ಕಾಫಿನಾಡಿಗೆ ಮತ್ತೆ ಬೀಟಮ್ಮ ಗ್ಯಾಂಗ್‌ನಲ್ಲಿದ್ದ ಕೆಲವು ಕಾಡಾನೆಹಿಂಡು ಲಗ್ಗೆ ಇಟ್ಟಿದ್ದು, ಕಾಡಾನೆಗಳ ಹಿಂಡನ್ನ ಕಂಡು ಜನರು ಎದ್ದು,ಬಿದ್ದು ಓಟಕಿತ್ತಿದ್ದಾರೆ. ಈಗ ಹಣ್ಣಾಗಿರುವ ಕಾಫಿಯನ್ನು ಕಾರ್ಮಿಕರು ಕೊಯ್ಲುಮಾಡುತ್ತಿರುವಾಗಲೇ ಕಾಡಾನೆ ಹಿಂಡು ತೋಟಕ್ಕೆ ಲಗ್ಗೆಇಟ್ಟಿದ್ದು, ಕಾರ್ಮಿಕರು ಜೀವಭಯದಿಂದ ಮನೆಸೇರಿಕೊಂಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ಬೀಟಮ್ಮ ಗುಂಪಿನ ಆನೆಗಳು ಕಾಣಿಸಿಕೊಂಡಿವೆ. ತುಡುಕೂರು ಗ್ರಾಮದ ಉದಯಗೌಡ ಮತ್ತು ಮಹೇಶಗೌಡ ಎಂಬುದವರ ತೋಟದಲ್ಲಿ ಗೇಟ್ ಮುರಿದು ಸುಮಾರು 20 ಆನೆಗಳು ತೋಟಕ್ಕೆ ನುಗ್ಗಿದ್ದರಿಂದ ಕಾಫಿಹಣ್ಣನ್ನು ರಸ್ತೆಯಲ್ಲಿ ಚೆಲ್ಲಿಕೊಂಡು ಕಾರ್ಮಿಕರು ಓಟ ಕಿತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿನೀಡಿ ಪರಿಶೀಲಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಇದೆ ಹಿಂಡು ಸಕಲೇಶಪುರದಿಂದ ಬೇಲೂರು, ಕೆ.ಆರ್.ಪೇಟೆಯ ಮೂಲಕ ಚಿಕ್ಕಮಗಳೂರು ತಾಲೂಕನ್ನು ಪ್ರವೇಶಿಸಿದ್ದವು. ವಸ್ತಾರೆ, ಆಣೂರು ಜೋಳದಾಳ್‌ಮೂಲಕ ತಳಿಹಳ್ಳ, ಜಗ್ಗನಹಳ್ಳಿಯ ತೋಟಗಳಲ್ಲಿ ಬೀಡುಬಿಟ್ಟಿದ್ದವು. ಇನ್ನೇನು ಭದ್ರಾಅಭಯಾ ರಣ್ಯಕ್ಕೆ ಮುಖಮಾಡುತ್ತವೆ ಎನ್ನುವಷ್ಟರಲ್ಲಿ ಯೂಟರ್ನ್ ಹೊಡೆದು ನಲ್ಲೂರು ಗುಡ್ಡಕ್ಕೆ ಆಗಮಿಸಿದ್ದವು.
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಆನೆಕಾವಲು ಪಡೆ, ಪೊಲೀಸರು ಗೃಹರಕ್ಷಕ ಸಿಬ್ಬಂದಿಗಳು ಪಟಾಕಿ ಸಿಡಿಸಿ ಬಂದದಾರಿಯಲ್ಲೇ ಮರಳಿಸಲು ಯತ್ನಿಸಿದ್ದರು. ಮೂಗ್ತಿಹಳ್ಳಿಯಲ್ಲಿರುವ ಆಂಬರ್ ವ್ಯಾಲಿ ಶಾಲೆಯ ಆಟದ ಮೈದಾನದ ಪಕ್ಕದಲ್ಲಿರುವ ಅರಣ್ಯ ನೆಡುತೋಪಿನಲ್ಲಿ ಮರಿ ಆನೆಗಳೊಂದಿಗೆ ಬೀಡುಬಿಟ್ಟಿದ್ದವು.
ಬಳಿಕ ಮತ್ತಾವರ ಅರಣ್ಯದಮೂಲಕ ತಾವು ಬಂದದಾರಿಯಲ್ಲೆ ಹಿಂದಿರುಗಲು ಅಣಿಯಾಗಿದ್ದವು. ಚಿಕ್ಕಮಗ ಳೂರು ತಾಲೂಕು ಗಡಿದಾಟಿ ಬೇಲೂರು ಕಡೆಗೆ ಮುಖಮಾಡಿದಾಗ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಬೀಟಮ್ಮ ಗ್ಯಾಂಗ್ ಕಾಫಿನಾಡಿಗೆ ಬಂದಿದ್ದು, ತೋಟದಲ್ಲಿರುವ ಬಗನೆ, ಬಾಳೆಗಿಡಗಳ ಮೇಲೆ ಕಣ್ಣುಹಾಕಿವೆ. ಕಾಡಾನೆ ನಿಗ್ರಹ ಪಡೆಯ ಸಿಬ್ಬಂದಿಗಳು ಈ ಆನೆಗಳ ಚಲನವಲನದ ಮೇಲೆ ನಿಗಾಇಟ್ಟಿದ್ದಾರೆ.
ಆಲ್ದೂರು ಸಮೀಪದ ತುಡಕೂರು, ಮಡೆನೆರಲು, ನೊಜ್ಜೆಪೆಟೆ, ಹಳೆ ಆಲ್ದೂರು, ಆಲ್ದೂರು ಹೊಸಳ್ಳಿ, ಎಲಗುಡಿಗೆ ಈ ಗ್ರಾಮದ ಸುತ್ತ ಮುತ್ತ ಇರುವ ಗ್ರಾಮಸ್ಥರು ಹಾಗೂ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ವಾಹನ ಸವಾರರೂ ಎಚ್ಚರಿಕೆಯಿಂದ ಇರಬೇಕಾಗಿ ಕೋರಲಾಗಿದೆ.
ಸಕಲೇಶಪುರ ಆಲೂರು ಭಾಗದಲ್ಲಿದ್ದ ಬೀಟಮ್ಮ ಮತ್ತು ಭುವನೇಶ್ವರಿ ಗುಂಪಿನ ಆನೆಗಳಲ್ಲಿ ಒಟ್ಟು 20 ಆನೆಗಳು ಈಗ ಚಿಕ್ಕಮಗಳೂರು ಜಿಲ್ಲೆಗೆ ಬಂದಿವೆ. ಚೀಕನಹಳ್ಳಿ, ಚಟ್ನಳ್ಳಿ, ನಂದೀಪು ಮಾರ್ಗವಾಗಿ ಈಗ ಆಲ್ದೂರು ಭಾಗದಲ್ಲಿ ಸಂಚರಿಸುತ್ತಿವೆ. ಈ ಗುಂಪಿನಲ್ಲಿ ಒಂದು ಮರಿಯಿದ್ದು, ಮತ್ತೊಂದು ಆನೆ ಮದಬಂದಿದ್ದು, ಈ ಗುಂಪನ್ನು ಸೂಕ್ಷ್ಮವಾಗಿ ನಿರ್ವಹಿಸುವ ದೊಡ್ಡ ಸವಾಲಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆನೆ ಕಾರ್ಯಪಡೆ ಸಿಬ್ಬಂದಿ ಇವುಗಳ ಚಲನವಲನದ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಸ್ಥಳೀಯ ಜನರಿಗೆ ಆನೆಗಳ ಚಲನೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಈ ಆನೆಗಳ ಗುಂಪಿನಲ್ಲಿ ಯಾವುದೇ ಆನೆಗೆ ಕಾಲರ್ ಐಡಿ ಇಲ್ಲದೇ ಇರುವುದು ಸಹ ಅವುಗಳ ಚಲನ ವಲನಗಳ ಬಗ್ಗೆ ನಿಖರ ಮಾಹಿತಿ ಅರಿಯಲು ಅಡ್ಡಿಯಾಗಿದೆ. ಈ ಗುಂಪನ್ನು ಬಂದ ದಾರಿಯಲ್ಲೇ ಮತ್ತೆ ಹಿಂದಿರುಗುವಂತೆ ಮಾಡಲು ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ. ಜನರು ಆದಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ.
ರಮೇಶ್ ಬಾಬು, ಡಿಎಫ್ಓ, ಚಿಕ್ಕಮಗಳೂರು



