ಕಾಫಿನಾಡಿನಲ್ಲಿ ಕಾಡಾನೆಗೆ ಮತ್ತೊಂದು ಬಲಿಯಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಕೆ.ಆರ್.ಪೇಟೆ ಕೆಸುವಿನಮನೆ ಸಮೀಪದಲ್ಲಿ ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ.
ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳುತ್ತಿದ್ದಾಗ ಕಾಡಾನೆ ದಾಳಿ ಮಾಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ಕಾರ್ಮಿಕ ಶ್ರೀಧರ್(65 ವರ್ಷ) ಎಂಬುವವರು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಕಂಚೇನಹಳ್ಳಿಯಲ್ಲಿ ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
ತಮಿಳುನಾಡು ಮೂಲದ ಶ್ರೀಧರ್ ಕೆಂಚೇನಹಳ್ಳಿ ಗ್ರಾಮದ ರಮೇಶ್ ಎಂಬುವವರ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕಾರ್ಮಿಕರು ಗುಂಪಾಗಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡಾನೆ ಅಟ್ಟಿಸಿಕೊಂಡು ಬಂದಿದ್ದು ಈ ವೇಳೆ ಶ್ರೀಧರ್ ಎಂಬ ಕಾರ್ಮಿಕನನ್ನು ಸೊಂಡಿಲಿನಿಂದ ತಳ್ಳಿ ಬೀಳಿಸಿದೆ, ಉಳಿದವರು ತಪ್ಪಿಸಿಕೊಂಡು ಓಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತೀವ್ರ ಗಾಯಗೊಂಡಿದ್ದ ಶ್ರೀಧರ್ ಅವರನ್ನು ತಕ್ಷಣ ಚಿಕ್ಕಮಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದೆ ಎಂದು ಹಾಸನಕ್ಕೆ ಕರೆದೊಯ್ಯುವಾಗ ಅವರು ಹಗರೆ ಸಮೀಪ ಹೋಗುವಾಗ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಶ್ರೀಧರ್ ಕುಟುಂಬ ಸಮೇತ ತಮಿಳುನಾಡಿನಿಂದ ಕಾಫಿ ನಾಡಿಗೆ ಕೆಲಸ ಅರಸಿ ಬಂದಿದ್ದರು ಎನ್ನಲಾಗಿದೆ.
ಕಾಡಾನೆಯೊಂದು ಮತ್ತಾವರ, ಕೆ.ಆರ್.ಪೇಟೆ ಭಾಗದಲ್ಲಿ ಸಂಚರಿಸುತ್ತಾ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಬುಧವಾರ ರಾತ್ರಿ ಕೆ.ಆರ್.ಪೇಟೆ ಸಮೀಪದ ಮನೆಯೊಂದರ ಬಳಿ ಕಾಡಾನೆ ಸಂಚಾರ ಮಾಡಿರುವುದು ಸಿ.ಸಿ.ಕ್ಯಾಮರದಲ್ಲಿ ಸೆರೆಯಾಗಿದೆ.
ಕಂಚೇನಹಳ್ಳಿ ಗ್ರಾಮದಲ್ಲಿ ಕಾಡಾನೆ ಕಾರ್ಮಿಕರ ಮೇಲೆ ದಾಳಿ ಮಾಡಿದೆ ಎಂಬ ಮಾಹಿತಿ ಸಿಕ್ಕಿದ ತಕ್ಷಣ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ. ನಿನ್ನೆ ಸಂಜೆ ಬೇಲೂರು ಕಡೆಗೆ ತೆರಳಿದ್ದ ಒಂಟಿ ಆನೆ ಇಂದು ಮುಂಜಾನೆ ವಾಪಾಸ್ಸು ಬಂದಿದ್ದು ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ದಾಳಿ ಮಾಡಿದೆ. ಮೃತರ ಕಟುಂಬಕ್ಕೆ ಸೂಕ್ತ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು ಮತ್ತು ಕಾಡಾನೆಯನ್ನು ಕಾಡಿಗಟ್ಟಲು ಕ್ರಮ ವಹಿಸಲಾಗುವುದು.
ರಮೇಶ್ ಬಾಬು, ಡಿ ಎಫ್ ಓ, ಚಿಕ್ಕಮಗಳೂರು



