ಕಾಡು ಹಂದಿಯೊಂದು ದಾಳಿ ನಡೆಸಿದ್ದರಿಂದ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಇತರ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಬಳಿಕ ಕಾಡು ಹಂದಿಗೆ ಗುಂಡಿಕ್ಕಿ ಹತ್ಯೆ ಮಾಡಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ರಾಜೇಗೌಡ ಹಾಗೂ ಅವರ ಪತ್ನಿ ಹೊಲದಲ್ಲಿ ಇತರ ಇಬ್ಬರು ಮಹಿಳೆಯರೊಂದಿಗೆ ಕೆಲಸ ಮಾಡುತ್ತಿದ್ದಾಗ ಹಠಾತ್ ಕಾಡು ಹಂದಿ ದಾಳಿ ನಡೆಸಿದಾಗ ತೀವ್ರವಾಗಿ ಗಾಯಗೊಂಡು ವ್ಯಕ್ತಿ ಸಾವನ್ನಪ್ಪಿದ್ದಾರೆ. ಅವರನ್ನು ರಕ್ಷಿಸಲು ಪ್ರಯತ್ನಿಸಿ ತೀವ್ರವಾಗಿ ಗಾಯಗೊಂಡ ಅವರ ಪತ್ನಿ ಶಾಂತಮ್ಮ ಹಾಗೂ ಮಹಿಳೆ ನಂಜಮ್ಮ ಅವರನ್ನು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ನಂತರ ಹಾಸನ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಹಂದಿ ಇತರರ ಮೇಲೆ ದಾಳಿ ಮಾಡದಂತೆ ನಿಯಂತ್ರಿಸಲು ಸ್ಥಳೀಯರು ದೊಣ್ಣೆಯಿಂದ ಹೊಡೆದಿದ್ದಾರೆ. ಆದರೂ ಪ್ರಯೋಜನವಾಗಲಿಲ್ಲ. ಇತರ ಮೇಲೂ ದಾಳಿ ನಡೆಸುತಿತ್ತು. ಇದರಿಂದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಂದೂಕಿನಿಂದ ಕಾಡು ಹಂದಿಯನ್ನು ಹೊಡೆದುರುಳಿಸಿದರು ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಹೇಳಿದರು.
ಬೇಲೂರಿನಲ್ಲಿಯೂ ಮಹಿಳೆ ಮೇಲೆ ಕಾಡುಹಂದಿಗಳ ಗುಂಪು ದಾಳಿ
ಹಾಸನದ ಬೇಲೂರು ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಘಟನೆ ಮಹಿಳೆ ಮೇಲೆ ಐದಾರು ಕಾಡು ಹಂದಿಗಳು ದಾಳಿ ಮಾಡಿವೆ. ಚಂದ್ರಕಲಾ (55) ಎಂಬುವವರು ಕಾಡು ಹಂದಿ ದಾಳಿಯಿಂದ ಗಾಯಗೊಂಡಿದ್ದಾರೆ.
ಚಂದ್ರಕಲಾ ಜಮೀನಿನ ಕೆಲಸಕ್ಕೆ ತೆರಳಿದಾಗ ಏಕಾಏಕಿ ಐದಾರು ಕಾಡು ಹಂದಿಗಳು ದಾಳಿ ಮಾಡಿವೆ. ಈ ವೇಳೆ ಚಂದ್ರಕಲಾ ಚಿರಾಟ ಕೇಳಿ, ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಕಾಡುಹಂದಿಗಳನ್ನು ಓಡಿಸಿ, ರಕ್ಷಿಸಿದ್ದಾರೆ. ಕೈ ಮತ್ತು ಕಾಲು ಭಾಗಗಳಲ್ಲಿ ಗಂಭೀರವಾದ ಗಾಯವಾಗಿದ್ದು, ಬೇಲೂರಿನ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹಾಸನದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.



