ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಸತತ ಮಳೆಗೆ ಗುಡ್ಡ ಕುಸಿದು 10 ಮಂದಿ ಕಾಣೆಯಾಗಿದ್ದು, 7 ಮಂದಿಯ ಮೃತದೇಹ ಸಿಕ್ಕಿದೆ, ಇನ್ನೂ ಮೂವರು ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು ಘಟಾನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಕ್ಷಣಾ ಕಾರ್ಯದಲ್ಲಿ ಸರ್ಕಾರದ ಕಡೆಯಿಂದ ಯಾವುದೇ ವಿಳಂಬವಾಗಿಲ್ಲ, ತ್ವರಿತವಾಗಿ ಮಾಡುತ್ತಿದ್ದೇವೆ, ಈ ವಿಚಾರದಲ್ಲಿ ಸರ್ಕಾರ ಯಾವುದೇ ರಾಜಕೀಯ ಕೂಡ ಮಾಡುತ್ತಿಲ್ಲ, ಎನ್ ಡಿಆರ್ ಎಫ್ ತಂಡದೊಂದಿಗೆ ರಾಜ್ಯದ ರಕ್ಷಣಾ ತಂಡ, ಪೊಲೀಸರು ಕೈಜೋಡಿಸಿದ್ದಾರೆ ಎಂದರು.

ದುರಂತದಲ್ಲಿ ಗ್ಯಾಸ್ ಟ್ಯಾಂಕರ್, ಲಾರಿ ಕೊಚ್ಚಿ ಹೋಗಿದೆ. ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ನಡೆಸಲು ಸೂಚಿಸಿದ್ದೇನೆ. ಸದನ ನಡೆಯುತ್ತಿರುವುದರಿಂದ ತಕ್ಷಣ ಬರಲು ಆಗಿಲ್ಲ. ಉತ್ತರ ಕನ್ನಡ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದರು.
ಕೇರಳದ ಲಾರಿ ಚಾಲಕ ಅರ್ಜುನ್ ಹುಡುಕಾಟದಲ್ಲಿ ಯಾವುದೇ ವಿಳಂಬವಾಗಿಲ್ಲ. ಕಾರ್ಯಾಚರಣೆಗೆ ಭಾರಿ ಮಳೆ ಸವಾಲಾಗಿದೆ. ಕೇರಳ ಸರ್ಕಾರ ನಮ್ಮ ಸಂಪರ್ಕದಲ್ಲಿದೆ. ದುರ್ಘಟನೆಯಲ್ಲಿ ಮೃತರಾದವರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ. ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ್ದು. ರಕ್ಷಣಾ ಕಾರ್ಯಾಚರಣೆ ಬಳಿಕ ಯಾರೇ ತಪ್ಪಿತಸ್ಥರಿದ್ದರೂ ಅವರ ಮೇಲೆ ಕ್ರಮವಾಗುತ್ತದೆ ಎಂದರು.
ಸಿದ್ದರಾಮಯ್ಯನವರು ಭೇಟಿ ನೀಡಿದ ಹೊತ್ತಿನಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಮಳೆಯ ನಡುವೆಯೇ ಗುಡ್ಡ ಕುಸಿದ ಸ್ಥಳವನ್ನು ವೀಕ್ಷಿಸಿ ಅಧಿಕಾರಿಗಳು, ಪೊಲೀಸರಿಂದ ಮಾಹಿತಿ ಪಡೆದುಕೊಂಡರು.



