November 8, 2026
;
digital arrest

 

 

ಸಾರ್ವಜನಿಕರನ್ನು ಡಿಜಿಟಲ್ ಅರೆಸ್ಟ್  ಮಾಡಿ ವಂಚಿಸುತ್ತಿದ್ದ ದುಬೈ ಮೂಲದ ಓರ್ವ ವ್ಯಕ್ತಿ ಸೇರಿ ಐವರು ಸೈಬರ್ ಖದೀಮರನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ  1.76 ಕೋಟಿ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

ದುಬೈನ ಯುಸುಫ್ ಸೇಠ್, ಬೆಂಗಳೂರಿನ ಮಹಮ್ಮದ್ ಶಾಕಿಬ್, ಮಹಮ್ಮದ್ ಅಯಾನ್, ಅಹಸಾನ್ ಅನ್ಸಾರಿ, ಸೊಲೋಮನ್ ರಾಜ ಬಂಧಿತರು.

ನಿಮ್ಮ ಹೆಸರಿನ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ ಎಂದು ಸಾರ್ವಜನಿಕರಿಗೆ ಕರೆ ಮಾಡುತ್ತಿದ್ದ ಆರೋಪಿಗಳು, ನಾವು  ಕ್ರೈಂ ಬ್ರಾಂಚ್ ಪೊಲೀಸರು. ಇದನ್ನು ಬಗೆಹರಿಸಲು ಹಣ ಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದರು.

ಈ ರೀತಿ ಬೆದರಿಕೆ ಹಾಕಿ ಕೊಡಗು ಮೂಲದ ವ್ಯಕ್ತಿಯಿಂದ 2.21 ಕೋಟಿ ರೂ.ಗಳನ್ನು ಆರ್‌ಟಿಜಿಎಸ್ ಮಾಡಿಸಿಕೊಂಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.  ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ಸದ್ಯ ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ವಂಚನೆ ಹಣದಿಂದ ಬೆನ್ಜ್ ಕಾರು ಖರೀದಿಸಿದ್ದರು. ಅವರಿಂದ ಒಟ್ಟು 1.76 ಕೋಟಿ ರೂ.ಗಳನ್ನು ಸಿಐಡಿ ವಶಕ್ಕೆ ಪಡೆದಿದ್ದು, ಸಿಐಡಿ ಪೊಲೀಸರಿಂದ ತನಿಖೆ ಮುಂದುವರಿದಿದೆ.

ವಂಚನೆ ಮಾಡಿದ್ದು ಹೇಗೆ ?

ಮೇ ತಿಂಗಳಿನಲ್ಲಿ ಕೊಡಗು ಮೂಲದ ವ್ಯಕ್ತಿಯೊಬ್ಬರ ಮೊಬೈಲ್​ಗೆ ಕರೆ ಮಾಡಿದ್ದ ಆರೋಪಿಗಳು, ಫೆಡೆಕ್ಸ್ ಕಂಪನಿಯಿಂದ ಮಾತನಾಡುತ್ತಿರುವುದಾಗಿ ಹೇಳಿ, “ನಿಮಗೆ ಬಂದಿರುವ ಪಾರ್ಸೆಲ್‌ನಲ್ಲಿ ಎಂಡಿಎಂಎ ಮಾದಕ ಪದಾರ್ಥವಿದೆ. ಆದ್ದರಿಂದ ಆ ಪಾರ್ಸೆಲ್ ಸೀಜ್ ಆಗಿದ್ದು, ನೀವು ಕ್ರೈಂ ಪೊಲೀಸ್ ಅಧಿಕಾರಿಯವರೊಂದಿಗೆ ಮಾತನಾಡಬೇಕು” ಎಂದಿದ್ದರು.

ಬಳಿಕ ಕ್ರೈಂ ಪೊಲೀಸರೆಂದು ವಾಟ್ಸ್​ಆ್ಯಪ್​ ಕರೆ ಮೂಲಕ ಸಂಪರ್ಕಿಸಿ, “ನಿಮ್ಮ ಪಾರ್ಸೆಲ್‌ನಲ್ಲಿ ಎಂಡಿಎಂಎ ಮಾದಕ ವಸ್ತು ಇರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಇದನ್ನು ಇತ್ಯರ್ಥಪಡಿಸಿಕೊಳ್ಳಲು ನೀವು ಹಣ ನೀಡಬೇಕಾಗುತ್ತದೆ” ಎಂದು ಬೆದರಿಸಿದ್ದರು. ಆತಂಕಗೊಂಡ ವ್ಯಕ್ತಿ ತನ್ನ ಬ್ಯಾಂಕ್ ಖಾತೆಯಿಂದ ಆರೋಪಿಗಳು ಹೇಳಿದ ಖಾತೆಗಳಿಗೆ ಒಟ್ಟು 2.21 ಕೋಟಿ ರೂ. ಹಣವನ್ನು ಆರ್​ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ವಂಚಕರು ಕೆಲವು ದಿನಗಳ ಬಳಿಕ ಮತ್ತೆ ಕರೆ ಮಾಡಿ, ಇನ್ನಿತರೆ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿ ಹಣ ವರ್ಗಾಯಿಸುವಂತೆ ಬೆದರಿಸಿದ್ದರು.

ಇದರಿಂದ ಸಂಶಯಗೊಂಡ ವ್ಯಕ್ತಿ, ಕೊಡಗಿನ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮುಂದಿನ ತನಿಖೆಗೆ ಪ್ರಕರಣವನ್ನು ಸಿಐಡಿ ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಹಣ ವರ್ಗಾವಣೆಯಾದ ಖಾತೆಗಳ ವಿವರಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖಾ ಸಮಯದಲ್ಲಿ ಪ್ರಮುಖ ಆರೋಪಿಗಳು ಭಾರತೀಯ ಬ್ಯಾಂಕ್ ಖಾತೆಗಳನ್ನು ಬಳಸಿರುವುದು ಹಾಗೂ ವಂಚನೆಯ ಹಣ ಸುಮಾರು 26 ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿರುವುದು ಕಂಡುಬಂದಿದೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಇಂತಹ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿಮಗೆ ಬಂದಿರುವ ಪಾರ್ಸಲ್ ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿ ಸೈಬರ್ ಕ್ರೈಂ ಪೊಲೀಸರು ಎಂದು ಹೇಳಿ ಬಳಿಕ ವಿಚಾರಣೆ ಹೆಸರಿನಲ್ಲಿ ಸ್ಕೈಪ್ ಅಥವಾ ಇತರ ವಿಡಿಯೋ ಕಾಲ್ ಮೂಲಕ ಕರೆ ಮಾಡಿ ನಿಮ್ಮ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ವಿಶೇಷವೆಂದರೆ ಈ ರೀತಿಯ ವಂಚನೆಗಳಿಗಾಗಿ ವಂಚಕರು ಪೊಲೀಸ್ ಠಾಣೆ, ಸರ್ಕಾರಿ ಕಚೇರಿಗಳ ಮಾದರಿಯ ಸ್ಟುಡಿಯೋಗಳನ್ನು ಬಳಸಿಕೊಂಡು, ಅಧಿಕಾರಿಗಳಂತೆ ಸಮವಸ್ತ್ರ ಧರಿಸಿ ಭಯ ಹುಟ್ಟಿಸುತ್ತಾರೆ. ಬಳಿಕ ಪ್ರಕರಣದಲ್ಲಿ ರಾಜಿಯಾಗಲು ಹಣ ನೀಡಬೇಕಾಗುತ್ತದೆ ಎಂದು ಡಿಮ್ಯಾಂಡ್ ಮಾಡುತ್ತಾರೆ. ಸಾಕಷ್ಟು ಪ್ರಕರಣಗಳಲ್ಲಿ ದಿನಗಳಗಟ್ಟಲೆ ವಿಡಿಯೋ ಕರೆಯಲ್ಲಿ ಕೂರಿಸಿ (ಡಿಜಿಟಲ್ ಅರೆಸ್ಟ್) ಬೆದರಿಸಿರುವ ನಿದರ್ಶನಗಳೂ ಸಹ ಇವೆ. ದೇಶದಾದ್ಯಂತ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪೊಲೀಸರು ಅರಿವು ಮೂಡಿಸುತ್ತಿದ್ದಾರೆ.

 

 

Leave a Reply

Your email address will not be published. Required fields are marked *