ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿಯಲ್ಲಿ ಅಡಿಕೆ, ಕಾಳುಮೆಣಸು ಸೇರಿದಂತೆ ವಿವಿಧ ಬೆಳೆಗಳಿಗೆ ಪ್ರಿಮಿಯಂ ಮೊತ್ತ ಪಾವತಿಸಲು ತೋಟಗಾರಿಕಾ ಇಲಾಖೆ ಪ್ರಕಟಣೆ ಹೊರಡಿಸಿದೆ.
ಈ ಹಿಂದೆ ಕೇವಲ ಐದು ಜಿಲ್ಲೆಗಳಿಗೆ ಮಾತ್ರ ಯೋಜನೆಯಡಿಯಲ್ಲಿ ವಿಮಾ ಕಂತು ಪಾವತಿಸಲು ಪ್ರಕಟಣೆ ಹೊರಡಿಸಲಾಗಿತ್ತು.
ಇದೀಗ ರಾಜ್ಯದ 23 ಜಿಲ್ಲೆಗಳಿಗೆ ಸಂಬಂಧಿಸಿದಂತೆ ತೋಟಗಾರಿಕಾ ಇಲಾಖೆ ವಿಮಾ ಕಂತು ಪಾವತಿಸಲು ಪ್ರಕಟಣೆ ಹೊರಡಿಸಿದೆ.
ಚಿಕ್ಕಮಗಳೂರು ಜಿಲ್ಲೆಗೆ ಅಡಿಕೆ, ಕಾಳುಮೆಣಸು, ಹಸಿಮೆಣಸಿನ ಕಾಯಿ, ಮಾವು ಬೆಳೆಗಳಿಗೆ ವಿಮಾ ಕಂತು ಪಾವತಿಸಲು ಅವಕಾಶ ನೀಡಿದೆ.
ನಿನ್ನೆ ಅಂದರೆ ಜುಲೈ 19ರಂದು ಕರ್ನಾಟಕ ಸರ್ಕಾರದ ತೋಟಗಾರಿಕಾ ಇಲಾಖೆಯಿಂದ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. 2023-24 ನೇ ಸಾಲಿನ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆಗೆ ಸಂಬಂಧಿಸಿದಂತೆ ಒಟ್ಟು ವಿಮಾ ಮೊತ್ತ ಮತ್ತು ರೈತರು ಪಾವತಿಸಬೇಕಾದ ವಿಮಾ ಕಂತುಗಳ ವಿವರ ಪ್ರಕಟಿಸಿದೆ.
ವಿಮಾ ಕಂತುಗಳನ್ನು ಪಾವತಿ ಮಾಡಲು ಜುಲೈ 31 ಕೊನೆಯ ದಿನಾಂಕವೆಂದು ತಿಳಿದುಬಂದಿದೆ. ರೈತರು ತಮ್ಮ ವ್ಯಾಪ್ತಿಯ ಸಹಕಾರ ಸಂಘಗಳಲ್ಲಿ, ಬ್ಯಾಂಕುಗಳ ಮೂಲಕ ವಿಮಾಕಂತು ಪಾವತಿಸಬಹುದಾಗಿದೆ.
ತೋಟಗಾರಿಕಾ ಇಲಾಖೆ ಪ್ರಕಟಿಸಿರುವ ಬೆಳೆವಿಮೆ ಮೊತ್ತ ಮತ್ತು ರೈತರು ಪಾವತಿಸಬೇಕಾಗಿ ವಿಮಾಕಂತಿನ ವಿವರ ಈ ಕೆಳಗಿನಂತಿದೆ.
ಅಡಿಕೆ ಬೆಳೆಗೆ ಒಂದು ಹೆಕ್ಟೇರ್ ಗೆ ರೂ.6400-00, ಎಕರೆಗೆ ರೂ.2560-00 ಕಾಳುಮೆಣಸಿಗೆ ಹೆಕ್ಟೇರ್ ಗೆ ರೂ. 2350-00, ಎಕರೆಗೆ 940-00 ರೂ. ರೈತರ ಪಾಲಿನ ವಿಮಾ ಕಂತು ನಿಗದಿಮಾಡಲಾಗಿದೆ.
ಸದುಪಯೋಗಪಡಿಸಿಕೊಳ್ಳಲು ಬೆಳೆಗಾರರ ಸಂಘ ಮನವಿ :

ಬೆಳೆವಿಮೆ ಸೌಲಭ್ಯವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮನವಿ ಮಾಡಿದ್ದಾರೆ. ಅವರು ಈ ಬಗ್ಗೆ ಹೇಳಿಕೆ ನೀಡಿದ್ದು ಜುಲೈ 31 ಕೊನೆಯ ದಿನವಾಗಿದೆ. ರೈತರು ಕೊನೆ ದಿನದ ವರೆಗೆ ಕಾಯದೇ ಆದಷ್ಟು ಬೇಗ ವಿಮಾ ಕಂತು ಕಟ್ಟುವುದು ಒಳ್ಳೆಯದು.
ಕಳೆದ ಕೆಲವು ವರ್ಷಗಳಿಂದ ಬೆಳೆವಿಮೆ ಕಟ್ಟಿದ ರೈತರಿಗೆ ಅನುಕೂಲವಾಗಿದೆ. ಈಗ ಕಟ್ಟುವ ವಿಮೆಗೆ ಆಗಸ್ಟ್ ಒಂದರಿಂದ ಬರುವ ಮಳೆಯ ಪ್ರಮಾಣ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಆಗಸ್ಟ್ ತಿಂಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿ ಬೀಳುತ್ತಿದೆ. ಆದ್ದರಿಂದ ಬೆಳೆವಿಮೆ ಕಟ್ಟುವುದರಿಂದ ರೈತರು ನಷ್ಟವನ್ನು ಭರಿಸಿಕೊಳ್ಳಲು ಸಹಾಯಕವಾಗಬಹುದು ಎಂದು ಅವರು ತಿಳಿಸಿದ್ದಾರೆ.






