ವಿದ್ಯುತ್ ಸ್ಪರ್ಶದಿಂದ ಕಾಫಿ ತೋಟಕ್ಕೆ ಬೆಂಕಿ ತಗುಲಿ ಸಂಪೂರ್ಣ ಕಾಫಿತೋಟ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಕೆ.ಆರ್.ಪೇಟೆ ಸಮೀಪದ ಬಿಗ್ಗನಹಳ್ಳಿ ಗ್ರಾಮದ ತೇಜಸ್ ಗೌಡ ಎಂಬುವರಿಗೆ ಸೇರಿದ ಕಾಫಿತೋಟ ವಿದ್ಯುತ್ ಸ್ಪರ್ಶಿಸಿ ಸಂಪೂರ್ಣ ನಾಶವಾಗಿದೆ.
ಮೆಸ್ಕಾಂ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದ ಆರು ಎಕರೆ ಕಾಫಿತೋಟ ಸಂಪೂರ್ಣ ಭಸ್ಮವಾಗಿದೆ.
ತೇಜಸ್ ಕಳೆದ 12 ವರ್ಷಗಳಿಂದ ಕಷ್ಟಪಟ್ಟು ಸಾಗುವಳಿ ಮಾಡಿದ್ದ 6 ಎಕರೆ ಪ್ರದೇಶದಲ್ಲಿ ಕಾಫಿ, ಸಿಲ್ವರ್, ಕಾಣುಮೆಣಸು ಬೆಳೆಯನ್ನು ಬೆಳೆದಿದ್ದರು. ಆದರೆ 12 ವರ್ಷಗಳ ಅವರ ಶ್ರಮ, ಹಾಕಿದ ಬಂಡವಾಳವೆಲ್ಲಾ ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿದೆ. ಕಾಫಿ ತೋಟದೊಳಗೆ ಹಾದುಹೋಗಿದ್ದ ವಿದ್ಯುತ್ ತಂತಿ ಇಡೀ ತೋಟವನ್ನೆ ನಾಶ ಮಾಡಿದೆ. ಕಷ್ಟಪಟ್ಟು ಕಾಫಿತೋಟವನ್ನು ಸಾಗು ಮಾಡಿದ್ದ ಕುಟುಂಬ ಈಗ ದಿಕ್ಕುತೋಚದಂತೆ ಕಂಗಾಲಾಗಿದೆ.
ತೇಜಸ್ ಅವರ ತೋಟದಲ್ಲಿ ವಿದ್ಯುತ್ ಪವರ್ ಲೈನ್ ತಂತಿ ಹಾದು ಹೋಗಿದ್ದು ವಿದ್ಯುತ್ ತಂತಿಯಿಂದ ಬಿದ್ದ ಬೆಂಕಿ ಕಿಡಿಯಿಂದ ಇಡೀ ಕಾಫಿತೋಟ ಧಗಧಗ ಹೊತ್ತಿ ಉರಿದಿದೆ. ಚಿಕ್ಕಮಗಳೂರಿಂದ ಕೆ ಆರ್ ಪೇಟೆ ಮಾರ್ಗವಾಗಿ ಕುಂದೂರು ಗ್ರಾಮಕ್ಕೆ ವಿದ್ಯುತ್ ಪವರ್ ಲೈನ್ ಕಂಬಗಳನ್ನ ತೋಟದ ಮಧ್ಯೆ ಹಾಕಲಾಗಿದೆ. ಗಾಳಿಗೆ ಒಂದಕ್ಕೊಂದು ತಂತಿ ತಗಲಿ ಬೆಂಕಿ ಕಿಡಿ ತೋಟಕ್ಕೆ ಬಿದ್ದು ರಾತ್ರೋರಾತ್ರಿ ಸುಟ್ಟು ಭಸ್ಮವಾಗಿದೆ.
ಪವರ್ ಲೈನ್ ಬದಲಾವಣೆ ಮಾಡುವಂತೆ ಮನವಿ ಮಾಡಿದ್ರೂ ಕ್ಯಾರೆ ಎನ್ನದ ಇಲಾಖೆ :
ಹಲವು ವರ್ಷಗಳಿಂದ ತೋಟದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಯನ್ನ ಸ್ಥಳಾಂತರಿಸುವಂತೆ ತೋಟದ ಮಾಲೀಕ ತೇಜಸ್ ಹಲವು ಬಾರಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅಧಿಕಾರಿಗಳು ಇವರ ಮನವಿಗೆ ಕ್ಯಾರೇ ಎಂದಿರಲಿಲ್ಲ. ಇದೀಗ ಮೆಸ್ಕಾಂ ನವರ ನಿರ್ಲಕ್ಷ್ಯಕ್ಕೆ ರೈತರೊಬ್ಬರು ದೊಡ್ಡ ಬೆಲೆತೆರುವಂತಾಗಿದೆ.
ಬಿಗ್ಗನಹಳ್ಳಿ ಗ್ರಾಮ ಅರೆ ಮಲೆನಾಡು ಪ್ರದೇಶದಲ್ಲಿದೆ. ನೀರಿನ ಅಭಾವ ಇರುವ ಈ ಪ್ರದೇಶದಲ್ಲಿ ಕಾಫಿ ಬೆಳೆ ಬೆಳೆಯೋದು ಒಂದು ರೀತಿಯ ಸವಾಲೇ ಸರಿ. ಇಂತಹ ಪ್ರತಿಕೂಲ ಹವಾಮಾನ ಸನ್ನಿವೇಶದಲ್ಲೂ ಕಷ್ಟಪಟ್ಟು ತೇಜಸ್ ಕುಟುಂಬ ತೋಟವನ್ನ ಅಭಿವೃದ್ಧಿಪಡಿಸಿದ್ದರು. ಹಗಲಿರುಳೆನ್ನದೆ ಶ್ರಮವಹಿಸಿ ದುಡಿದು, ಇನ್ನೇನು ಸಮೃದ್ಧ ಬೆಳೆ ಕೈಗೆ ಬರ್ತಿದೆ ಅಂತ ನೆಮ್ಮದಿಯ ನಿಟ್ಟುಸಿರು ಬಿಡುವ ಹೊತ್ತಿಗೆ ತೋಟ ನಿರ್ನಾಮವಾಗಿದೆ.
ಕಾಫಿ ತೋಟ ಉತ್ತಮ ಫಸಲಿಗೆ ಬರಲು ಕನಿಷ್ಠ ಏಳೆಂಟು ವರ್ಷ ಅದನ್ನು ಬಂಡವಾಳ ಹಾಕಿ ಸಾಗುವಳಿ ಮಾಡಬೇಕು. ಈ ಅವಘಡದಿಂದ ತೇಜಸ್ ಗೌಡ ಅವರ ವರ್ಷಗಳ ಶ್ರಮ ನೀರಲ್ಲಿ ಹೋಮ ಮಾಡಿದಂತಾಗಿದೆ.
ನಷ್ಟ ಉಂಟಾಗಿರುವ ರೈತನಿಗೆ ಮೆಸ್ಕಾ ಇಲಾಖೆ ವೈಜ್ಞಾನಿಕವಾಗಿ ನಷ್ಟವನ್ನು ಲೆಕ್ಕಹಾಕಿ ಸೂಕ್ತ ಪರಿಹಾರ ನೀಡಬೇಕು ಮತ್ತು ಕಾಫಿ ತೋಟದ ಮೇಲೆ ಹಾದುಹೋಗಿರುವ ವಿದ್ಯುತ್ ಲೈನ್ ಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



