ಹದಗೆಟ್ಟು ಹೋಗಿರುವ ಆಲ್ದೂರು ವಸ್ತಾರೆ ರಸ್ತೆಯನ್ನು ದುರಸ್ಥಿ ಮಾಡಲು ಆಗ್ರಹಿಸಿ ಆಲ್ದೂರು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಭಾನುವಾರ ಸಂಜೆ ಆಲ್ದೂರು ಸಮೀಪದ ಬಿರಂಜಿ ಹೊಳೆಯ ಸಮೀಪ ಜಮಾಹಿಸಿದ ಬಿಜೆಪಿಯ ನೂರಾರು ಕಾರ್ಯಕರ್ತರು ಸರ್ಕಾರವ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ರಸ್ತೆಯಲ್ಲಿ ನಿರ್ಮಾಣವಾಗಿರುವ ದೊಡ್ಡ ದೊಡ್ಡ ಹೊಂಡಗಳಿಗೆ ಬಾಳೆಗಿಡಗಳನ್ನು ನೆಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ ; ಮೂಡಿಗೆರೆ ಕ್ಷೇತ್ರದ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ಕನಿಷ್ಠಪಕ್ಷ ರಸ್ತೆಯ ಗುಂಡಿಮುಚ್ಚಲು ಸಹ ಆಡಳಿತ ನಡೆಸುವವರಿಗೆ ಸಾಧ್ಯವಾಗಿಲ್ಲ. ಜನರು ನಿತ್ಯ ಹದಗೆಟ್ಟ ರಸ್ತೆಯಲ್ಲಿ ಸಾಗುವಾಗ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ನೀಡಲು ಹೋಗಿ ಸರ್ಕಾರ ದಿವಾಳಿಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರ ಸಂಪೂರ್ಣ ನಿಷ್ಕ್ರೀಯವಾಗಿದ್ದು, ಹಗರಣಗಳಲ್ಲಿ, ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದರು. ಆಲ್ದೂರು ವಸ್ತಾರೆ ನಡುವಿನ ರಸ್ತೆ, ಆಲ್ದೂರು ವಗರ್ ಕುಂದೂರು ರಸ್ತೆ ಸಂಪೂರ್ಣ ಹಾಳಾಗಿದ್ದು, ಕನಿಷ್ಠ ಗುಂಡಿಗಳನ್ನು ಮುಚ್ಚಲು ಸಹ ಕ್ಷೇತ್ರದ ಶಾಸಕರಿಗೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ನರೇಂದ್ರ, ಬಿಜೆಪಿ ಆಲ್ದೂರು ಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.




