ಇನಾಂ ದತ್ತಾತ್ರೇಯ ಪೀಠದಲ್ಲಿ ಡಿಸೆಂಬರ್ 17ರಿಂದ 26ರವರೆಗೆ ದತ್ತಜಯಂತಿ ನಡೆಯುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದತ್ತಪೀಠದ ಅರ್ಚಕರು ಮತ್ತು ಬಾಬಾಬುಡನ್ ದರ್ಗಾದ ಮುಜಾವರ್ ಸೇರಿದಂತೆ ಐವರಿಗೆ ಪೊಲೀಸ್ ಇಲಾಖೆ ಗನ್ ಮ್ಯಾನ್ ನೇಮಕ ಮಾಡಿದೆ.
ದತ್ತಪೀಠದಲ್ಲಿ ಈ ಬಾರಿ ಹೋಮ ನಡೆಸಲು ಅವಕಾಶ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಮುಸ್ಲಿಮರು ತಮಗೆ ನಮಾಜ್ ಮಾಡಲು ಅವಕಾಶ ಕೊಡಿ ಎಂದು ಕೂಡಾ ಆಗ್ರಹಿಸಿದ್ದಾರೆ. ರಾಜ್ಯದಾದ್ಯಂತ ಸಾವಿರಾರು ಜನರು ಮಾಲಾ ಧಾರಣೆ ಮಾಡುವ ಸಾಧ್ಯತೆ ಇದೆ. ಮಾಜಿ ಸಚಿವ ಸಿ.ಟಿ.ರವಿಯವರು ಮಾಲಾಧಾರಣೆ ಮಾಡಿದ್ದು, ಅತ್ತ ಈಗ ಬಿಜೆಪಿ ಜತೆ ಕೈಜೋಡಿಸಿರುವ ಜೆಡಿಎಸ್‌ನ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಾನು ದತ್ತ ಮಾಲೆ ಹಾಕಲು ಸಿದ್ಧ ಎಂದು ಘೋಷಿಸಿದ್ದಾರೆ.
ಈ ಎಲ್ಲ ಕಾರಣಗಳಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಬಿಗಿಬಂದೋಬಸ್ತ್ ಏರ್ಪಡಿಸಿದೆ. ಚಿಕ್ಕಮಗಳೂರು ಪ್ರವಾಸ ಮುಂದೂಡಿ ಎಂದು ಪ್ರವಾಸಿಗರಿಗೆ ಸೂಚನೆ ನೀಡಿದೆ. ಡಿಸೆಂಬರ್ 26 ರವರೆಗೆ ಗಿರಿ ಪ್ರದೇಶಗಳಿಗೆ ಪ್ರವಾಸಿಗರಿಗೆ ನಿಷೇದ ಹೇರಿದೆ. ಇದರ ಮುಂದಿನ ಭಾಗವಾಗಿ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದೇವಸ್ಥಾನ/ ದರ್ಗಾದ ನಿತ್ಯ ಕಾಯಕ ಮಾಡುವವರಿಗೆ ಭದ್ರತೆ ನೀಡಲಾಗಿದೆ.
ಇಬ್ಬರು ಅರ್ಚಕರಾದ ಶ್ರೀಧರ್ ಪೂಜಾರ್, ಶಿವರಾಮ್, ವ್ಯವಸ್ಥಾಪನ ಸಮಿತಿಯ ಮುಸ್ಲಿಂ ಸದಸ್ಯ ಎಸ್.ಎಂ ಬಾಷಾ, ಇಬ್ಬರು ಮುಜಾವರ್‌ಗಳಾದ ಸೈಯದ್ ಅಖಿಲ್ ಪಾಷ ಹಾಗೂ ಇಸ್ಮಾಯಿಲ್ ಅವರಿಗೆ ಗನ್ ಮ್ಯಾನ್ ಭದ್ರತೆ ನೀಡಲಾಗಿದೆ. 15 ದಿನಗಳ ಕಾಲ ಐವರ ಭದ್ರತೆಗಾಗಿ ಅಂಗರಕ್ಷಕರ ನೇಮಕ ಮಾಡಲಾಗಿದೆ.
ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಅವರು ಈ ಆದೇಶ ನೀಡಿದ್ದು, ಮುಂದಿನ ಹದಿನೈದು ದಿನಗಳ ಕಾಲ ದಿನದ 24 ಗಂಟೆಗಳ ಕಾಲವೂ ಐವರಿಗೆ ಭದ್ರತೆ ನೀಡುವಂತೆ ಸೂಚನೆ ನೀಡಲಾಗಿದೆ.



