2(ಬಿ) ಅಡಿಯಲ್ಲಿ ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿಯನ್ನು ಪುನರ್ ಸ್ಥಾಪಿಸುವಂತೆ ಒತ್ತಾಯಿಸಿ ಎಸ್‍ಡಿಪಿಐ ಮುಖಂಡರು ಮೂಡಿಗೆರೆ ಶಿರಸ್ತೇದಾರ್ ಕುಮಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಇತ್ತೀಚೆಗೆ ಸಂಪುಟ ಸಭೆಯಲ್ಲಿ ಮುಸ್ಲಿಂ ಸಮುದಾಯಕ್ಕಿದ್ದ 2(ಬಿ) ಮೀಸಲಾತಿ ರದ್ದುಪಡಿಸಲಾಗಿದೆ. ಇದು ಸಂವಿಧಾನಿಕ ಹಾಗೂ ಒಂದು ನಿರ್ಧಿಷ್ಟ ಸಮುದಾಯವನ್ನು ಗುರಿಯಾಗಿಸಿ ಮಾಡಿರುವ ದಾಳಿಯಾಗಿದೆ. ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲದಿರುವುದರಿಂದ 2(ಬಿ) ಪ್ರವರ್ಗದಡಿ ಇತರೇ ಹಿಂದುಳಿದ ವರ್ಗಗಳಂತೆ ಕರ್ನಾಟಕದ ಮುಸ್ಲಿಂ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವೆಂದು ವೈಜ್ಞಾನಿಕ ಅಧ್ಯಯನದ ಮೂಲಕ ಗುರುತಿಸಿ 2(ಬಿ) ಮೀಸಲಾತಿ ನೀಡಲಾಗಿತ್ತು. ಸ್ವಾತಂತ್ರ್ಯ ನಂತರ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ ಮತ್ತು 1990ರ ಚೆನ್ನಪ್ಪರೆಡ್ಡಿ ಆಯೋಗ ಕೂಡ ಮುಸ್ಲಿಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಲಾಗಿದೆ.
ಹೀಗಿದ್ದರೂ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ತಡೆಯೊಡ್ಡುವ ಹಾಗೂ ಮುಖ್ಯವಾಹಿನಿಗೆ ಬರದಂತೆ ಷಡ್ಯಂತರದ ಭಾಗವಾಗಿ 2(ಬಿ) ಮೀಸಲಾತಿ ರದ್ದುಪಡಿಸಲಾಗಿದೆ. ಸಂವಿಧಾನದ ಆಶಯದಂತೆ ಸರಕಾರ ಆಡಳಿತ ನಡೆಸಬೇಕೆ ಹೊರತು, ಗುಪ್ತ ಅಜೆಂಡ ಜಾರಿಗೊಳಿಸುವುದು ಸರಿಯಲ್ಲ. ಹಾಗಾಗಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಮುಸ್ಲಿಮರ ಹಿತ ದೃಷ್ಟಿಯಿಂದ ಸರಕಾರ ಕರ್ತವ್ಯ ನಿರ್ವಹಿಸಬೇಕೆಂದು ರಾಜ್ಯಪಾಲರು ನಿರ್ದೇಶಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಎಸ್‍ಡಿಪಿಐ ತಾಲೂಕು ಅಧ್ಯಕ್ಷ ಅಂಗಡಿ ಚಂದ್ರು, ಉಪಾಧ್ಯಕ್ಷ ರಿಜ್ವಾನ್ ಪಲ್ಗುಣಿ, ಮುಖಂಡರಾದ ಖಾಲಿದ್, ಶರೀಫ್, ಜಾವಿದ್ ಉಪಸ್ಥಿತರಿದ್ದರು.



