ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ನೆರೆಯ ಹಾಸನ, ಕೊಡಗು ಜಿಲ್ಲೆಗಳ ಕಾಫಿ ಬೆಳೆಗಾರರ ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಆನ್‍ಲೈನ್ ಮೂಲಕ ಕಾಫಿತೋಟಗಳ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಲೀಡ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಾಫಿ ಬೆಳೆಗಾರರ ಸುಸ್ತಿ ಸಾಲ ವಸೂಲಾತಿಗೆ ಸಂಬಂಧಪಟ್ಟಂತೆ ಆನ್‌ಲೈನ್ ಹರಾಜು ಮೂಲಕ ಕಾಫಿ ಭೂಮಿಯನ್ನು ಹರಾಜು ಮಾಡುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳ ಧೋರಣೆಯನ್ನು ವಿರೋಧಿಸಿ ಇತ್ತೀಚೆಗೆ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗದಲ್ಲಿ ರೈತರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ನೀಡಿದ ಭರವಸೆಗೆ ಪೂರಕವಾಗಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಫಿ ಬೆಳೆಗಾರರ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ಸಂಸದರು ಈ ಸೂಚನೆ ನೀಡಿದರು.
ಸಭೆಯಲ್ಲಿ ಬೆಳೆಗಾರರ ಸಂಘದ ಪ್ರತಿನಿಧಿಗಳ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ; ಕೆನರಾ ಬ್ಯಾಂಕ್ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾವಿರಾರು ಕಾಫಿ ಬೆಳೆಗಾರರು ಕೃಷಿ ಚಟುವಟಿಕೆಗಳಿಗಾಗಿ ಕೃಷಿ ಸಾಲ ಪಡೆದುಕೊಂಡಿದ್ದಾರೆ. ಆದರೆ ಅತೀವೃಷ್ಟಿ, ಅನಾವೃಷ್ಟಿಯಿಂದಾಗಿ ಬೆಳೆ ಕೈಗೆ ಸಿಗದೇ ಬೆಳೆಗಾರರು ಸಕಾಲಕ್ಕೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಮಾಡದ ಬೆಳೆಗಾರರಿಗೆ ಬ್ಯಾಂಕ್‍ಗಳು ನೋಟಿಸ್ ನೀಡಿ ಕಿರುಕುಗಳ ನೀಡುತ್ತಿವೆ. ಕೆನರಾ ಬ್ಯಾಂಕ್ ಕಾಫಿತೋಟಗಳನ್ನು ಆನ್‍ಲೈನ್ ಮೂಲಕ ಹರಾಜು ಹಾಕುವ ಪ್ರಕ್ರಿಯೆ ನಡೆಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಲ ಮರುಪಾವತಿಗೆ ಕಾಲಾವಕಾಶ ಕೇಳಿದರೂ ಇದಕ್ಕೆ ಬ್ಯಾಂಕ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬೆಳೆಗಾರರು ಹವಾಮಾನ ವೈಫರೀತ್ಯದಿಂದಾಗಿ ಭಾರೀ ಸಮಸ್ಯೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್‍ಗಳು ಸರ್ಫೇಸಿ ಕಾಯ್ದೆಯ ಸಂಬಂಧ ನ್ಯಾಯಾಲಯದ ಆದೇಶ ಮುಂದಿಟ್ಟುಕೊಂಡು ತೋಟಗಳನ್ನು ಆನ್‍ಲೈನ್ ಮೂಲಕ ಹರಾಜು ಹಾಕಲು ಮುಂದಾಗಿರುವುದು ಬ್ಯಾಂಕ್‍ಗಳ ಸರ್ವಾಧಿಕಾರಿ ಧೋರಣೆಯಾಗಿದೆ ಎಂದ ಮುಖಂಡರು, ಸಾಲ ಮರುಪಾವತಿ ಮಾಡಲು ಕಾಲವಕಾಶ ನೀಡದ ಕೆನರಾ ಬ್ಯಾಂಕ್‍ನ ಹಿರಿಯ ಅಧಿಕಾರಿಗಳು ಒನ್ ಟೈಮ್ ಸೆಟ್ಲಮೆಂಟ್ ಮಾಡಿಕೊಳ್ಳಲೂ ಬ್ಯಾಂಕ್ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಸಂದದ ಕೋಟ ಶ್ರೀನಿವಾಸ್ ಪೂಜಾರಿ ಅವರಲ್ಲಿ ಅಳಲು ತೋಡಿಕೊಂಡರು. ನಿರಾಕರಿಸುತ್ತಿದ್ದಾರೆಂದು ಬೆಳೆಗಾರರು ಸಂಸದರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸರ್ಫೇಸ್ ಕಾಯ್ದೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರದೊಂದಿಗೆ ಸಭೆ ನಡೆಸಲಾಗುವುದು. ಕಾಫಿ ಬೆಳೆಗಾರರು ಸಂಕಷ್ಟದಲ್ಲಿರುವಾಗ ಅವರ ಭೂಮಿಯನ್ನು ಹರಾಜು ಹಾಕಿದರೇ ರೈತರಿಗೆ ಭಾರೀ ಸಮಸ್ಯೆಯಾಗಲಿದೆ. ಕಾಫಿ ತೋಟಗಳನ್ನು ಹರಾಜು ಮಾಡುವುದನ್ನು ಬ್ಯಾಂಕ್‍ಗಳು ಅನಿರ್ದಿಷ್ಠಾವಧಿಗೆ ಮುಂದೂಡಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಬ್ಯಾಂಕ್‍ನ ಅಧಿಕಾರಿಗಳು ಸಮ್ಮತಿಸಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯಕ್ರಮವಹಿಸಲಾಗುವುದು ಎಂದು ಬೆಳೆಗಾರರಿಗೆ ಭರವಸೆ ನೀಡಿದರು.
ಆನ್ ಲೈನ್ ಹರಾಜು ಪ್ರಕ್ರಿಯೆಯನ್ನು ಆರು ತಿಂಗಳ ಮಟ್ಟಿಗೆ ಮುಂದೂಡಲು ಬ್ಯಾಂಕುಗಳು ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ. ಈ ನಡುವೆ ಸರ್ಕಾರದ ಮಟ್ಟದಲ್ಲಿ ಸರ್ಫಾಸಿ ಕಾಯ್ದೆಯಿಂದ ಕಾಫಿ ಸಾಲವನ್ನು ಹೊರಗಿಡಲು ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಸಂಸದರು ಭರವಸೆ ನೀಡಿದ್ದಾರೆ. ಈ ನಿರ್ಧಾರದಿಂದ ಸುಸ್ತಿ ಸಾಲವಾಗಿರುವ ಬೆಳೆಗಾರರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಸಭೆಯಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸುಜೇಂದ್ರ, ಕರ್ನಾಟಕ ಬೆಳೆಗಾರರ ಒಕ್ಕೂಟ, ಮೂಡಿಗೆರೆ ಬೆಳೆಗಾರರ ಸಂಘ ಸೇರಿದಂತೆ ವಿವಿಧ ಕಾಫಿ ಬೆಳೆಗಾರರ ಸಂಘ, ರೈತ ಸಂಘಟನೆಗಳ, ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಬೆಳೆಗಾರರು ಉಪಸ್ಥಿತರಿದ್ದರು.



