ಅನಾಫಿಲ್ಯಾಕ್ಸಿಸ್ ರಿಯಾಕ್ಷನ್ ನಿಂದ ನಿಧನರಾದ ಮಂಗಳೂರು ಸೇಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್ ಅವರ ಅಂಗಾಂಗಗಳನ್ನು ಐದು ನಿರ್ಗತಿಕ ರೋಗಿಗಳಿಗೆ ಬುಧವಾರ ದಾನ ಮಾಡಲಾಯಿತು.
ಗ್ಲೋರಿಯಾ ರೊಡ್ರಿಗಸ್ (23 ವರ್ಷ) ಅವರ ಅಂಗಗಳನ್ನು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇತರೆ ರೋಗಿಗಳಿಗೆ ಕಸಿ ಮಾಡಲಾಗಿದ್ದು, ಎರಡು ವಿಶೇಷ ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಅಂಗಾಂಗ ಕಸಿ ಮಾಡಿದ್ದಾರೆ ಎನ್ನಲಾಗಿದೆ.
ರೋಡ್ರಿಗಸ್ ಅವರ ಯಕೃತ್ತನ್ನು ಎಜೆ ಆಸ್ಪತ್ರೆಗೆ, ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ, ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ, ಮೂತ್ರಪಿಂಡವನ್ನು ಕೆಎಂಸಿ ಮಣಿಪಾಲಕ್ಕೆ ಮತ್ತು ಚರ್ಮ ಮತ್ತು ಕಾರ್ನಿಯಾವನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರು ಬಜ್ಪೆ ನಿವಾಸಿ ಗ್ರೇಶನ್ ಅಲೆಕ್ಸ್ ರೋಡ್ರಿಗಸ್ ಮತ್ತು ಗ್ರೆಟ್ಟಾ ಫ್ಲೇವಿಯಾ ದಂಪತಿಯ ಪುತ್ರಿಯಾಗಿರುವ ಗ್ಲೋರಿಯಾ ಒಂದು ವರ್ಷದ ಹಿಂದಷ್ಟೇ ಅಲೋಶಿಯಸ್ ಕಾಲೇಜಿನಲ್ಲಿಯೇ ಸ್ನಾತಕೋತ್ತರ ಪದವಿ ಪೂರೈಸಿ ಅದೇ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದ್ದರು. ಕೆಲವು ದಿನಗಳ ಹಿಂದೆ ಊಟ ಮಾಡಿದ ಬಳಿಕ ಅವರ ದೇಹದಲ್ಲಿ ಅಲರ್ಜಿ ಕಾಣಿಸಿಕೊಂಡಿತ್ತು. ಬಳಿಕ ಇದು ಉಲ್ಬಣಗೊಂಡ ಪರಿಣಾಮ ಮೆದುಳಿಗೆ ಹಾನಿಯಾಗಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಯುವತಿಯ ರಕ್ಷಣೆಗೆ ಶಸ್ತ್ರಚಿಕಿತ್ಸೆಗಳನ್ನು ಮಾಡಿದರೂ ಕೂಡ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.
ವೈದ್ಯರ ಎರಡು ತಂಡಗಳು ಆಕೆಯನ್ನು 2 ಬಾರಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಪರಿಣಾಮ ಆಕೆಯ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ದೃಢಪಡಿಸಿದರು. ಆ ಬಳಿಕವೇ ಕುಟುಂಬಸ್ಥರು ಅವರ ಅಂಗಾಂಗ ದಾನಕ್ಕೆ ಮುಂದಾದರು ಎಂದು ಹೇಳಲಾಗಿದೆ.
ಬುಧವಾರ ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆ ವೇಳೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರು ಹಾಜರಿದ್ದರು. ಪ್ರತಿಭಾನ್ವಿತ ಮತ್ತು ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕಿಯಾಗಿದ್ದ ಗ್ಲೋರಿಯಾ ಅವರ ಅಕಾಲಿಕ ನಿಧನಕ್ಕೆ ಕಾಲೇಜು ಆಡಳಿತ ಮಂಡಳಿ, ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
ಅನಾಫಿಲ್ಯಾಕ್ಸಿಸ್ ಎಂದರೇನು?
ಅನಾಫಿಲ್ಯಾಕ್ಸಿಸ್ (ಅಥವಾ “ಅನಾಫಿಲ್ಯಾಕ್ಟಿಕ್ ಆಘಾತ”) ತೀವ್ರವಾದ ಅಲರ್ಜಿಯ ಪ್ರತಿಕ್ರಿಯೆಯಾಗಿದ್ದು ಅದನ್ನು ತಕ್ಷಣವೇ ಚಿಕಿತ್ಸೆ ನೀಡಬೇಕಾಗಿದೆ.
ಅನಾಫಿಲ್ಯಾಕ್ಸಿಸ್ ಅಪರೂಪ, ಆದರೆ ಕೆಲವರು ಇದನ್ನು ಇತರರಿಗಿಂತ ಹೆಚ್ಚಾಗಿ ಹೊಂದಿರುತ್ತಾರೆ. ಹೆಚ್ಚಿನ ಜನರು ಅದರಿಂದ ಚೇತರಿಸಿಕೊಳ್ಳುತ್ತಾರೆ. ಆದರೆ ದಂತ ಆರೈಕೆ ಸೇರಿದಂತೆ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಯ ಮೊದಲು ನೀವು ಹೊಂದಿರುವ ಯಾವುದೇ ಔಷಧಿ ಅಥವಾ ಲ್ಯಾಟೆಕ್ಸ್ ಅಲರ್ಜಿಗಳ ಬಗ್ಗೆ ನಿಮ್ಮ ವೈದ್ಯರಿಗೆ ಹೇಳುವುದು ಮುಖ್ಯವಾಗಿದೆ. ನಿಮ್ಮ ಅಲರ್ಜಿಯ ಬಗ್ಗೆ ಮಾಹಿತಿಯನ್ನು ಹೊಂದಿರುವ ಕಾರ್ಡ್ ಅನ್ನು ಒಯ್ಯುವುದು ಒಳ್ಳೆಯದು.
ಅನಾಫಿಲ್ಯಾಕ್ಸಿಸ್ ಒಂದು ತೀವ್ರವಾದ, ಮಾರಣಾಂತಿಕ ಅಲರ್ಜಿಯ ಪ್ರತಿಕ್ರಿಯೆಯಾಗಿದ್ದು ಅದು ಬಹು ಅಂಗಗಳ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
