದ ಸುಬ್ರಮಣ್ಯ ಸ್ವಾಮಿಯ ಜಾತ್ರೆ ನಡೆಯುತ್ತದೆ.

ಇವುಗಳಲ್ಲದೆ ಎಲ್ಲ ಕಡೆ ಗ್ರಾಮ ದೇವತೆಗಳಾಗಿ ಜಾನಪದೀಯ ನಂಬಿಕೆ ಹಾಗೂ ಆಚರಣೆ ತಕ್ಕಂತೆ ಹಲವಾರು ದೇವ ದೇವತೆಯರು ನೆಲೆಸಿದ್ದಾರೆ. ಊರುಬಗೆ ಕಲಾನಾಥೇಶ್ವರ, ನಡುಬೈಲಿನ ರಾಮೇಶ್ವರ, ಕೆಸವಳಲು ರಾಮೇಶ್ವರ, ಮಲ್ಲೇಶ್ವರ ಈ ಹೆಸರಿನಲ್ಲಿ ಹಾಗೂ ಮಾತೆ ಪಾರ್ವತಿಯ ಪ್ರತಿ ರೂಢವಾಗಿ ಅಮ್ಮನವರು ಬಿಳ್ಳೂರಮ್ಮ, ಬಾಸಮ್ಮ, ಬಳಲಿಕ್ಕಮ್ಮ ಇತ್ಯಾದಿ ಹೆಸರಿನಲ್ಲಿಯೂ ಮಾರಿ, ಚೌಡಿ, ಜಟ್ಟಿಗ ಇತ್ಯಾದಿ ಹೆಸರಿನ ಅನೇಕ ದೇವಾಲಯಗಳು ಇವೆ.

ಜಾತ್ರೆ ಹಾಗೂ ಹಬ್ಬಗಳು :-
ಜನಪದರ ಆಚರಣೆಯ ಅವಿಭಾಜ್ಯ ಅಂಗಗಳಾದ ಜಾತ್ರೆ ಹಾಗೂ ಹಬ್ಬಗಳು ಇಲ್ಲಿನ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತವೆ. ಅವುಗಳಲ್ಲಿ ಪ್ರಮುಖವಾದವೆಂದರೆ ದೇವವೃಂದ ಜಾತ್ರೆ, ಅಗ್ರಹಾರ ಜಾತ್ರೆ, ಫಲ್ಗುಣಿ ಜಾತ್ರೆ, ಬಣಕಲ್ಲು ಜಾತ್ರೆ, ಕಳಸ ಜಾತ್ರೆ, ಹೊರನಾಡು ಜಾತ್ರೆ, ಹಳುವಳ್ಳಿ ಜಾತ್ರೆ, ಬಾಳೆಹೊಳೆ ಜಾತ್ರೆ ಇವು ಪ್ರಮುಖವಾಗಿವೆ. ಅದೇ ರೀತಿ ಸುಗ್ಗಿಹಬ್ಬಗಳಲ್ಲಿ ಪ್ರಮುಖವಾದವು ಆಯಾಯ ಸಾವಿರದ ವ್ಯಾಪ್ತಿಯಲ್ಲಿ ನಡೆಯುತ್ತವೆ. ಅವುಗಳಲ್ಲಿ ಊರುಬಗೆ ಸಾವಿರ, ತ್ರಿಪುರ ಸಾವಿರ, ಕೋಳೂರು ಸಾವಿರ, ಕೆಸವಳಲು ಸಾವಿರ, ಬಾಳೂರು ಸುಗ್ಗಿಹಬ್ಬ ಇತ್ಯಾದಿಗಳಿವೆ.

ಮಲಯ ಮಾರುತ :-
ಮೂಡಿಗೆರೆಯಿಂದ 15 ಕಿಲೋ ಮೀಟರ್ ದೂರದಲ್ಲಿರುವ ಕೊಟ್ಟಿಗೆಹಾರದ ಸಮೀಪವಿರುವ ಮಲಯ ಮಾರುತ ಪ್ರಕೃತಿಯ ಅತ್ಯಂತ ರಮಣೀಯ ತಾಣಗಳಲ್ಲೊಂದು. ಪಶ್ಚಿಮ ಘಟ್ಟ ಚಾರ್ಮಾಡಿಘಾಟಿಯ ಆರಂಭದಲ್ಲಿರುವ ಈ ತಾಣದಲ್ಲಿ ನಿಂತು ಸೂರ್ಯಸ್ಥ ಸೂರ್ಯೋದಯ ಸಂದರ್ಭದಲ್ಲಿ ಕಾಣುವ ಹಿಮಚ್ಛಾದಿತ ದೃಶ್ಯ ಈ ನೆಲವನ್ನು ಸ್ವರ್ಗ ಸದೃಸವಾಗು ಕಂಗೊಳಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

ಇವಿಷ್ಟೆದೆ ಅಲ್ಲದೆ ಮೂಡಿಗೆರೆ ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿಯೂ ರಾಮಾಯಣ, ಮಹಾಭಾರತದ ಕಾಲದ ಕಥೆಗಳಿಗೆ ತಳುಕು ಹಾಕುವ ಜಾಗಗಳಿವೆ. ಅಂತಹವುಗಳಲ್ಲಿ ಅದೆಷ್ಟೋ ಹೆಸರುಗಳು ಅದರ ಸ್ಥಳ ಪುರಾಣವನ್ನು ಸಾರುತ್ತಿದೆ. ಆಯಾಯ ಊರಿನಲ್ಲಿರುವ ದೇವ ದೇವತೆಗಳ ಹೆಸರುಗಳು ಆ ಊರಿನ ಹೆಸರುಗಳಾಗಿವೆ. ಒಟ್ಟಾರೆ ಸಂಶೋಧಕರಿಗೆ ಭಾಷಾಶಾಸ್ತ್ರಜ್ಞರಿಗೆ, ಪುರಾತತ್ವ ತಜ್ಞರಿಗೆ ಒಂದಿಲ್ಲೊಂದು ರೀತಿಯಲ್ಲಿ ಹೆಬ್ಬಾಗಿಲನ್ನು ತೆರೆದಿಟ್ಟಿರುವ ಮಹತ್ವದ ಮಾಹಿತಿ ಈ ತಾಲ್ಲೂಕಿನಾದ್ಯಂತ ದೊರೆಯುತ್ತದೆ. ಅವೆಲ್ಲಾ ಅದಷ್ಟು ಬೇಗ ಬಯಲಿಗೆ ಬರಲಿ ಎಂಬುದು ನಮ್ಮ ಆಶಯ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ