ಮೈಸೂರಿನ ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರ, ಚಿಕ್ಕಮಗಳೂರಿನ ಆರಾಧನಾ ಕಲ್ಚರಲ್ ಟ್ರಸ್ಟ್ ಆಶ್ರಯದಲ್ಲಿ ಚಿಕ್ಕಮಗಳೂರು ನಗರದ ಕುವೆಂಪು ಕಲಾ ಮಂದಿರದಲ್ಲಿ ಭಾನುವಾರ ಸಂಜೆ ನಡೆದ ಸ್ಪರ್ಶ ಆಸ್ಪತ್ರೆಯ ವೈದ್ಯೆ ಡಾ.ವರ್ಷಿಣಿ ಎಸ್. ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನೆರವೇರಿತು.
ಚಲನಚಿತ್ರ ನಟ, ನಿರ್ದೇಶಕ, ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತ ಅಧ್ಯಕ್ಷ ಕೆ.ಸುಚೇಂದ್ರ ಪ್ರಸಾದ್ ಮಾತನಾಡಿ ; ಪ್ರಬುದ್ಧತೆ, ಪ್ರಾಮಾಣಿಕತೆ ಜೊತೆಗೆ ಪ್ರೌಢ ಚಿಂತನೆ ಇರದೆ ಸಂಸ್ಕೃತಿಯನ್ನಾಗಲಿ, ಪರಂಪರೆಯನ್ನಾಗಲಿ ಪೊರೆಯುವುದು ಸಾಧ್ಯವಿಲ್ಲ. ನಮ್ಮ ಹಿರಿಯರು ಕಲೆ ಹಾಗೂ ಸಂಸ್ಕೃತಿಯ ದೊಡ್ಡ ಪರಂಪರೆಯನ್ನೇ ನಮಗೆ ಬಳುವಳಿಯಾಗಿ ಉಳಿಸಿ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವುಗಳ ಮೇಲಿನ ಆಸಕ್ತಿ ಕ್ಷೀಣಿಸುತ್ತಿರುವುದು ದುರದೃಷ್ಟಕರ. ನಮ್ಮ ನೆಲದಲ್ಲೇ ಜನಿಸಿದ ಭರತನಾಟ್ಯ ಶಾಸ್ತ್ರದ ರಥವನ್ನು ಇಲ್ಲಿಯವರೆಗೂ ಎಳೆದು ತರುವ ಕೆಲಸ ಆಗಿದೆ. ಅದನ್ನು ಮುಂದುವರಿಸುವುದು ಕಲಾ ಪೋಷಕರ ಕೈಯಲ್ಲಿದೆ. ಈ ನಿಟ್ಟಿನಲ್ಲಿ ಪಣತೊಡಬೇಕಿದೆ. ನಮ್ಮ ಹಿರಿಯರು ಬೋಧಿಸಿದ ವಿಧಿ-ವಿಧಾನಗಳು, ಹೇಳಿದ ಕಿವಿಮಾತುಗಳು ಸಾದ್ಯಂತ ಪಾಲನೆಯಾಗುವುದು ಅಗತ್ಯ. ಇದರಿಂದ ಆತ್ಮೋದ್ಧಾರದ ಜೊತೆಗೆ ಪರೋದ್ಧಾರವೂ ಆದೀತು. ಇಲ್ಲದಿದ್ದರೆ ಅವುಗಳ ಹೆಜ್ಜೆ ಗುರುತೇ ಅಳಿಸೀತು ಎನ್ನುವ ಎಚ್ಚರಿಕೆ ನಮ್ಮೊಳಗಿರಬೇಕು ಎಂದು ಹೇಳಿದರು.
ಸುಗಮ ಸಂಗೀತ ಗಂಗಾದ ಉಪಾಧ್ಯಕ್ಷ, ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಮಾತನಾಡಿ, ಭಾವನೆಗಳನ್ನು ಅಂತರಂಗದ ಸೌಂದರ್ಯದ ಪರಿಕಲ್ಪನೆಗಳಿಗೆ ಭಾಷ್ಯವನ್ನು ಬರೆಯುವ ಕಲೆ ಭರತನಾಟ್ಯ. ಡಾ.ವರ್ಷಿಣಿಯ ಭರತನಾಟ್ಯ ಪ್ರದರ್ಶನದ ಹಿಂದೆ ಸಾಕಷ್ಟು ದಿನಗಳ ಪರಿಶ್ರಮವಿದೆ. ಆಕೆಗೆ ಯಶಸ್ಸು ದೊರೆಯಲಿ ಎಂದು ಹಾರೈಸಿದರು.
ಹಾಸನ ನಾಟ್ಯ ಕಲಾ ನಿವಾಸದ ನಿರ್ದೇಶಕ ವಿದ್ವಾನ್ ಹೆಚ್.ಆರ್.ಉನ್ನತ್ ಮಾತನಾಡಿ, ರಂಗ ಪ್ರವೇಶ ಎಂದ ಕೂಡಲೇ ಮೊದಲಿಗೆ ಆಗುವುದು ಆತಂಕ. ರಂಗದ ಮೇಲೆ ಸತತ ಎರಡರಿಂದ ಎರಡೂವರೆ ಗಂಟೆಗಳ ಕಾಲ ನೃತ್ಯ ಪ್ರದರ್ಶನ ನೀಡಬೇಕಾಗುತ್ತದೆ. ಆದರೆ ರಂಗದ ಹಿಂದೆ ಸಾಕಷ್ಟು ವರ್ಷಗಳ ಸಾಧನೆ ಮಾಡುವುದು ಅಗತ್ಯ. ಹಂತ ಹಂತವಾಗಿ ಕಲಾವಿದರಲ್ಲಿ ಆಗುವ ಪ್ರಬುದ್ಧತೆ ಅದು. ಒಟ್ಟಿನಲ್ಲಿ ಡಾ.ವರ್ಷಿಣಿಯ ರಂಗ ಪ್ರವೇಶ ಯಶಸ್ವಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ.ವರ್ಷಿಣಿ ಅವರ ಗುರು, ಮೈಸೂರು ನೃತ್ಯಗುರು ಸಂಸ್ಥೆಯ ಮುಖ್ಯಸ್ಥೆ ವಿದುಷಿ ಡಾ.ಕೃಪಾ ಫಡ್ಕೆ, ನಗರದ ಶ್ರೀ ಕಂಠೇಶ್ವರ ಕಲಾ ಮಂದಿರದ ವಿದುಷಿ ಸುಮನಾ ರಾಮಚಂದ್ರ, ಕೂದುವಳ್ಳಿಯ ಸುಸ್ವರ ಸಂಗೀತಾಲಯದ ವಿದುಷಿ ಉಮಾ ನಾಗರಾಜ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಇದೇ ವೇಳೆ ಸ್ಪರ್ಶ ಆಸ್ಪತ್ರೆಯ ಡಾ.ಚಂದ್ರಶೇಖರ್ ಸರ್ಜಾ ಅವರನ್ನೂ ಗೌರವಿಸಲಾಯಿತು.
ಅಮೋಘ ಸುಮಾರು ಎರಡೂವರೆ ಗಂಟೆಗಳ ಕಾಲ ನೃತ್ಯ ಪ್ರದರ್ಶನ ನೀಡಿದ ಡಾ.ವರ್ಷಿಣಿಯ ಭರತನಾಟ್ಯ ವೈವಿಧ್ಯಮಯ ಪ್ರಕಾರಗಳೊಂದಿಗೆ ಗಮನ ಸೆಳೆಯಿತು. ಉತ್ತಮ ಹಿಮ್ಮೇಳ, ಸುಶ್ರಾವ್ಯ ಸಂಗೀತ, ಬೆಳಕು, ಸೂಕ್ತವಾದ ಪ್ರಸಾದನ ವ್ಯವಸ್ಥೆ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ನಟುವಾಂಗದಲ್ಲಿ ವಿದುಷಿ ಪೂಜಾ ಸುಗಮ್, ಹಾಡುಗಾರಿಕೆಯಲ್ಲಿ ವಿದ್ವಾನ್ ಕರುಣಾಕರನ್, ಮೃದಂಗದಲ್ಲಿ ನಾಗೈ ಪಿ.ಶ್ರೀರಾಮ್, ಕೊಳಲುವಿನಲ್ಲಿ ವಿದ್ವಾನ್ ಎ.ಪಿ.ಕೃಷ್ಣಪ್ರಸಾದ್ ಸಾಥ್ ನೀಡಿದರು.
ಸ್ವಾಗತಿಸಿದ ಆರಾಧನಾ ಕಲ್ಚರಲ್ ಟ್ರಸ್ಟ್‌ನ ಮುಖ್ಯಸ್ಥೆ ಹಾಗೂ ಡಾ.ವರ್ಷಿಣಿ ಅವರ ತಾಯಿ ಸುಮಾಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಅಕ್ಷತಾ ಪಟವರ್ಧನ್ ನೆರವೇರಿಸಿದರು.

ಡಾ. ವರ್ಷಿಣಿ ಕಿರುಪರಿಚಯ
ಚಿಕ್ಕಮಗಳೂರಿನ ಶ್ರೀಮತಿ ಸುಮಾ ಪ್ರಸಾದ್ ಮತ್ತು ಶ್ರೀ ಎಸ್.ಕೆ. ಪ್ರಸಾದ್ ಅವರ ಪುತ್ರಿ ಕುಮಾರಿ ವರ್ಷಿಣಿ ಬಾಲ್ಯದಿಂದಲೇ ನೃತ್ಯ ಹಾಗೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದು ಅತ್ಯಂತ ಕಿರಿಯ ವಯಸ್ಸಿನಲ್ಲೇ ನಾಟ್ಯಾರಂಭ ಮಾಡಿದ್ದು, ಚಿಕ್ಕಮಗಳೂರಿನ ಪ್ರತಿಷ್ಠಿತ ನೃತ್ಯ ಸಂಸ್ಥೆ ಶ್ರೀಕಂಠೇಶ್ವರ ಕಲಾಮಂದಿರದ ಸುಮನಾ ರಾಮಚಂದ್ರರವರ ಬಳಿ ಮತ್ತು ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಕು. ವರ್ಷಿಣಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಗರದ ಸಾಯಿ ಏಂಜಲ್ಸ್‌ನಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ, ಪ್ರೌಢ ಶಾಲಾ ಶಿಕ್ಷಣವನ್ನು ಸಂತ ಜೋಸೆಫರ ಬಾಲಕಿಯರ ಶಾಲೆಯಲ್ಲಿ ಹಾಗೂ ಎಂಇಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದಾರೆ.
ಬಾಲ್ಯದಿಂದಲೂ ವೈದ್ಯೆಯಾಗುವ ಹಂಬಲ ಹೊಂದಿದ್ದ ವರ್ಷಿಣಿ ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಬ್ಯಾಚುಲರ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ್‌ನಲ್ಲಿ ವೈದ್ಯಕೀಯ ಪದವಿ ಪಡೆದಿದ್ದು, ಪ್ರಸ್ತುತ ಸ್ನಾತಕೋತ್ತರ ಪದವಿಗಾಗಿ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಾಟೆಟಿಕ್ಸ್ ವಿಷಯದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ನಗರದ ಪ್ರಖ್ಯಾತ ವೈದ್ಯರಾದ ಡಾ. ಚಂದ್ರಶೇಖರ್ ಸರ್ಜಾ ಅವರ ಸ್ಪರ್ಶ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ತಾಯಿ ಶ್ರೀಮತಿ ಸುಮಾ ಅವರು ಚಿಕ್ಕಮಗಳೂರು ಸಾಂಸ್ಕೃತಿಕ ವಲಯದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಸಂಗೀತ ಶಿಕ್ಷಕಿಯಾಗಿ, ನಿರೂಪಕಿಯಾಗಿ, ಗಾಯಕಿಯಾಗಿ ಹೆಸರು ಮಾಡಿದ್ದಾರೆ. ತಂದೆ ಎಸ್.ಕೆ. ಪ್ರಸಾದ್ ಅವರು ವಿಮಾ ಸಲಹೆಗಾರರಾಗಿದ್ದು, ಪತ್ನಿ ಮತ್ತು ಮಕ್ಕಳ ಸಾಂಸ್ಕೃತಿಕ ಚುಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ವರ್ಷಿಣಿಯವರ ಸಹೋದರ ಶ್ರೀಹರಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದು, ಜೊತೆಗೆ ತಬಲ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.



