ಮೂರು ಬಾರಿ ಗ್ರಾಮ ಸಭೆ ಕರೆದರು ಆ ದಿನ ಅಧಿಕಾರಿಗಳು ಬರದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿದ್ದು, ಜನಗಳಿಗೆ ಉತ್ತರ ಕೊಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ ಕಳಸ ತಾಲ್ಲೂಕು ಸಂಸೆ ಗ್ರಾಮ ಪಂಚಾಯಿತಿ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.
ಅಧಿಕಾರಿಗಳು ಹೇಳಿದ ದಿನವೇ ಗ್ರಾಮ ಸಭೆಯನ್ನು ಪಂಚಾಯತಿ ಅಧ್ಯಕ್ಷರು ನಿಗದಿ ಮಾಡಿದ್ದರು. ಆದರೆ ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ. ಅವರು ಹೇಳಿದ ದಿನ ಸಭೆ ಕರೆದರೂ ಯಾರೂ ಬಂದಿಲ್ಲ ಎಂದು ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ನಡೆದ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಪಿಡಿಓ, ಕಾರ್ಯದರ್ಶಿ, ಅಕೌಂಟೆಂಟ್, ಇಓ ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೆಲಸ ನಡೆಯದ ಕಾರಣ ಜನರಿಂದ ದಿನನಿತ್ಯ ಕಿರಿಕಿರಿ ಅನುಭವಿಸಬೇಕಾಗಿದೆ ಎಂದು ಗ್ರಾಮಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.


