ರಾಜ್ಯ ಪ್ರತಿಷ್ಟಿತ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿ ಯುವ ನಾಯಕ ಶ್ರೇಯಸ್ ಪಟೇಲ್ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಹಲವು ಹಿರಿಯ ಮುಖಂಡರು ಮತ್ತು ಟಿಕೆಟ್ ಆಕಾಂಕ್ಷಿಗಳನ್ನು ಬದಿಗೊತ್ತಿ 31ರ ಹರೆಯದ ಶ್ರೇಯಸ್ ಪಟೇಲ್ ಟಿಕೆಟ್ ಗಿಟ್ಟಿಸಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ರಾಜ್ಯದ ಏಳು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಮೊದಲ ಪಟ್ಟಿಯಲ್ಲಿಯೇ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ.
ಹಾಗಾದರೆ ಯಾರಿವರು ಶ್ರೇಯಸ್ ಪಟೇಲ್ ? ಎಂಬ ಕುತೂಹಲ ರಾಜ್ಯದ ಜನರನ್ನು ಕಾಡುತ್ತಿದೆ. ಶ್ರೇಯಸ್ ಪಟೇಲ್ ಹಿನ್ನಲೆ ಹುಡುಕುತ್ತಾ ಹೋದರೆ ಹಾಸನದ ಎರಡು ರಾಜಕೀಯ ಕುಟುಂಬಗಳ ಬದ್ಧ ವೈರತ್ವದ ಇತಿಹಾಸ ತೆರೆದುಕೊಳ್ಳುತ್ತದೆ.
ಹೊಳೆನರಸೀಪುರ ಮೂಲದ ಶ್ರೇಯಸ್ ಪಟೇಲ್ ಅವರ ಅಜ್ಜ ಜಿ. ಪುಟ್ಟಸ್ವಾಮಿಗೌಡ ಅವರು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಹೊಳೆನಸರೀಪುರ ಕ್ಷೇತ್ರದಲ್ಲಿ 1989ರಲ್ಲಿ ದೇವೇಗೌಡರನ್ನು ಸೋಲಿಸಿ ಶಾಸಕರಾಗಿದ್ದರು. ನಂತರ 1999 ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ವಿರುದ್ಧ ಗೆದ್ದು ಸಂಸದರಾಗಿದ್ದರು. 1994 ಮತ್ತು 2004ರಲ್ಲಿ ಹೊಳೆನರಸೀಪುರದಲ್ಲಿ ದೇವೇಗೌಡರ ಮಗ ಹೆಚ್.ಡಿ. ರೇವಣ್ಣ ವಿರುದ್ಧ ಸ್ಪರ್ಧಿಸಿದ್ದ ಜಿ.ಪುಟ್ಟಸ್ವಾಮಿಗೌಡ ಸೋಲನುಭವಿಸಿದ್ದರು ಅವರು 2006 ರಲ್ಲಿ ಅವರು ನಿಧನ ಹೊಂದಿದ್ದರು.

ಜಿ.ಪುಟ್ಟಸ್ವಾಮಿಗೌಡ ಅವರ ನಿಧನದ ನಂತರ ಅವರ ಸೊಸೆ ಅನುಪಮ ಅವರು 2008 ಮತ್ತು 2013 ರ ವಿಧಾನಸಭಾ ಚುನಾವಣೆಯಲ್ಲಿ ರೇವಣ್ಣ ಅವರ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು.

2023 ರ ವಿಧಾನಸಭಾ ಚುನಾವಣೆಯಲ್ಲಿ ಜಿ.ಪುಟ್ಟಸ್ವಾಮಿಯವರ ಮೊಮ್ಮಗ (ಅನುಪಮ ಅವರ ಮಗ) ಶ್ರೇಯಸ್ ಪಟೇಲ್ ರೇವಣ್ಣ ಅವರ ವಿರುದ್ಧ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದರು. ಶ್ರೇಯಸ್ ಪಟೇಲ್ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರಾಗುವ ಮೂಲಕ ತನ್ನ ರಾಜಕೀಯ ಪಯಣ ಆರಂಭಿಸಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಜೆ.ಡಿ.ಎಸ್.ನ ಹೆಚ್.ಡಿ. ರೇವಣ್ಣ ಅವರ ವಿರುದ್ಧ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೇಯಸ್ ಪಟೇಲ್ ರೇವಣ್ಣರಂತಹ ಹಿರಿಯ ರಾಜಕಾರಣಿಯನ್ನು ಪತರಗುಟ್ಟುವಂತೆ ಮಾಡಿದ್ದರು. ಅಂತಿಮವಾಗಿ ರೇವಣ್ಣ ಕೇವಲ 3152 ಮತಗಳ ಅಂತರದಿಂದ ಗೆಲುವು ಪಡೆದಿದ್ದರು.
ಅಂದು ವಿಧಾನಸಭಾ ಚುನಾವಣೆಯಲ್ಲಿ ರೇವಣ್ಣರಿಗೆ ತೀವ್ರ ಸ್ಪರ್ಧೆ ಒಡ್ಡಿದ್ದ ಶ್ರೇಯಸ್ ಪಟೇಲ್ ಇದೀಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಡೆದಿದ್ದಾರೆ. ಬಹುತೇಕ ಜೆ.ಡಿ.ಎಸ್- ಬಿ.ಜೆ.ಪಿ. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಹಾಲಿ ಹಾಸನ ಸಂಸದರಾಗಿರುವ ಪ್ರಜ್ವಲ್ ರೇವಣ್ಣ ಅವರಿಗೆ ಶ್ರೇಯಸ್ ಪಟೇಲ್ ಎದುರಾಳಿಯಾಗಲಿದ್ದಾರೆ. ಈ ಮೂಲಕ ಹಾಸನ ಎರಡು ಕುಟುಂಬಗಳ ರಾಜಕೀಯ ಹಣಾಹಣಿ ಮೂರನೇ ತಲೆಮಾರಿಗೂ ಮುಂದುವರಿದಂತಾಗುತ್ತದೆ.

ಮೂವತ್ತರ ಆಸುಪಾಸಿನ ಇಬ್ಬರು ಯುವ ರಾಜಕಾರಣಿಗಳ ಅದೃಷ್ಟ ಪರೀಕ್ಷೆಗೆ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಸಾಕ್ಷಿಯಾಗಲಿದೆ.
ಹಾಲಿ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳಿದ್ದು ಅವುಗಳಲ್ಲಿ ಕಡೂರು ಮತ್ತು ಅರಸೀಕೆರೆಯಲ್ಲಿ ಕಾಂಗ್ರೇಸ್ ಗೆಲುವು ಪಡೆದಿದೆ. 2 ಕಡೆ ಬಿ.ಜೆ.ಪಿ. ಉಳಿದ 4 ಕ್ಷೇತ್ರಗಳಲ್ಲಿ ಜೆ.ಡಿ.ಎಸ್. ಶಾಸಕರು ಇದ್ದಾರೆ.
ದಶಕಗಳ ಜೆ.ಡಿ.ಎಸ್. ಹಿಡಿತದಲ್ಲಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೇಸ್ ನಿಂದ ಅಚ್ಚರಿಯ ಅಭ್ಯರ್ಥಿಯಾಗಿ ಕಣದಲ್ಲಿರುವ ಶ್ರೇಯಸ್ ಪಟೇಲ್ ಜೆ.ಡಿ.ಎಸ್.ನ ಪ್ರಾಬಲ್ಯಕ್ಕೆ ಸಡ್ಡು ಹೊಡೆಯುತ್ತಾರಾ ? ಕಾದು ನೋಡಬೇಕು.



