ಮಲೆನಾಡಿನ ಎಲ್ಲಾ ಧರ್ಮೀಯ ತುಳು ಭಾಷಿಗರು ಒಂದೆಡೆ ಸೇರಿ ತುಳುಕೂಟ ರಚಿಸಿ ಕಳೆದ 14 ವರ್ಷದಿಂದ ತುಳು ವೈಭವೋ ಕಾರ್ಯಕ್ರಮ ಯಶಸ್ವಿಯಾಗಿ ಪೂರೈಸಿದ್ದು, ಈ ಬಾರಿಯೂ ಕೂಡ ಎಲ್ಲಾ ತುಳು ಭಾಷಿಗರನ್ನು ಒಗ್ಗೂಡಿಸುವ ಸಲುವಾಗಿ 15 ನೇ ವರ್ಷದ ತುಳು ವೈಭವೋ ಕಾರ್ಯಕ್ರಮವನ್ನು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಫೆ.23ರಂದು ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ತುಳುಕೂಟದ ಅಧ್ಯಕ್ಷ ವಿನೋಧ್‍ಕುಮಾರ್ ಶೆಟ್ಟಿ ಹೇಳಿದರು.
ಅವರು ಮಂಗಳವಾರ ಪಟ್ಟಣದಲ್ಲಿ ತುಳು ವೈಭವೋ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 14 ವರ್ಷದಿಂದ ತುಳುಕೂಟ ರಚಿಸಿ ಪ್ರತಿ ವರ್ಷ ಸಮಾಜಮುಖಿ ಕೆಲಸ ನಿರ್ವಹಿಸಿಕೊಂಡು ಬರುವ ಮೂಲಕ ಭಾಷೆ ಬೆಳವಣಿಗೆಗೆ ಉತ್ತೇಜನ ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಒತ್ತಾಯಿಸುವ ಮೂಲಕ ಯುವ ಜನಾಂಗಕ್ಕೆ ಸಂಸ್ಕಾರದೆಡೆಯಲ್ಲಿ ಸಾಗಿಸಲು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಅಂದು ಸಂಜೆ 4 ಗಂಟೆಗೆ ಸ್ಥಳೀಯ ಕಲಾವಿದರಿಂದ ನೃತ್ಯ ಹಾಗೂ ಹಾಸ್ಯ ಕಾರ್ಯಕ್ರಮ, 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಶಾಸಕಿ ನಯನಾ ಮೋಟಮ್ಮ ವಹಿಸಲಿದ್ದಾರೆ. ಉದ್ಘಾಟನೆ ಹಾಗೂ ಮುಖ್ಯ ಭಾಷಣಕಾರರಾಗಿ ಉಜಿರೆಯ ಎಸ್‍ಡಿಎಂ ಎಂಜಿನಿಯರ್ ಕಾಲೇಜಿನ ಉಪನ್ಯಾಸಕ ಡಾ.ರವೀಶ್ ಪಡುಮಲೆ, ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಚಿಕ್ಕಮಗಳೂರು ಸಂತ ಜೋಸಫರ ವಿದ್ಯಾವರ್ಧಕ ಸಂಘದ ಸ್ವಾಮಿ ಮಾರ್ಷಲ್ ಪಿಂಟೊ, ಉಲ್ಲಾಳದ ನಿವೃತ್ತ ಪ್ರಾಂಶುಪಾಲ ಟಿ.ಇಸ್ಮಾಹಿಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ನಂತರ ಉಡುಪಿಯ ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶನದ ಶಾಂಭವಿ ಎಂಬ ತುಳುನಾಟಕ ಪ್ರದರ್ಶನ ನಡೆಯಲಿದೆ. ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ತುಳುಕೂಟದ ಕಾರ್ಯದರ್ಶಿ ಜೀವನ್ ಕಲಾಮೆ, ಗೌರವಾಧ್ಯಕ್ಷ ಜಾನ್ ಡಿಸೋಜಾ, ಸಂಚಾಲಕ ವಸಂತಪೂಜಾರಿ, ಖಜಾಂಚಿ ವಿಶ್ವಕುಮಾರ್, ಕಾರ್ಯಕ್ರಮದ ನಿರ್ದೇಶಕ ಹಮೀದ್ ಸಬ್ಬೇನಹಳ್ಳಿ ಉಪಸ್ಥಿತರಿದ್ದರು.




