ಮೂಡಿಗೆರೆ ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರೆದಿದೆ. ನದಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಪ್ರತಿದಿನ ತಾಲೂಕಿನಲ್ಲಿ ಮನೆಗಳು ಕುಸಿದು ಬೀಳುತ್ತಿವೆ. ರಸ್ತೆ ಮೇಲೆ ಹಳ್ಳ ಹರಿದು ದಾರಿಗಳೇ ಮುಚ್ಚಿ ಹೋಗುತ್ತಿದ್ದು, ತಾಲೂಕಿನ ಜನತೆ ಮಳೆಯಿಂದಾಗಿ ತತ್ತರಿಸಿ ಹೋಗಿದ್ದಾರೆ.

ಬುಧವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಬಣಕಲ್ ಹೋಬಳಿ, ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಿ ಗ್ರಾಮದಲ್ಲಿ ಗಿರಿಜಮ್ಮ ಎಂಬುವವರ ಮನೆ ಕುಸಿದು ಬಿದ್ದಿದೆ. ರಾತ್ರಿ ಸಮಯದಲ್ಲಿ ಮನೆ ಕುಸಿದು ಬಿದ್ದಿದ್ದು, ಅದೃಷ್ಟಾವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೂಲಿ ಕಾರ್ಮಿಕರಾದ ಗಿರಿಜಮ್ಮ ಅವರು ತಮ್ಮ ವಾಸದ ಮನೆಯನ್ನು ಕಳೆದುಕೊಂಡು ಕಂಗಾಲಾಗಿದ್ದು, ಸೂಕ್ತ ಪರಿಹಾರ ಮತ್ತು ಮನೆ ನಿರ್ಮಾಣಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗೋಣಿಬೀಡು ಹೋಬಳಿ ವ್ಯಾಪ್ತಿಯ ಕಮ್ಮರಗೂಡು ಗ್ರಾಮದ ಈರಮ್ಮ ಎಂಬುವರ ಮನೆ ಭಾಗಶಃ ಕುಸಿದಿದೆ. ಕುಸಿಯುವ ಸಮಯದಲ್ಲಿ ಕೂಡಲೇ ಮನೆಯಿಂದ ಹೊರಗಡೆ ಬಂದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಹೊಯ್ಸಳಲು ಗ್ರಾಮದ ಸುಬ್ಬಮ್ಮ ಮನೆ ಭಾಗಶಃ ಕುಸಿದಿದ್ದು, ಮನೆಯೊಳಗಿದ್ದ 4 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಮತ್ತು ಗ್ರಾ.ಪಂ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೊಯ್ಸಳಲು ಗ್ರಾಮದ ಸುಬ್ಬಮ್ಮ ಅವರು ಮನೆ ಕೂಡ ಕುಸಿತಗೊಂಡಿದ್ದು, ಮೊದಲೇ ಮನೆ ಬೀಳುತ್ತದೆ ಎಂದು ಮುಜಾಗೃತ ವಹಿಸಿ ಕೊಟ್ಟಿಗೆಯಲ್ಲಿ ವಾಸವಾಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಂಗಡಿ ಗ್ರಾಮದ ಪಾರ್ವತಮ್ಮ ಎಂಬುವರ ಮನೆ ಬುಧವಾರ ಕುಸಿತಗೊಂಡಿದೆ. ಕುಸಿತಗೊಂಡಿರುವ ಎಲ್ಲಾ ಮನೆಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಗೋಣಿಬೀಡು ಹೋಬಳಿ ಕಿರುಗುಂದ ಗ್ರಾಮದ ಶಾರದಮ್ಮ ರವರ ಮನೆಯೂ ಸಂಪೂರ್ಣವಾಗಿ ನೆಲ
ಕಚ್ಚಿಹೋಗಿರುತ್ತದೆ.
ಈಗಾಗಲೇ ತಾಲೂಕಿನಲ್ಲಿ ಮುಂಗಾರು ಮಳೆ ಪ್ರಾರಂಭಗೊಂಡಾಗಿನಿಂದ ಮನೆಗಳು ಕುಸಿತಗೊಳ್ಳುತ್ತಲೇ ಇದೆ. ಅಲ್ಲದೇ ಅಲ್ಲಲ್ಲಿ ಮರಗಳು ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಹಳ್ಳಗಳು ತುಂಬಿ ಹರಿಯುತ್ತಿವೆ.
ಬೈದುವಳ್ಳಿ, ಗೌಡಹಳ್ಳಿ, ಊರುಬಗೆ, ಬಕ್ಕಿ, ಮುಗ್ರಹಳ್ಳಿ, ಬಂಕೇನಹಳ್ಳಿ ಮುಂತಾದ ಕಡೆ ಗಳಲ್ಲಿ ಹೊಳೆಗಳು ಸೇತುವೆ ಮೇಲೆ ಉಕ್ಕಿ ಹರಿಯುತ್ತಿದ್ದು, ಅನೇಕ ಗ್ರಾಮಗಳಲ್ಲಿ ಸಂಪರ್ಕಕ್ಕೆ ಅಡಚಣೆ ಉಂಟಾಗಿದೆ.
ಕಳೆದ ಒಂದು ವಾರದಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಮೊಬೈಲ್ ನೆಟ್ ವರ್ಕ್, ವಿದ್ಯುತ್ ಇಲ್ಲದೇ ಜನರು ಕತ್ತಲೆಯಲ್ಲಿ ದಿನದೂಡುವಂತಾಗಿದೆ.
ಅನೇಕ ಕಡೆ ಮನೆ ಕುಸಿತಕ್ಕೊಳಗಾದ ಸಂತ್ರಸ್ತರು ಸಂಬಂಧಿಕರ ಮನೆಯ ಆಶ್ರಯ ಪಡೆದಿದ್ದಾರೆ. ಕೂಡಲೇ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು ತಾಲೂಕು ಆಡಳಿತ ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.



