ಮೂಡಿಗೆರೆ ಪಟ್ಟಣದ ಪೊಲೀಸ್ ಠಾಣೆ ಎದುರು ಆಟೋ ಸ್ಟಾಂಡ್ ನಿರ್ಮಾಣಕ್ಕೆ ತಡೆ ಹಾಕಿದ ಪ.ಪಂ. ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳ ವಿರುದ್ಧ ತಾಲೂಕಿನ ವಿವಿಧ ಆಟೋ ಚಾಲಕರ ಸಂಘದ ಮಾಲೀಕರು ಹಾಗೂ ಚಾಲಕರು ಮಂಗಳವಾರ ಪ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆಟೋ ಚಾಲಕರಿಗೆ ಅನುಕೂಲವಾಗಲೆಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರು ತಮ್ಮ ಎಂಎಲ್‍ಸಿ ಅನುದಾನದಲ್ಲಿ 4.5 ಲಕ್ಷ ಹಣ ಮೀಸಲಿರಿಸಿದ್ದು, ಪ.ಪಂ. ಮುಖ್ಯಾಧಿಕಾರಿ ಮಂಜುನಾಥ್ ಅವರು 19-10-2022ರಿರಲ್ಲಿ ಆಟೋ ಸ್ಟಾಡ್ ನಿರ್ಮಿಸಲು ಅಭ್ಯಂತರವಿರುವುದಿಲ್ಲವೆಂದು ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಅವರೇ ಅಧ್ಯಕ್ಷರಾದ ಜಿ.ಬಿ.ಧರ್ಮಪಾಲ್ ಜೊತೆಸೇರಿ ಆಟೋ ಸ್ಟಾಂಡ್ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಮುಖ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿವರಣೆ ನೀಡಬೇಕು. ಮುಖ್ಯಾಧಿಕಾರಿ ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಅಮರ್‍ನಾಥ್ ಮಾತನಾಡಿ, ಪ.ಪಂ.ಗೆ ಆಟೋ ಸ್ಟಾಂಡ್ ನಿರ್ಮಿಸಲು ಯೋಗ್ಯತೆ ಇಲ್ಲ. ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಆಟೋ ಚಾಲಕರ ಹಿತಕ್ಕಾಗಿ ಆಟೋ ಸ್ಟಾಂಡ್ ನಿರ್ಮಿಸಲು ಅನುದಾನ ನೀಡಿದರೆ, ಅದಕ್ಕೂ ಕಲ್ಲು ಹಾಕಲು ಪ್ರಯತ್ನಿಸಿರುವುದು ಪ.ಪಂ. ಅಧ್ಯಕ್ಷರಿಗೆ ಶೋಭೆ ತರುವುದಿಲ್ಲ. ಆಟೋ ಸ್ಟಾಂಡ್ ನಿರ್ಮಾಣ ಕಾಮಗಾರಿ ತಡೆ ಹಾಕಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಳಿಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ವಿವಿಧ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.




