ಯುವಜನತೆ ಸನ್ಮಾರ್ಗದಲ್ಲಿ ನಡೆದರೆ ದೇಶವನ್ನು ಉತ್ತಮ ಸಂಸ್ಕೃತಿಯಿಂದ ಶ್ರೀಮಂತಗೊಳಿಸಲು ಸಾಧ್ಯವಾಗುತ್ತದೆ, ಯುವಜನತೆ ದೇಶಕ್ಕೆ ಆಧಾರ ಸ್ತಂಭವಿದ್ದಂತೆ ಎಂದು ಬಣಕಲ್ ಜೆಸಿಐ ವಿಸ್ಮಯ ಸ್ಥಾಪಕ ಅಧ್ಯಕ್ಷ ಸುರೇಶ್ ಎಸ್.ಶೆಟ್ಟಿ ಹೇಳಿದರು.
ಅವರು ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ತರುವೆ ಏಕಲವ್ಯ ವಸತಿ ಶಾಲೆಯಲ್ಲಿ ರಾಷ್ಟ್ರೀಯ ಯುವದಿನ, ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ‘ಪ್ರೌಢಾವಸ್ಥೆಯಲ್ಲಿ ನಾವು ಸರಿಯಾದ ಹೆಜ್ಜೆ ಇಟ್ಟು ನಡೆದರೆ ಭಾರತ ಮೆಚ್ಚಿಸುವ ಕೆಲಸ ನಮ್ಮಿಂದ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಜೀವನ ಚಿನ್ನದಂತಿರುವಾಗ ಚಿನ್ನದಂತಹ ಸಾಧನೆ ಮಾಡಲು ಸಾಧ್ಯ. ಒಳ್ಳೆಯದು ಕೆಟ್ಟದ್ದು ನಮ್ಮ ಮನಸ್ಥಿತಿಯಲ್ಲೇ ಇದೆ’ ಎಂದರು.
ಪೂರ್ವಾಧ್ಯಕ್ಷ ರವಿಪಟೇಲ್ ಕೂವೆ ಮಾತನಾಡಿ ‘ಸ್ವಾಮಿ ವಿವೇಕಾನಂದರು, ಅಬ್ದುಲ್ ಕಲಾಂ ಯುವಕರಿಗೆ ಮಾದರಿಯಾಗಿದ್ದಾರೆ. ವಿವೇಕಾನಂದರ ದೇಶ ಪರ್ಯಟನೆ ಮಾಡಿ ಭಾರತೀಯ ಆಚಾರ, ವಿಚಾರ, ಸಂಸ್ಕೃತಿಯನ್ನು ಇಡೀ ಪ್ರಪಂಚಕ್ಕೆ ಸಾರಿದರು. ಅವರ ದೇಶಭಕ್ತಿಯ ಗುಣ ನಾವು ಅಳವಡಿಸಿಕೊಂಡು ದೇಶಕ್ಕೆ ಒಳಿತಾಗುವ ಕೆಲಸ ಮಾಡಬೇಕು. ಸದೃಢ ಬಲಿಷ್ಠ ದೇಶವಾಗಲು ಯುವಪೀಳಿಗೆ ಬದಲಾಗಬೇಕು’ ಎಂದರು.
ಜೆಸಿಐ ವಿಸ್ಮಯ ಅಧ್ಯಕ್ಷ ಮದನ್ ಹೆಗಡೆ ದೇವರಮನೆ ಮಾತನಾಡಿ ‘ ಇಂದಿನ ಯುವಕರು ಜೇಸಿಐನಂತಹ ಸಂಘ ಸಂಸ್ಥೆಗಳಿಗೆ ಸೇರಿ ವ್ಯಕ್ತಿತ್ವ ವಿಕಸನ ಹೊಂದಬೇಕು. ಜೇಸಿಐ ಎಂತಹ ವ್ಯಕ್ತಿಗೂ ವಿಕಸನಗೊಳಿಸಿ ವೇದಿಕೆ ಕಲ್ಪಿಸಲು ಸಹಕಾರಿಯಾಗಿದೆ’ ಎಂದರು. ಮಧುರಾ ಕವೀಶ್, ಅಕ್ಷತಾ ಮಧನ್ ವ್ಯಕ್ತಿತ್ವ ವಿಕಸನ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು.
ಸಮಾರಂಭದಲ್ಲಿ ಸ್ಥಳೀಯ ಯುವ ಪತ್ರಕರ್ತರಾದ ಅನಿಲ್ ಮೊಂತೆರೊ, ಸಂತೋಷ್ ಅತ್ತಿಗೆರೆ, ತನುಕೊಟ್ಟಿಗೆಹಾರ, ಶಿಕ್ಷಕಿ ವೀಣಾ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೇಸಿರೇಟ್ ಅಧ್ಯಕ್ಷೆ ಅಕ್ಷತಾ, ಪ್ರಾಂಶುಪಾಲ ಬಿ.ಟಿ.ವೆಂಕಟೇಶ್, ಜೇಸಿರೇಟ್ ಪೂರ್ವಾಧ್ಯಕ್ಷೆ ಮಧುರ ಕವೀಶ್, ಕಾರ್ಯದರ್ಶಿ ಅರವಿಂದ ಕೋಳೂರು, ಜೇಸಿರೇಟ್ ಕಾರ್ಯದರ್ಶಿ ತೀರ್ಥ ಅರವಿಂದ್, ಜೂನಿಯರ್ ಜೇಸಿ ಅಧ್ಯಕ್ಷ ಗೌರವ್ ಹೆಗಡೆ ಇದ್ದರು.



