ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪ 19 ಕಾಡಾನೆಗಳ ಗುಂಪು ಬೀಡು ಬಿಟ್ಟಿವೆ.
ಈ ಕಾಡಾನೆಗಳ ಗುಂಪು ಕಳೆದ ಹಲವು ದಿನಗಳಿಂದ ಮೂಡಿಗೆರೆ ಬೇಲೂರು ಮತ್ತು ಸಕಲೇಶಪುರ ಗಡಿಭಾಗದಲ್ಲಿ ಸಂಚರಿಸುತ್ತಾ ಸಾರ್ವಜನಿಕರಲ್ಲಿ ಭಯ ಮೂಡಿಸಿವೆ.
ಇಂದು ಮುಂಜಾನೆ ಗೋಣಿಬೀಡು, ಕಸ್ಕೇಬೈಲ್ ಸುತ್ತಮುತ್ತಲ ಗ್ರಾಮಗಳಲ್ಲಿ ಅತ್ತಿಂದಿತ್ತ ಸತ್ತು ಹೊಡೆಯುತ್ತಿರುವ ಕಾಡಾನೆಗಳ ಗುಂಪು ಜನರಲ್ಲಿ ತೀವ್ರ ಆತಂಕ ಮೂಡಿಸಿವೆ.
ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿಗಳು ಹಿಂಬಾಲಿಸುತ್ತಿದ್ದು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡುತ್ತಾ ಯಾವುದೇ ಅಪಾಯ ಸಂಭವಿಸದಂತೆ ಕ್ರಮ ವಹಿಸುತ್ತಿದ್ದಾರೆ.
ಇಂದು ಮುಂಜಾನೆ ಗೋಣಿಬೀಡು ಸಾಲುಮರ ಮುಖ್ಯರಸ್ತೆಯಲ್ಲಿ ಮರಿಗಳು ಸಹಿತ 19 ಕಾಡಾನೆಗಳು ರಸ್ತೆಯನ್ನು ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ.
ಆನೆಗಳು ಪ್ರಸ್ತುತ ಗೋಣಿಬೀಡು ಚರ್ಚ್ ಹಿಂಭಾಗದಲ್ಲಿ ಇಂದ್ರೇಶ್ ಎನ್ನುವವರ ಕಾಫಿ ತೋಟದಲ್ಲಿ ಬೀಡುಬಿಟ್ಟಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಆನೆಗಳನ್ನು ಅರಣ್ಯ ಇಲಾಖೆ ಅಲ್ಲಿಂದ ಓಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಭಾಗದ ಸಾರ್ವಜನಿಕರು ಸಂಚರಿಸುವಾಗ ಮತ್ತು ತೋಟದಲ್ಲಿ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ



