ಜನರ ಬದುಕು ಹಾಗೂ ಸಮಾಜವನ್ನು ಸರಿದಾರಿಗೆ ಕೊಂಡೊಯ್ಯಲು ಮಾಧ್ಯಮದ ಪಾತ್ರ ಪ್ರಮುಖವಾಗಿದೆ. ಆದರೆ ಮಾಧ್ಯಮಗಳೆ ದಿಕ್ಕು ತಪ್ಪಿದರೆ ಈ ಸಮಾಜವನ್ನು ಸರಿ ದಾರಿಗೆ ತರಲು ಸಾಧ್ಯವಾಗುವುದಿಲ್ಲ ಹಾಗಾಗಿ ಸಮಾಜ ದಿಕ್ಕು ತಪ್ಪದಂತೆ ಮಾಧ್ಯಮ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಶನಿವಾರ ಮೂಡಿಗೆರೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದೆ ಇದ್ದ ಪತ್ರಿಕೆ ಸಮಾಜ ಪರಿವರ್ತನೆ ದೃಷ್ಟಿಯಿಂದ ಕೆಲಸ ಮಾಡುತ್ತಿತ್ತು. ನೈಜ ಸುದ್ದಿ ಮಾಡುವ ಮೂಲಕ ಇಡೀ ರಾಜಕಾರಣದ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿತ್ತು. ಹಿಂದಿನ ಮಾಧ್ಯಮ ಸಮಾಜಕ್ಕೆ ಕೊಟ್ಟ ಕೊಡುಗೆ ಈಗಿನ ಮಾಧ್ಯಮದಲ್ಲಿ ಕಾಣುತ್ತಿಲ್ಲ. ಮಾಧ್ಯಮ ಈಗ ಉದ್ಯಮವಾದಂತೆ ಕಾಣುತ್ತಿದೆ. ಇದು ಸಮಾಜಕ್ಕೆ ಅಪಾಯ ಎಂದು ಹೇಳಿದರು.
ಅನೇಕ ವರದಿಗಾರರು ಸುದ್ದಿಗಳನ್ನೇ ಮಾಡದೇ ತಮ್ಮ ಸ್ವಾರ್ಥಕ್ಕಾಗಿ ಪತ್ರಿಕೆ ಹೆಸರನ್ನು ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಪತ್ರಿಕೆಗಳು ವರದಿಗಾರರ ನೇಮಕ ಮಾಡುವಾಗ ಎಚ್ಚರ ವಹಿಸಬೇಕು. ಅಲ್ಲದೆ ಕೆಲ ಮಾಧ್ಯಮಗಳು ರಾಜಕೀಯ ಪಕ್ಷ ಹಾಗೂ ವ್ಯಕ್ತಿ ಪರವಾದ ಸುದ್ದಿ ಪ್ರಸಾರ ಮಾಡುವುದರಿಂದ ಮಾಧ್ಯಮದ ಘನತೆ ಹಾಳಾಗುತ್ತಿದ್ದು, ಪ್ರಿಂಟ್ ಮೀಡಿಯಾಗಳು ಮಾತ್ರ ತಮ್ಮ ಅಸ್ಥಿತ್ವ ಉಳಿಸಿಕೊಂಡಿದೆ. ಜನರು ಹೆಚ್ಚಾಗಿ ಪತ್ರಿಕೆಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಬೇಕು. ಇದರಿಂದ ಹಳ್ಳಯಿಂದ ದೆಲ್ಲಿವರೆಗೆ ನಡೆಯುವ ವಿಚಾರ ತಿಳಿಯುವ ಜತೆಗೆ ಜ್ಞಾನ ಸಂಪಾದಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ಸೋಶಿಯಲ್ ಮೀಡಿಯಾಗಳ ಹಾವಳಿ ಹೆಚ್ಚಾಗಿದೆ. ಯಾವುದು ಸತ್ಯ ಹಾಗೂ ನಿತ್ಯ ಎಂಬುದು ವಿಮರ್ಶೆ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಟಿಆರ್‍ಪಿಗಾಗಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಆಗಬಾರದು. ಯಾವುದೇ ಸುದ್ದಿ ಪ್ರಸಾರ ಮಾಡಿದರೂ ಅದು ಸಮಾಜದ ಹಿತ ದೃಷ್ಟಿಯಿಂದ ಮಾಡಿದಾಗ ಮಾತ್ರ ಮಾಧ್ಯಮದ ಘನತೆ ಹೆಚ್ಚುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂಜಿಎಂ ಆಸ್ಪತ್ರೆ ಸಿಬ್ಬಂದಿ ಪ್ರೇಮ, ಸಂಗೀತ ಕ್ಷೇತ್ರದಲ್ಲಿ ಕಲಾವಿದರ ಸಂಘದ ಜಿಲ್ಲಾಧ್ಯಕ್ಷೆ ಕೆ.ಸಿ.ಹರಿಣಾಕ್ಷಿ, ಕೃಷಿ ಕ್ಷೇತ್ರದಲ್ಲಿ ಅಶ್ವಿನಿ ಸಂತೋಷ್ ಸಾರಗೋಡು, ಸಮಾಜ ಸೇವೆ ಸುರೇಶ್ ಮಗ್ಗಲಮಕ್ಕಿ, ಪೌರ ಕಾರ್ಮಿಕ ಶಶಿಕುಮಾರ್ ಮೂಡಿಗೆರೆ. ಡ್ಯಾನ್ಸ್ ಮಾಸ್ಟರ್ ಕಿಶೋರ್ ಜನ್ನಾಪುರ, ಪ್ರತಿಭಾವಂತ ವಿದ್ಯಾರ್ಥಿಗಳಾದ ಎಂ.ಎಂ. ಅನನ್ಯ, ಜಿ.ಪಿ.ಅನಿಕೇತನ, ತಸ್ಮೀಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರತರ್ಕರ ಸಂಘದ ಅಧ್ಯಕ್ಷ ಆನಂದ್ ಕಣಚೂರು ವಹಿಸಿದ್ದರು ತಾ.ಪಂ. ಇಓ ದಯಾವತಿ, ಪೊಲೀಸ್ ವೃತ್ತ ನಿರೀಕ್ಷಕ ಸೋಮೇಗೌಡ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪರವಾಗಿ ತಾಲ್ಲೂಕು ಅಧ್ಯಕ್ಷೆ ಶ್ರೀಮತಿ ಶೈಲಾ ಪತ್ರಕರ್ತರಿಗೆ ನೆನಪಿನ ಕಾಣಿಗೆ ನೀಡಿದರು.
ಪ್ರಸನ್ನ ಗೌಡಹಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು, ಎಂ.ಹೆಚ್. ಅಮರನಾಥ್ ನಿರೂಪಿಸಿದರು, ಉದಯ ಕುಮಾರ್ ಸ್ವಾಗತಿಸಿ, ಅಬ್ಬಾಸ್ ಕಿರುಗುಂದ ವಂದಿಸಿದರು.



