ಮೂಡಿಗೆರೆ ಪಟ್ಟಣದ ಶ್ರೀ ವೇಣುಗೋಪಾಲ ದೇವಸ್ಥಾನದಲ್ಲಿ ಡಿಸೆಂಬರ್ 23 ಮತ್ತು 24ರಂದು ಶ್ರೀ ಶ್ರೀನಿವಾಸ ವೈಕುಂಠ ಏಕಾದಶಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟಿನ ಉಪಾಧ್ಯಕ್ಷ ಕೆ.ವೆಂಕಟೇಶ್ ಹೇಳಿದರು.
ಅವರು ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.23ರಂದು ವೈಕುಂಠ ಏಕಾದಶಿ ಪ್ರಯುಕ್ತ ಬೆಳಗ್ಗೆ ಶ್ರೀ ಕೃಷ್ಣ ಪರಮಾತ್ಮನಿಗೆ ಶಂಖಧಾರ, ಚಕ್ರಧಾರ ಅಭಿಷೇಕ ನೆರವೇರಿದ ಬಳಿಕ ಸರ್ವಾಲಂಕಾರದೊಂದಿಗೆ ಬೆಳಗ್ಗೆ 5 ಗಂಟೆಗೆ ವೈಕುಂಠದ್ವಾರ ಪ್ರವೇಶ, ಸಂಜೆ 6 ಗಂಟೆಗೆ ಶ್ರೀ ವೇಣುಗೋಪಾಲಸ್ವಾಮಿ, ಶ್ರೀ ಮಹಾಲಕ್ಷ್ಮಿ, ಶ್ರೀ ಮಹಾ ಗಣಪತಿ ರಂಗಪೂಜೆಯೊಂದಿಗೆ ಸಹಸ್ರನಾಮ ಪೂರ್ವಕ ತುಳಸಿ ಅರ್ಚನೆ, ಅಷ್ಟಾವಧಾನ ಸೇವೆ, ಸರ್ವವಾದ್ಯದೊಂದಿಗೆ ಮಹಾ ಮಂಗಳಾರತಿ ನಂತರ ಪ್ರಸಾಧ ವಿನಿಯೋಗ ನಡೆಯಲಿದೆ ಎಂದು ಹೇಳಿದರು.

ಡಿ.24ರಂದು ಬೆಳಗ್ಗೆ ಶ್ರೀ ಆಂಜನೇಯ ಜಯಂತಿ ಮತ್ತು ಶ್ರೀ ಶ್ರೀನಿವಾಸ ತಿರು ಕಲ್ಯಾಣೋತ್ಸವ, ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಲಾಸಾನಿಧ್ಯ ಹೋಮ, ಮಧ್ಯಾಹ್ನ 12 ಗಂಟೆಗೆ ಕಲಶಾಭಿಷೇಕದ ನಂತರ ಮಹಾ ಮಂಗಳಾರತಿ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ ಮಂಗಳದ್ರವ್ಯ ಮತ್ತು ಸರ್ವ ವಾದ್ಯದೊಂದಿಗೆ ಉತ್ಸವ. ನಂತರ ಅಷ್ಠಾವಧಾನ ಸೇವೆ, ಮಹಾ ಮಂಗಳಾರತಿ, ಪ್ರಸಾಧ ವಿನಿಯೋಗ ನಡೆಯಲಿದೆ. ಈ ಎಲ್ಲಾ ಪೂಜಾ ಕಾರ್ಯಗಳಿಗೆ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಬೇಕಂದು ಮನವಿ ಮಾಡಿದರು.
ಈ ದೇವಸ್ಥಾನ ಮುಜರಾಯಿಗೆ ಸೇರಿದ್ದರೂ ಸರಕಾರದ ಅನುದಾನ ಶೂನ್ಯ. ದೇವಸ್ಥಾನ ಅಭಿವೃದ್ಧಿಗೆ ಹಿಂದಿನ ಶಾಸಕ ಎಂ.ಪಿ.ಕುಮಾರಸ್ವಾಮಿ 5 ಲಕ್ಷ ರೂ, ಉಪಸಭಾಪತಿ ಎಂ.ಕೆ.ಪ್ರಾಣೇಶ್ 2 ಲಕ್ಷ, ಹಿಂದಿನ ಪ.ಪಂ. ಅಧ್ಯಕ್ಷ ಧರ್ಮಪಾಲ್ ಅವರು 2 ಲಕ್ಷ ಅನುದಾನ ನೀಡಿದ್ದರು. ಜತೆಗೆ ದಾನಿಗಳ ಸಹಕಾರದಿಂದ ಇಂಟರ್‍ಲಾಕ್, ಬೋರ್‍ವೆಲ್, ಅಡುಗೆ ಮನೆ, ವಿನೂತನ ಶೈಲಿನ ಮದುವೆ ಮಂಟಪ ನಿರ್ಮಿಸಲಾಗಿದೆ. ಇಲ್ಲಿ ಕೃಷ್ಣಾಷ್ಟಮಿ, ಸತ್ಯನಾರಾಯಣ ಪೂಜೆ, ಆಂಜನೇಯ ಜಯಂತಿ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಲೋಕ ಹಾಗೂ ಊರಿನ ಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ವೈಕುಂಠ ಏಕಾದಶಿ ಕಾರ್ಯಕ್ರಮ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಈ ಬಾರಿಯೂ 4ರಿಂದ 5 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಟ್ರಸ್ಟಿ ಕಾರ್ಯದರ್ಶಿ ಕುಮಾರ್, ಟ್ರಸ್ಟಿನ ಸದಸ್ಯರಾದ ವೆಂಕಟೇಶ್ ಉದುಸೆ, ಕೆ.ಎಸ್.ನಾಗರಾಜ್ ಕಂಠಿ, ಉಮಾಶಂಕರ್, ರಂಗನಾಥ್, ಅರ್ಚಕ ಮಹಾಬಲ ಕಾರಂತ್ ಉಪಸ್ಥಿತರಿದ್ದರು.



