ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಗೆ ಸದಸ್ಯರನ್ನು ಕರೆಯದೇ ನಡವಳಿಯನ್ನು ಬರೆದು ಅವ್ಯವಹಾರ ನಡೆಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮನೋಜ್ ಆರೋಪಿಸಿದ್ದಾರೆ.

ಅವರು ಸೋಮವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 20-06-2024ರಂದು ಆಡಳಿತಾಧಿಕಾರಿಗಳ ಅವಧಿಯಲ್ಲಿ ಸಭೆಯೊಂದನ್ನು ನಡೆಸಿದಂತೆ ನಡಾವಳಿಯನ್ನು ಬರೆದಿದ್ದು, ಕಸಬಾ ಹೋಬಳಿ ಸರ್ವೆ ನಂ 54/2ರಲ್ಲಿ 1.10 ಎಕರೆ ಮುಸ್ತಾಕ್ ಅಹಮ್ಮದ್ ಎಂಬುವರಿಗೆ ಹಾಗೂ ಸರ್ವೆ ನಂ 135/1ರಲ್ಲಿ 1.12 ಎಕರೆ ಪ.ಪಂ. ಆಸ್ತಿಯನ್ನು ಜಾಹಿದ್ ಹುಸೇನ್ ಅವರಿಗೆ ನಿಯಮ ಬಾಹೀರವಾಗಿ ಲೇಯೌಟ್ ಗೆ ಅನುಮೋದನೆ ನೀಡಲಾಗಿದೆ.
ಆಗ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತಾಧಿಕಾರಿಯಾಗಿ ತಹಸೀಲ್ದಾರ್ ಆಡಳಿತವಿತ್ತು. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿರಲಿಲ್ಲ. ಹೀಗಿರುವಾಗ ವಿಶೇಷ ಸಾಮಾನ್ಯ ಸಭೆ ನಡೆಸದೇ ತಹಸೀಲ್ದಾರ್ ಸಹಿ ಇಲ್ಲದೇ ಸದಸ್ಯರ ಗಮನಕ್ಕೆ ತರದೇ ನಕಲಿ ನಡವಳಿ ಸೃಷ್ಟಿ ಮಾಡಿ ಅಕ್ರಮ ಎಸಗಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ಈ ಅಕ್ರಮದಲ್ಲಿ ಬಾಗಿ ಆಗಿರುವ ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ದ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪ.ಪಂ. ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುದು ಪಕ್ಷದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಎರಡು ಅಕ್ರಮದ ಜತೆಗೆ ಸರ್ವೆ ನಂ 135/2ರಲ್ಲಿ ಖರಾಬ್ ಸೇರಿದಂತೆ 2.13 ಎಕರೆ ಪ.ಪಂ. ಆಸ್ತಿಯನ್ನು, ಸರ್ವೆ ನಂ 43/13ರಲ್ಲಿ 20 ಗುಂಟೆ ರುದ್ರೇಶ್ ಎಂಬುವರಿಗೆ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಗೊಂಡಿದ್ದು, ಪ.ಪಂ. ಕಚೇರಿಗೆ ಖಾತೆ ಮಾಡಲು ಬಂದಿರುವ ಅರ್ಜಿಗಳನ್ನು ಚರ್ಚಿಸಿ ತೀರ್ಮಾನಿಸಿರುವ ವಿಚಾರವನ್ನು ನಡವಳಿಯಲ್ಲಿ ಉಲ್ಲೇಖಿಸಲಾಗಿದೆ. ವಾರ್ಡ್ ನಂ 7 ರಲ್ಲಿ ಪಟ್ಟಣ ಪಂಚಾಯಿತಿ ನಿವೇಶವನ್ನು ಅಕ್ರಮವಾಗಿ ಸುನಿತಾ ಎಂಬುವವರಿಗೆ ಖಾತೆ ಮಾಡಿ ಕೊಡಲಾಗಿದೆ. ಮೂಡಿಗೆರೆ ಸಂತೃಪ್ತಿ ಬಾರ್ ಪಕ್ಕದಲ್ಲಿ ಪಟ್ಟಣ ಪಂಚಾಯಿತಿ ಜಾಗವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಡಲಾಗಿದೆ. ಪಟ್ಟಣದ ಹೂವಿನ ಅಂಗಡಿ ಹಂಚಿಕೆಯಲ್ಲಿಯೂ ಅಕ್ರಮ ನಡೆದಿದೆ. ಇಂತಹ ಅನೇಕ ವಿಚಾರದಲ್ಲಿ ಅಕ್ರಮಗಳು ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ ; ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಹಲವು ಅಕ್ರಮಗಳು ನಡೆದಿದ್ದು, ಇದರಲ್ಲಿ ಕೆಲವು ಪ್ರಭಾವಿಗಳು ಶಾಮೀಲಾಗಿರುವ ಶಂಕೆಯಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದೇ ಹೋದರೆ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಕಾರ್ಯದರ್ಶಿ ಪ್ರಶಾಂತ್ ಬಿಳಗುಳ, ಜಿಲ್ಲಾ ವಕ್ತಾರ ನಯನ ತಳವಾರ, ತಾಲೂಕು ವಕ್ತಾರ ವಿನಯ್ ಹಳೆಕೋಟೆ, ಶ್ರೇಷ್ಠಿ, ಜನಾರ್ಧನ ಶೆಟ್ಟಿ ಉಪಸ್ಥಿತರಿದ್ದರು.



