ಅಪ್ರಾಪ್ತೆಯೊಬ್ಬಳು ಗರ್ಭಿಣಿಯಾಗಲು ಕಾರಣನಾದ ಆರೋಪಿಗೆ ಚಿಕ್ಕಮಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ಎಫ್.ಟಿ.ಎಸ್.ಈ-1ರ ಪೋಕ್ಸೋ ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಕಳಸ ತಾಲ್ಲೂಕು ಬಾಳೆಹೊಳೆ ಇಡಕಣಿ ಗ್ರಾಮದ ಬಾಳೆಹೊಳೆ ಎಸ್ಟೇಟ್‍ನ ಕೂಲಿ ಲೈನ್‍ನಲ್ಲಿ ವಾಸವಾಗಿದ್ದ ಅನಿಲ್ ಪೂಜಾರಿ ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಬಾಳೆಹೊಳೆ ಎಸ್ಟೇಟ್‍ಗೆ 2024 ರಲ್ಲಿ ಕೂಲಿ ಕೆಲಸಕ್ಕೆ ಬರುತ್ತಿದ್ದ ಅಪ್ರಾಪ್ತೆಯನ್ನು ಪರಿಚಯಿಸಿಕೊಂಡು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆಕೆಯೊಂದಿಗೆ ನಿರಂತರವಾಗಿ ಮೊಬೈಲ್ ಸಂಪರ್ಕದಲ್ಲಿದ್ದ ಆತ, ಆಕೆಯನ್ನು ಹೆಮ್ಮಕ್ಕಿ ಗ್ರಾಮದ ಬಿಳಗೂರಿನಲ್ಲಿರುವ ತನ್ನ ಮನೆಗೆ ಕರೆಸಿಕೊಂಡು ಬಲವಂತವಾಗಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.
ಈ ನಡುವೆ ಆನಾರೋಗ್ಯಕ್ಕೆ ಒಳಗಾದ ಆಕೆಯನ್ನು ಕೊಪ್ಪ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಗಾದಾಗ ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಈ ಬಗ್ಗೆ ಕೊಪ್ಪ ವಿಭಾಗದ ಪೋಲೀಸ್ ಉಪಾಧೀಕ್ಷಕರಾದ ಬಾಲಾಜಿ ಸಿಂಗ್, ಪಿಎಸ್‍ಐ ಚಂದ್ರಶೇಖರ್, ಸಿಬ್ಬಂದಿಯಾದ ಸಾಧಿಕ್ ಭಾಷಾ, ಎ.ಬಿ.ಪರಮೇಶ, ಶಿವಕುಮಾರ್ ಮತ್ತು ವಿಶ್ವನಾಥ್ ಪಾಳೇಗಾರ ಅವರನ್ನು ಒಳಗೊಂಡ ತಂಡ ಈ ಸಂಬಂಧ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ಎಫ್.ಟಿ.ಎಸ್.ಈ-1ರ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ರಾಘವೇಂದ್ರ ಗುರುಪ್ರಸಾದ್ ಕುಲಕರ್ಣಿ ಅವರು, ಸೂಕ್ತ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಆರೋಪ ಸಾಬೀತಾಗಿದ್ದರಿಂದ ಆರೋಪಿಗೆ 20 ವರ್ಷಗಳ ಕಠಿಣ ಸಜೆ ಹಾಗೂ 25 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ ಆರು ತಿಂಗಳ ಸಾಧಾರಣ ಸಜೆ ಅನುಭವಿಸುವಂತೆ ತಿಳಿಸಿದ್ದಾರೆ.
ನೊಂದ ಬಾಲಕಿಗೆ ಕರ್ನಾಟಕ ರಾಜ್ಯದ ಸಂತ್ರಸ್ತರ ಪರಿಹಾರ ನಿಧಿಯಿಂದ 4 ಲಕ್ಷ ರೂ.ಗಳ ಪರಿಹಾರ ನೀಡುವಂತೆಯೂ ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ. ಸರ್ಕಾರದ ಪರವಾಗಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಭರತ್ ಕುಮಾರ್ ವಾದ ಮಂಡಿಸಿದ್ದರು.



