ಎತ್ತಿನ ಹೊಳೆ ಯೋಜನೆಯ ನೀರು ಹರಿದು ಚಿಕ್ಕಮಗಳೂರು ತಾಲ್ಲೂಕಿನ ದೇವನೂರು ಕೆರೆ ಭರ್ತಿಯಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಅವರು ಭಾನುವಾರ ದೇವನೂರು ಕೆರೆಗೆ ಬಾಗೀನ ಅರ್ಪಿಸಿ ನಂತರ ಮಾತನಾಡಿದರು. ಸಖರಾಯಪಟ್ಟಣದ ಹಾಗೂ ಲಕ್ಯ ಹೋಬಳಿಗಳೆರಡು ಬರಗಾಲ ಪೀಡಿತ, ದೈವ ಕೃಪೆಯಿಂದ 2022 ರಲ್ಲಿ ದೇವನೂರು ಕೆರೆ ತುಂಬಿತ್ತು. ಹಿಂದೆ ಎತ್ತಿನ ಹೊಳೆ ಯೋಜನೆಗೆ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಇಂದು ಅದೇ ಎತ್ತಿನ ಹೊಳೆಯ ನೀರು ಹರಿದು ಬಂದು ದೇವನೂರು ಕೆರೆ ತುಂಬಿ ಹರಿಯುತ್ತಿದೆ ಎಂದರು. ಮನುಷ್ಯ ಪ್ರಯತ್ನದಿಂದಾಗಿ ಎತ್ತಿನ ಹೊಳೆ ನೀರು ಹರಿದು ಬಂದು ಬೆಳವಾಡಿ ಕೆರೆ, ಮಾಚೇನಹಳ್ಳಿ ಕೆರೆ, ದೇವನೂರು ಕೆರೆ ತುಂಬಿದೆ ಎಂದರು.
ಚಿಕ್ಕಮಗಳೂರು ಕ್ಷೇತ್ರದ 61 ಕೆರೆ ತುಂಬಿಸಲು ಭದ್ರಾ ಉಪ ಕಣಿವೆ ಮತ್ತು ರಣಘಟ್ಟ ಯೋಜನೆಗಳು ಅನುಷ್ಠಾನವಾಗಬೇಕಾಗುತ್ತದೆ. ಈ ಕಾಮಗಾರಿಗಳು ಮುಗಿದ ನಂತರ ಎಲ್ಲಾ ಊರಿನ ಕೆರೆಗಳು ತುಂಬುತ್ತವೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಶಾಶ್ವತವಾಗಿ ಕೆರೆಗಳನ್ನು ತುಂಬಿಸುವ ಸಲುವಾಗಿ 1281 ಕೋಟಿ ರೂ.ನ ಭದ್ರಾ ಉಪ ಕಣಿವೆ ಯೋಜನೆ ಮತ್ತೊಂದು ರಣಘಟ್ಟ ಯೋಜನೆಯಿಂದ ಕೆರೆ ತುಂಬಿಸುವ ಯೋಜನೆಯಡಿ ಟನಲ್ ಕಾಮಗಾರಿ 300 ಮೀ. ಮುಗಿದಿದೆಇನ್ನು 800 ಮೀ. ಪೂರ್ಣಗೊಂಡರೆ ಆ ಭಾಗದಿಂದಲೂ ನೀರು ಬರುತ್ತದೆ.
ಮೂರನೇ ಹಂತವಾದ ಕರಗಡದಿಂದ ನೀರು ತುಂಬಿಸುವ ಯೋಜನೆಯನ್ನು ಮಾಡಿದ್ದೇವೆ. ಯೋಗಾ, ಯೋಗ ಈ ಬಾರಿ ಎತ್ತಿನ ಹೊಳೆ ಪೈಪ್‌ಲೈನ್ ಕೆಲಸ ಆಗದ ಕಾರಣ ವೇದಾ ಕಣಿವೆಗೆ ನೀರನ್ನು ಬದಲಿಸಿದ ಪರಿಣಾಮ ಹಳೇಬೀಡು ಕೆರೆ, ಬೆಳವಾಡಿ ಕೆರೆಗೆ ತಾತ್ಕಾಲಿಕವಾಗಿ ನೀರು ಬಂದಿದೆ. ಅದನ್ನು ಶಾಶ್ವತವಾಗಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ ಎಂದರು.



