ಹಾಸನ: ಹಾಸನದಲ್ಲಿ ಪುಡಿ ರೌಡಿಗಳು ನಡೆಸಿರುವ ಹಲ್ಲೆಯಲ್ಲಿ ಯುವಕನೊಬ್ಬ ತೀವ್ರವಾಗಿ ಗಾಯಗೊಂಡು ಸಾವಿಗೀಡಾಗಿರುವ ಘಟನೆ ನಡೆದಿದೆ. ಪೊಲೀಸರು ಹಲ್ಲೆ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ನಂದಿನಿ ಪಾರ್ಲರ್ ನಡೆಸುತ್ತಿದ್ದ ಈ ಯುವಕನನ್ನು ರೌಡಿಗಳು ಹಣಕ್ಕಾಗಿ ಹಲವು ತಿಂಗಳಿಂದ ಪೀಡಿಸುತ್ತಿದ್ದರು ಎಂದು ಗೊತ್ತಾಗಿದೆ.
ನಿನ್ನೆ ಮುಂಜಾನೆ ಪುಡಿ ರೌಡಿಗಳಿಂದ ಹಲ್ಲೆಗೊಳಗಾಗಿದ್ದ ಯುವಕ ಸತೀಶ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ರಾತ್ರಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಿನ್ನೆ ಬೆಳಗ್ಗೆ ಹಾಸನ ಹೊರವಲಯದ ಕೌಶಿಕ ಗೇಟ್ ಬಳಿ ಸತೀಶ್ ಮೇಲೆ ಮಾರಕಾಸ್ತ್ರಗಳಿಂದ ರೌಡಿಗಳು ಹಲ್ಲೆ ನಡೆಸಿದ್ದರು. ನಂದಿನಿ ಪಾರ್ಲರ್ ನಡೆಸುತ್ತಿದ್ದ ಸತೀಶ್, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ಆರೋಪಿ ಮೇಲೆ ಫೈರಿಂಗ್
ಹಲ್ಲೆ ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿ ಹಲ್ಲೆ ನಡೆಸಲು ಯತ್ನಿಸಿದ್ದು, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿ ಸಮುದ್ರವಳ್ಳಿ ರಾಜು ಎಂಬಾತನನ್ನು ಬಂಧಿಸಲು ಹಾಸನ ತಾಲ್ಲೂಕಿನ ಕುಂತಿಬೆಟ್ಟಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಪೊಲೀಸರು ಗುಂಡು ಹಾರಿಸಿ ಆತನನ್ನು ಗಾಯಗೊಳಿಸಿ ಬಂದಿಸಿದ್ದು, ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ತಿಂಗಳುಗಳ ಹಿಂದೆಯೇ ಈ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದ್ದೆವು. ಹಣಕ್ಕಾಗಿ ಅನೇಕ ತಿಂಗಳುಗಳಿಂದ ರೌಡಿಗಳು ಪೀಡಿಸುತ್ತಿದ್ದರು. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲʼ ಎಂದು ಯುವಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



