ಮಹಾಶಿವರಾತ್ರಿ ಅಂಗವಾಗಿ ಜಿಲ್ಲೆಯ ಎಲ್ಲಾ ಶಿವದೇವಾಲಯಗಳಲ್ಲಿ ವಿವಿಧ ರೀತಿಯ ಧಾರ್ಮಿಕ ಪೂಜಾಕಾರ್ಯಗಳು ನಡೆದಿವೆ. ಭಕ್ತರು ಬೆಳಿಗ್ಗೆಯಿಂದಲೇ ದೇವಾಲಯಗಳಿಗೆ ತೆರಳಿ ಪೂಜಾ ಕಾರ್ಯದಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು. ಅನೇಕ ದೇವಸ್ಥಾನಗಳಲ್ಲಿ ರಾತ್ರಿ ಶಿವಜಾಗರಣೆ ಏರ್ಪಡಿಸಲಾಗಿತ್ತು.
ಮೂಡಿಗೆರೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.
ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಏರ್ಪಡಿಸಲಾಗಿದೆ. ನಿನ್ನೆ ಮೊದಲ ದಿನ ಬೆಳಿಗ್ಗೆಯಿಂದ ವಿವಿಧ ಪೂಜಾ ಕಾರ್ಯಗಳನ್ನು ನಡೆಸಿ ರಾತ್ರಿ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಮತ್ತು ಶಿವಜಾಗರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಧಾರ್ಮಿಕ ಪ್ರವಚನ ಏರ್ಪಡಿಸಲಾಗಿತ್ತು. ಶ್ರೀ ಬೇರುಗಂಡಿ ಮಠದ ಸ್ವಾಮಿಗಲು ಧಾರ್ಮಿಕ ಪ್ರವಚನ ನಡೆಸಿಕೊಟ್ಟರು, ಶ್ರೀ ರಾಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಚಿಪ್ರಗುತ್ತಿ ಆಧ್ಯಾತ್ಮಿಕ ವಿಚಾರಗಳ ವೈಜ್ಞಾನಿಕ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ ಉಪಸ್ಥಿತರಿದ್ದರು. ಸಮಿತಿಯ ಸದಸ್ಯರು, ದೇವರುಂದ ಹಾಗೂ ಸುತ್ತಮುತ್ತಲ ನೂರಾರು ಗ್ರಾಮಸ್ಥರು, ಹೊರಜಿಲ್ಲೆಯ ಭಕ್ತಾಧಿಗಳು ಭಾಗವಹಿಸಿದ್ದರು.
ಮೂಡಿಗೆರೆ ನಂದಗೋಕುಲ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಇಂದು ಮತ್ತು ನಾಳೆಯೂ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ನಾಳೆ ಕ್ಷೇತ್ರದಲ್ಲಿ ದಿವ್ಯ ಮಹರಥೋತ್ಸವ ನಡೆಯಲಿದೆ.



