ವಿದ್ಯೆ ಅಭ್ಯಾಸಿಗಳ ಸೊತ್ತೆ ಹೊರತು ಸೋಮಾರಿಯದಲ್ಲ. ವಿದ್ಯೆ, ಬುದ್ಧಿ, ಭಾವ, ಆತ್ಮವನ್ನು ವಿಕಸಿತಗೊಳಿಸಬೇಕು ಎಂದು ಸಾಹಿತಿ ಚಟ್ನಳ್ಳಿಮಹೇಶ್ ನುಡಿದರು.
ಕರ್ನಾಟಕರಾಜ್ಯ ಸರ್ಕಾರಿ ನೌಕರರಸಂಘದ ಜಿಲ್ಲಾಶಾಖೆ ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ವ್ಯಕ್ತಿತ್ವ ವಿಕಸನ’ ಕಾರ್ಯಾಗಾರದಲ್ಲಿ ಶನಿವಾರ ಅವರು ವಿಶೇಷ ಉಪನ್ಯಾಸ ನೀಡಿದರು.
ಪರಿಶ್ರಮ, ತರಬೇತಿ, ಸತತ ಅಭ್ಯಾಸ, ಮನನ ಪ್ರಕ್ರಿಯೆಯಿಂದ ವಿದ್ಯೆಯನ್ನು ನಮ್ಮದಾಗಿಸಿಕೊಳ್ಳಬಹುದು. ಸರ್ವಾಂಗೀಣ ವಿಕಾಸಕ್ಕೆ ವಿದ್ಯೆ ಸಹಕಾರಿಯಾಗಬೇಕು. ಆದರೆ ಇಂದು ಓದು ನಿರೀಕ್ಷಿತ ಗುರಿ ಮುಟ್ಟಿದೆಯಾ ಎಂದು ಪ್ರಶ್ನಿಸಿಕೊಂಡಾಗ ನಿರಾಸೆಯಾಗುತ್ತದೆ. ಅಕ್ಷರವಂತರ, ಪದವೀಧರರ ಸಂಖ್ಯೆ ಎಲ್ಲೆಡೆಯೂ ಹೆಚ್ಚುತ್ತಿದೆ. ಅದೇರೀತಿ ಸಮಾಜದಲ್ಲಿ ಅನ್ಯಾಯ, ಅನೀತಿ, ದೌರ್ಜನ್ಯ, ಅಸಹನೆಯೂ ವಿಪರೀತವಾಗುತ್ತಿದೆ. ನಾವು ಕೊಡುತ್ತಿರುವ ಶಿಕ್ಷಣ ಏನಾಗುತ್ತಿದೆ ಎಂಬುದು ವಿಮರ್ಶೆಗೊಳಪಡಿಸುವ ಅನಿವಾರ್ಯತೆ ಇದೆ ಎಂದರು.
ಶಿಕ್ಷಣ ಮನಸ್ಸನ್ನು ಅರಳಿಸುವುದರೊಂದಿಗೆ ಪ್ರೀತಿ-ವಿಶ್ವಾಸ-ತ್ಯಾಗ-ಸದ್ಭಾವ-ಸಹಕಾರ-ಕರುಣೆಯಂತಹ ಮೌಲ್ಯಗಳನ್ನು ಕಟ್ಟಿಕೊಟ್ಟಾಗ ಮಾತ್ರ ಆರೋಗ್ಯಪೂರ್ಣ ಸಮಾಜ ನಮ್ಮದಾಗುತ್ತದೆ. ಬಾಲ್ಯ ಮತ್ತು ತಾರುಣ್ಯದಲ್ಲಿ ಎಲ್ಲರೂ ಓದಿನ ಕಡೆಗೆ ಹೆಚ್ಚಿನ ಗಮನಕೊಡಬೇಕು. ಪರಿಶ್ರಮವಿಲ್ಲದೆ ಯಾವುದೂ ದಕ್ಕುವುದಿಲ್ಲ ಎಂದ ಚಟ್ನಳ್ಳಿಮಹೇಶ್, ‘ವಚಿಸಿ ಅಭ್ಯಾಸಿಯಾಗದವ ಪಿಶಾಚಿ, ವಚಿಸಿ ಅಭ್ಯಾಸಿಯಾದವ ಪಂಡಿತ’ ಎಂಬ ವಚನವನ್ನು ಉಲ್ಲೇಖಿಸಿದರು.
ಇತಿಹಾಸ ಓದುವುದು ಇಸ್ವಿಗಳನ್ನು ನೆನಪಿಟ್ಟುಕೊಳ್ಳಲು ಅಲ್ಲ, ಇತಿಹಾಸ ನಿರ್ಮಿಸಲು. ವಿಜ್ಞಾನ ಕಲಿಯುವುದು ವಿನಾಶಕ್ಕಲ್ಲ, ವಿಕಾಸಕ್ಕೆ ಎಂಬುದನ್ನು ಮರೆಯಬಾರದು. ಉನ್ನತ ಶಿಕ್ಷಣಪಡೆದವರು ಇಂದು ದುಷ್ಕೃತ್ಯ ದಲ್ಲಿ ಪಾಲ್ಗೊಳ್ಳುತ್ತಿರುವುದು ದುರ್ದೈವ ಸಂಗತಿ. ಆಂತರಿಕ ಮತ್ತು ಬಹಿರಂಗ ವಿಕಾಸಕ್ಕೆ ಕಲಿಕೆ ಪ್ರೇರಕ-ಪೂರಕವಾಗಬೇಕೆಂದು ಅಭಿಪ್ರಾಯಿಸಿದರು.
ಸರ್ಕಾರಿ ನೌಕರರಾಗಿರುವುದು ಅದೃಷ್ಟ. ಈ ಅವಕಾಶವನ್ನು ಬಳಸಿಕೊಂಡು ಜನಸಾಮಾನ್ಯರಿಗೆ ಒಳಿತನ್ನು ಮಾಡಬೇಕು. ಕಾನೂನು ರಚನೆಗೊಂಡಿರುವುದು ಜನಹಿತಕ್ಕೆ ಎಂಬುದನ್ನು ಮರೆಯಬಾರದು. ಬುದ್ಧಿಗಿಂತ ಹೃದಯಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಜನಮುಖಿ ನೌಕರರೆನಿಸಿಕೊಳ್ಳಬಹುದು. ಸಮಸ್ಯೆಯಿಂದಲೇ ಹುಟ್ಟಿಬೆಳೆದು ಸಮಸ್ಯೆಯಿಂದಲೇ ಕೊನೆಗೊಳ್ಳುವುದು ಸರ್ಕಾರಿ ಉದ್ಯೋಗ ಎಂದರು.
ಪ್ರತಿಯೊಬ್ಬ ನೌಕರರದಾರನು ತನ್ನ ಸೇವಾವಧಿಯ ಪ್ರಮುಖ ಘಟನೆ, ಅನುಭವಗಳನ್ನು ದಾಖಲಿಸಿದರೆ ಮುಂದಿನವರಿಗೆ ಮಾರ್ಗದರ್ಶಿಯಾಗುತ್ತದೆ. ಬರುವ ಅರ್ಜಿಯನ್ನು ಹೃದಯದಿಂದ ನೋಡಿ ಕಾನೂನನ್ನು ಬಳಸಿಕೊಂಡು ಹೇಗೆ ಸಹಾಯ ಮಾಡಬೇಕು ಎಂದು ಆಲೋಚಿಸಬೇಕೆ ಹೊರತು, ಕೊಕ್ಕೆಹಾಕುವ ಅಭ್ಯಾಸ ಒಳ್ಳೆಯದಲ್ಲ ಎಂದು ಕಿವಿಮಾತು ಹೇಳಿದ ಚಟ್ನಳ್ಳಿಮಹೇಶ್, ದೊರೆತ್ತಿರುವ ಅವಕಾಶವನ್ನು ಜನಸೇವೆಗೆ ಸಾರ್ಥಕಪಡಿಸಕೊಂಡರೆ ಒಳಿತು. ನಗುಮುಖ ಮತ್ತು ಮೃದುಮಾತು ನೌಕ-ಅಧಿಕಾರಿಯದ್ದಾದರೆ ನೆನಪುಗಳನ್ನು ದೀರ್ಘಾವಧಿ ಬಿಟ್ಟು ಹೋಗಬಹುದೆಂದರು.
ಎಐಟಿಪ್ರಾಂಶುಪಾಲ ಡಾ.ಜಯದೇವ್, ಸರ್ಕಾರಿನೌಕರರ ಸಂಘದ ದೇವೆಂದ್ರ ಅಧ್ಯಕ್ಷತೆವಹಿಸಿದ್ದರು. ರಾಜ್ಯಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಮಾಧ್ಯಮಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ವೇದಿಕೆಯಲ್ಲಿದ್ದರು.
ರಾಜ್ಯ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ ತಿಮ್ಮೇಗೌಡ, ರುದ್ರಪ್ಪ, ವೆಂಕಟೇಶ್, ಮೋಹನ್, ಹಾಸನ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ಚಿಕ್ಕಮಗಳೂರು ಜಿಲ್ಲಾಶಾಖೆಯ ಗೌರವಾಧ್ಯಕ್ಷ ಮಂಜುನಾಥಸ್ವಾಮಿ ಕಾರ್ಯಾಧ್ಯಕ್ಷ ದೇವಾನಂದ, ಪದಾಧಿಕಾರಿಗಳಾದ ಮಾರುತಿಪ್ರಸಾದ್, ಡಾ.ಜಗದೀಶ್, ಪೂರ್ಣೇಶ್, ಮತ್ತಿತರರು ಭಾಗವಹಿಸಿದ್ದರು.



