ಮಾನವನಿಗೆ ಆರೋಗ್ಯವೇ ದೊಡ್ಡ ಸಂಪತ್ತು. ಆರೋಗ್ಯ ಒಂದಿದ್ದರೆ ಈ ಸಮಾಜದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಹಾಗಾಗಿ ಗುಣಮಟ್ಟದ ಪೌಷ್ಠಿಕ ಆಹಾರ ತಿನ್ನುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಜೆಎಂಫ್‍ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಎ.ವಿಶ್ವನಾಥ್ ಹೇಳಿದರು.
ಅವರು ಗುರುವಾರ ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಗೋಣಿಬೀಡು ಜೇಸಿಐ ವತಿಯಿಂದ ಏರ್ಪಡಿಸಿದ್ದ ವಿಶ್ವ ಪೌಷ್ಠಿಕಾಂಶದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳೇ ಈ ದೇಶದ ಪ್ರಜೆಗಳು. ಮುಂದೆ ಸಮಾಜ ನಡೆಸಿಕೊಂಡು ಹೋಗಬೇಕೆಂದರೆ ವಿದ್ಯಾರ್ಥಿಗಳು ಗುಣಮಟ್ಟದ ಆಹಾರ ಸೇವಿಸುವ ಜತೆಗೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ವೈದ್ಯರು, ಎಂಜಿನಿಯರ್ ಸೇರಿದಂತೆ ಉನ್ನತ ಹುದ್ದೆ ಅಲಂಕರಿಸುವ ಗುರಿ ಇಟ್ಟುಕೊಳ್ಳಬೇಕೆಂದು ಹೇಳಿದರು.
ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ನೋಡಿದಾಗ ಅವರಂತೆ ಆಂಗ್ಲ ಭಾಷೆ ಕಲಿಯಲು ಹಾಗೂ ಉತ್ತಮ ಅಂಕ ಗಳಿಸಲು ಸಾಧ್ಯವಿಲ್ಲವೆಂಬ ಮನೋಭಾವ ಬಿಡಬೇಕು. ಈಗಲೂ ಸರಕಾರಿ ಶಾಲೆಗಳು ಶೇ.100 ಫಲಿತಾಂಶ ಪಡೆಯುತ್ತಿವೆ. ಅಲ್ಲದೇ ಸರಕಾರಿ ಶಾಲೆಗಳಲ್ಲಿ ಓದಿದವರೆ ಉನ್ನತ ಸ್ಥಾನ ಹಾಗೂ ಮುಂಚೂಣಿಯಲ್ಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸರಕಾರಿ ಶಾಲೆಯಲ್ಲಿ ಅನುಭವಿ ಶಿಕ್ಷಕರಿರುತ್ತಾರೆ. ಅವರ ಮಾರ್ಗದರ್ಶನ ಪಡೆದು ಉತ್ತಮ ಶಿಕ್ಷಣ ಪಡೆಯಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೊಣಿಬೀಡು ಜೇಸಿಐ ಅಧ್ಯಕ್ಷ ಎಚ್.ಜಿ.ಆದರ್ಶ ವಹಿಸಿದ್ದರು. ಜೇಸಿಐ ಕಾರ್ಯದರ್ಶಿ ಜಗತ್, ವಕೀಲರ ಸಂಘದ ಅಧ್ಯಕ್ಷ ಬಿ.ಟಿ.ನಟರಾಜ್, ಕಾರ್ಯದರ್ಶಿ ಕೆ.ಸಿ.ಚಂದ್ರಶೇಖರ್, ಎಸ್‍ಡಿಎಂಸಿ ಅಧ್ಯಕ್ಷ ಎಚ್.ಎಂ.ರವಿ, ಸದಸ್ಯ ರಾಮಚಂದ್ರ, ಸತ್ಯನಾರಾಯಣ ಭಟ್ಟ, ರಂಜಿತ್, ಚೇತನ್ ಆರ್ಯ ಉಪಸ್ಥಿತರಿದ್ದರು.



