ಮೂಡಿಗೆರೆ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ, ನಿವೃತ್ತ ಶಿಕ್ಷಕ ಕೆ. ಲಕ್ಷ್ಮಣಗೌಡ (90 ವರ್ಷ) ನಿಧನ ಹೊಂದಿದ್ದಾರೆ.
ಲಕ್ಷ್ಮಣಗೌಡರು ಮೂಡಿಗೆರೆ ಪಟ್ಟಣದ ಬಿಳಗುಳ ನಿವಾಸಿಗಳು. ಶಿಕ್ಷಕರಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದ ಇವರು ಉತ್ತಮ ಶಿಕ್ಷಕ ಎಂಬ ಹೆಗ್ಗಳಿಕೆ ಪಡೆದಿದ್ದರು.
ಮೂಡಿಗೆರೆ ಲಯನ್ಸ್ ಸಂಸ್ಥೆಯಲ್ಲಿ ಅನೇಕ ವರ್ಷಗಳ ಕಾಲ ತೊಡಗಿಸಿಕೊಂಡು ಸಂಸ್ಥೆಯ ಅಧ್ಯಕ್ಷರಾಗಿಯೂ ಒಂದು ಅವಧಿಗೆ ಸೇವೆ ಸಲ್ಲಿಸಿದ್ದರು. ವಿವಿಧ ಸಂಘಸಂಸ್ಥೆಗಳ ಮೂಲಕ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಉದ್ದಿಮೆದಾರರಾಗಿಯೂ ಇವರು ಹೆಸರು ಮಾಡಿದ್ದರು. ಬಿಳಗುಳದಲ್ಲಿ ಆಗರಬತ್ತಿ ಉತ್ಪಾದನಾ ಘಟಕವನ್ನು ಪ್ರಾರಂಭಿಸಿ ಪೂಜಾ ಆಗರಬತ್ತಿ ಹೆಸರಿನಲ್ಲಿ ಉತ್ತಮ ಬ್ರಾಂಡ್ ನಿರ್ಮಾಣ ಮಾಡಿದ್ದರು.
ಕೆ. ಲಕ್ಷ್ಮಣಗೌಡರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಲಕ್ಷ್ಮಣಗೌಡರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ ಎಂದು ಅವರ ಪುತ್ರ ಮೂಡಿಗೆರೆ ಜೆ.ಸಿ.ಐ.ನ ಪೂರ್ವಾಧ್ಯಕ್ಷ, ರೋಟರಿ ಸಂಸ್ಥೆ ಹಾಲಿ ಕಾರ್ಯದರ್ಶಿ ಕೆ.ಎಲ್.ಎಸ್. ತೇಜಸ್ವಿಯವರು ತಿಳಿಸಿದ್ದಾರೆ.
ಲಕ್ಷ್ಮಣಗೌಡರ ನಿಧನಕ್ಕೆ ಮೂಡಿಗೆರೆ ಲಯನ್ಸ್, ರೋಟರಿ, ಜೇಸಿಐ, ಬೆಳೆಗಾರರ ಸಂಘ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ತಮ್ಮ ಸಂತಾಪ ಸೂಚಿಸಿದ್ದಾರೆ.



