ಮಕ್ಕಳಿಗೆ ಪಾಠ ಮಾಡಿ ಎಂದರೆ ತಮ್ಮ ತಮ್ಮಲ್ಲೇ ಪರಸ್ಪರ ಫೈಟಿಂಗ್ ಮಾಡುತ್ತಿರುವ ಶಿಕ್ಷಕಿಯರ ಅಮಾನತಿಗೆ ಗ್ರಾಮಸ್ಥರು ಪಟ್ಟು ಹಿಡಿದಿರುವ ಹಿನ್ನಲೆಯಲ್ಲಿ ಕಿರುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೆ.ಪುಟ್ಟರಾಜ್ ಅವರ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಶಿಕ್ಷಕಿಯರ ವಿರುದ್ಧ ಗ್ರಾಪಂ, ಎಸ್ಡಿಎಂಸಿ ಹಾಗೂ ಗ್ರಾಮಸ್ಥರು ನೀಡಿದ್ದ ಪ್ರತ್ಯೇಕ ದೂರನ್ನು ಪರಿಶೀಲಿಸಿದರು.
ಮಕ್ಕಳ ದಾಖಲಾತಿ ಕುಂಠಿತ, ಕಲಿಕೆಯಲ್ಲಿ ಮಕ್ಕಳು ಹಿಂದುಳಿದಿರುವುದು. ಶಾಲೆಯ ಸುತ್ತ ಕಾಡು ಬೆಳೆದಿದ್ದರೂ ಸ್ವಚ್ಛಗೊಳಿಸಿಲ್ಲ. ಶೌಚಗೃಹ ಸ್ವಚ್ಛತೆಯಿಲ್ಲ. ಬಾಗಿಲು ಇಲ್ಲ. ಮೂವರು ಶಿಕ್ಷಕಿಯರ ನಿತ್ಯ ಜಗಳ, ಮಕ್ಕಳ ಟಿಸಿ ಪಡೆಯಲು ಪೋಷಕರಿಂದ ಅರ್ಜಿ, ಎಸ್ಡಿಎಂಸಿ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆಗೆ ಮುಂದಾಗಿರುವುದು ಸೇರಿದಂತೆ ಇನ್ನಿತರೆ ಅವ್ಯವಸ್ಥೆಯನ್ನು ಪರಿಶೀಲಿಸಿ ಶಿಕ್ಷಕಿಯರನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡುತ್ತಿದ್ದಂತೆ ಗ್ರಾಮಸ್ಥರು ಗ್ರಾಪಂ ಆವರಣದಲ್ಲಿ ಜಮಾಯಿಸಿ ಮೂವರು ಶಿಕ್ಷಕಿಯರನ್ನು ಕೂಡಲೆ ಅಮಾನತ್ತು ಪಡಿಸಬೇಕು. ಅಲ್ಲಿಯವರೆಗೆ ಗ್ರಾಮಸ್ಥರಾದ ನಾವು ಶಾಲೆ ಅವರಣಕ್ಕೆ ಬರುವುದಿಲ್ಲ. ಗ್ರಾಪಂ ಸಭಾಂಗಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ನಮ್ಮ ಅಹವಾಲು ಸ್ವೀಕರಿಸಬೇಕು ಎಂದು ಒಟ್ಟು ಹಿಡಿದಾಗ, ಅಧಿಕಾರಿಗಳ ತಂಡ ಗ್ರಾಪಂ ಸಭಾಂಗಣಕ್ಕೆ ತೆರಳಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.
ಈ ವೇಳೆ ಆಕ್ರೋಶ ಹೊರಹಾಕಿದ ಗ್ರಾಮಸ್ಥರು ನಿತ್ಯ ಜಗಳವಾಡುವ ಶಿಕ್ಷಕಿಯರನ್ನು ಅಮಾನತ್ತುಪಡಿಸಿ ಬೇರೆ ಮೂವರು ಶಿಕ್ಷಕರನ್ನು ಶಾಲೆಗೆ ನಿಯೋಜಿಸಬೇಕು. ಇಲ್ಲವಾದರೆ ಈಗ ದಾಖಲಾಗಿರುವ 34 ವಿದ್ಯಾರ್ಥಿಗಳ ವರ್ಗಾವಣೆ ಪತ್ರ ನಮಗೆ ನೀಡಬೇಕು. ಅಲ್ಲದೆ ಎಸ್ಡಿಎಂಸಿ ಸದಸ್ಯರೆಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದರು.
ಗ್ರಾಪಂ ಅಧ್ಯಕ್ಷೆ ಸ್ವಾತಿಶ್ರೀ ಮಾತನಾಡಿ, ಶಾಲೆಯ ಶಿಕ್ಷಕಿಯರು, ಗ್ರಾಪಂ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಗೌರವ ನೀಡದೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ. ಶಾಲೆಯಲ್ಲಿ ಮಕ್ಕಳೆದುರು ನಿರಂತರವಾಗಿ ಜಗಳವಾಡುತ್ತಾ ಕಾಲ ಕಳೆಯುತ್ತಾರೆ. ಮಕ್ಕಳು ಪಾಠ ಪ್ರವಚನದಿಂದ ವಂಚಿತರಾಗಿದ್ದಾರೆ. ಹಿಂದೆ ಇದೇ ಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದರು. ಈ ಬಾರಿ ಶಿಕ್ಷಕಿಯರ ಜಗಳ ಮತ್ತು ಒರಟುತನದಿಂದ ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸಿದ್ದಾರೆ. ಹೀಗೆ ಮುಂದುವರೆದರೆ ಶಾಲೆ ಮುಚ್ಚುವ ಸ್ಥಿತಿಗೆ ತಲುಪಲಿದೆ ಎಂದು ತಿಳಿಸಿದರು.
ಗ್ರಾಮಸ್ಥ ಕೆ.ಕೆ.ರಾಮಯ್ಯ ಮಾತನಾಡಿ, ಕಳೆದ ವರ್ಷ ಮಕ್ಕಳ ಆಹಾರಧಾನ್ಯ ಮತ್ತು ಹಾಲಿನ ಪುಡಿಯನ್ನು ಮುಖ್ಯ ಶಿಕ್ಷಕಿ ಸಾಗಿಸುವಾಗ ಗ್ರಾಮಸ್ಥರು ಹಿಡಿದು ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತರಕಾರಿ ಮಾರಾಟದ ವಾಹನವನ್ನು ಶಾಲೆ ಆವರಣಕ್ಕೆ ಕರೆದೊಯ್ದು ಬಿಸಿಯೂಟಕ್ಕೆ ತರಕಾರಿ ಖರೀದಿಸುವ ನೆಪದಲ್ಲಿ ಆಹಾರಧಾನ್ಯ ಮತ್ತು ಹಾಲಿನ ಪುಡಿಯನ್ನು ಜನರ ಕಣ್ಣು ತಪ್ಪಿಸಿ ತರಕಾರಿ ವಾಹನದಲ್ಲಿ ಸಾಗಿಸುತ್ತಾರೆ. ನಾವು ಹಲವಾರು ಬಾರಿ ಶಿಕ್ಷಕಿಯರ ವಿರುದ್ಧ ದೂರು ನೀಡಿ ಪ್ರತಿಭಟನೆ ನಡೆಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ಇನ್ನೆರಡು ದಿನದಲ್ಲಿ ಮೂವರು ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಂಡು ಈ ಶಾಲೆಗೆ ಮೂವರು ಶಿಕ್ಷಕರನ್ನು ಹೊಸದಾಗಿ ನೇಮಿಸಬೇಕು ಇಲ್ಲವಾದರೆ ಈಗ ದಾಖಲಾಗಿರುವ 34 ಮಕ್ಕಳನ್ನು ಪೋಷಕರು ಟೀಸಿ ಪಡೆದು ಬೇರೆ ಶಾಲೆಗೆ ದಾಖಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಹರಿಬಾರ್ಗವ ಮಾತನಾಡಿ, ಎಸ್ಡಿಎಂಸಿ ಸಭೆಯ ತೀರ್ಮಾನವನ್ನು ದಾಖಲಿಸದೆ ಸಭೆಯಿಂದ ಮುಖ್ಯ ಶಿಕ್ಷಕಿ ಎದ್ದು ಹೋಗುತ್ತಾರೆ. ಪ್ರಶ್ನಿಸಿದರೆ ಬಟ್ಟೆ ಹರಿದು ರಸ್ತೆಗೆ ಓಡಿ ಹೋಗುತ್ತೇನೆ. ಪೊಲೀಸರಿಗೆ ದೂರು ನೀಡುತ್ತೇನೆಂದು ಬೆದರಿಕೆ ಹಾಕುತ್ತಾರೆ. ಶಾಲೆ ಆವರಣಕ್ಕೆ ಎಸ್ಡಿಎಂಸಿ ಸದಸ್ಯರು ಅಥವ ಮಕ್ಕಳ ಪೋಷಕರು ಭೇಟಿ ನೀಡಿದರೆ ಅವರ ವಿಡಿಯೋ ಚಿತ್ರೀಕರಣ ಮಾಡುತ್ತಾರೆ. ಇದರಿಂದ ಶಾಲೆ ಆವರಣಕ್ಕೆ ಯಾರೊಬ್ಬರು ಸುಳಿಯುತ್ತಿಲ್ಲ. ಮೂವರು ಶಿಕ್ಷಕಿಯರ ಜಗಳದಿಂದ ಶಾಲೆಯ ವಾತಾವರಣ ಹದಗೆಟ್ಟಿದೆ. ಶಿಕ್ಷಕಿಯರ ವಿರುದ್ಧ ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಎಸ್ಡಿಎಂಸಿಯ ಎಲ್ಲಾ ಸದಸ್ಯರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಡಿಡಿಪಿಐ ಜಿ.ಕೆ.ಪುಟ್ಟರಾಜ್ ಶಾಲೆಯ ಮೂವರು ಶಿಕ್ಷಕಿಯರು ನಿತ್ಯ ಜಗಳವಾಡುತ್ತಿರುವುದು ಸೇರಿದಂತೆ ಇನ್ನಿತರೆ ದೂರುಗಳು ನಮಗೆ ಬಂದಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಇಲಾಖೆಯ ಅಧಿಕಾರಿಗಳನ್ನು ಶಾಲೆಗೆ ಕಳಿಸಿದ್ದೆ ಅವರು ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಈಗ ನಾನು ಪರಿಶೀಲನೆ ನಡೆಸಲು ಬಂದಿದ್ದೇನೆ. 5 ವರ್ಷದಿಂದ ಶಾಲೆಯ ದಾಖಲಾತಿ ಸೇರಿದಂತೆ ಎಲ್ಲವನ್ನು ಪರಿಶೀಲನೆ ನಡೆಸಲಾಗುವುದು. ಜಿಲ್ಲೆಯ ಯಾವುದೆ ಶಾಲೆಯ ಶಿಕ್ಷಕರ ವಿರುದ್ಧ ಇಷ್ಟು ದೊಡ್ಡ ಮಟ್ಟದಲ್ಲಿ ದೂರುಗಳು ಬಂದಿರಲಿಲ್ಲ. ಶಿಕ್ಷಕರ ವರ್ಗಾವಣೆ ನಿಯಮಾನಸಾರ ಕೌನ್ಸಿಲಿಂಗ್ ಮೂಲಕ ಮಾಡಬೇಕಾಗಿದೆ. ದೂರಿನ ಆಧಾರದಲ್ಲಿ ವರ್ಗಾವಣೆ ಮಾಡಬಹುದಾಗಿದೆ. ಒಂದೆರಡು ದಿನದಲ್ಲಿ ಮೂವರು ಶಿಕ್ಷಕರು ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಕೆ.ಆರ್.ದಿನೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಯು.ಎಚ್.ರಾಜಶೇಖರ್, ಬಿ.ಕೆ.ಚಂದ್ರಶೇಖರ್, ಮುಖಂಡರಾದ ಅಬ್ಬಾಸ್, ಕೆ.ಆರ್.ಲೋಕೇಶ್, ಗುಲಾಂ ಮಹಮ್ಮದ್, ಕೆ.ಆರ್.ಮಂಜುನಾಥ್, ಚನ್ನಕೇಶವ, ಪರಮೇಶ, ಕೆ.ಎ.ರವಿಕುಮಾರ್, ಶಿವರಾಜ್, ಮನೋಜ್, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಸ್ಮಿತಾ, ಶಿವಕುಮಾರ್, ಪುರುಷೋತ್ತಮ ಇತರರಿದ್ದರು.

ಶಾಲೆಯಲ್ಲಿ ಮಕ್ಕಳ ಎದುರು ದಿನನಿತ್ಯ ಜಗಳ ಮಾಡಿಕೊಂಡು ಪಾಠ ಮಾಡದೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಿರುವ ಕಿರುಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಶಿಕ್ಷಕಿಯರ ವಿರುದ್ಧ ಸಾರ್ವಜನಿಕರ ದೂರಿನ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ ಅವರು ಶಾಲೆಗೆ ಭೇಟಿ ನೀಡಿ ಶಿಕ್ಷಕಿಯರ ವಿರುದ್ಧ ಡಿಡಿಪಿಐ ಅವರಿಗೆ ವರದಿ ನೀಡಿದರೂ ಇದುವರೆಗೂ ಅಧಿಕಾರಿಗಳು ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸೋಮವಾರ ಗ್ರಾಪಂ ಕಚೇರಿಯೆದುರು ಗ್ರಾಮಸ್ಥರು ಮತ್ತು ಎಸ್ಡಿಎಂಸಿ ಸದಸ್ಯರು ಜಮಾಯಿಸಿ ಶಿಕ್ಷಕಿಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.



