sahakara 2

 

 

ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸೇವಾ ಮನೋಭಾವನೆ ಬಹುಮುಖ್ಯ, ಸದಸ್ಯರ ಶ್ರೇಯೋಭಿವೃದ್ಧಿ ಸಹಕಾರ ಸಂಘಗಳ ಧ್ಯೇಯವಾಗಿರಬೇಕು ಆಗ ಮಾತ್ರ ಜನರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.

ಅವರು ಶುಕ್ರವಾರ ಮೂಡಿಗೆರೆ ರೈತ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಬ್ಯಾಂಕ್, ಟಿಎಪಿಸಿಎಂಎಸ್ ಹಾಗೂ ತಾಲ್ಲೂಕಿನ ಎಲ್ಲಾ ಸಹಕಾರ ಸಂಘ ಮತ್ತು ಬ್ಯಾಂಕುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಗಳು ಸಹಕಾರ ಸಂಘಗಳ ಮೂಲಕ ರೈತರಿಗೆ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಈ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪಿದಾಗ ಈ ಯೋಜನೆಗಳು ಸಾರ್ಥಕವಾಗತ್ತವೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ನಿಲ್ಲಬೇಕು. ರೈತಾಪಿ ವರ್ಗದವರ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಕಾರ್ಯಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ಇಂದು ಪ್ರಕೃತಿಯ ಏರಿಳಿತದಿಂದ ರೈತನ ಬದುಕು ಅನಿಶ್ಚಿತವಾಗಿದೆ. ಎಲ್ಲಾ ಹಂತದಲ್ಲಿಯೂ ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ಸಹಕಾರ ಸಂಸ್ಥೆಗಳು ಸಕಾಲದಲ್ಲಿ ರೈತರ ನೆರವಿಗೆ ಬರಬೇಕು ಎಂದರು. ರಾಜ್ಯ ಸರ್ಕಾರ ಐದು ಲಕ್ಷದ ವರೆಗೆ ಶೂನ್ಯಬಡ್ಡಿಯಲ್ಲಿ ಸಾಲ ನೀಡಲು ಘೋಷಣೆ ಮಾಡಿದೆ. ಆದರೆ ಇದುವರೆಗೂ ಇದು ಜಾರಿಗೆ ಬಂದಿಲ್ಲ ಈ ಬಗ್ಗೆ ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ ಕುರಿತು ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಶ್ರೀಮತಿ ತ್ರಿವೇಣಿರಾವ್ ಅವರು ಉಪನ್ಯಾಸ ನೀಡಿ ಮಾತನಾಡುತ್ತಾ ಸಹಕಾರ ಸಂಘಗಳು ಕೌಶಲ್ಯಪೂರ್ಣ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು, ತಾಂತ್ರಿಕತೆಯ ಮೂಲಕ ಪಾರದರ್ಶಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಮಾಜಿ ಸಚಿವೆ ಶ್ರೀಮತಿ ಮೋಟಮ್ಮ ಮಾತನಾಡಿ ಸಹಕಾರ ಸಂಘಗಳು ಸ್ವಸಹಾಯ ಸಂಘಗಳಿಗೆ ಸಾಲವನ್ನು ನೀಡುವ ಮೂಲಕ ಗ್ರಾಮೀಣ ಭಾಗದ ಮಹಿಳೆಯವರು ಅಧಿಕ ಬಡ್ಡಿ ವಿಧಿಸುವ ಖಾಸಗಿ ಹಣಕಾಸು ಸಂಸ್ಥೆಗಳಿಂದ ಶೋಷಣೆಗೆ ಒಳಗಾಗುತ್ತಿರುವುದನ್ನು ತಪ್ಪಿಸಬೇಕು ಎಂದರು.

ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜಿ.ಕೆ. ದಿವಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಹಕಾರಿ ಅಭಿಯಾನದಲ್ಲಿ ತೊಡಗಿಸಿಕೊಂಡಿರುವವರಿಗೆ ಸಹಕಾರ ತತ್ವಗಳ ಬಗ್ಗೆ ಅರಿವು ಇರಬೇಕು, ಸಹಕಾರ ಯೂನಿಯನ್ ಈ ನಿಟ್ಟಿನಲ್ಲಿ ಹಲವು ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದ್ದು, ಪ್ರತಿಯೊಬ್ಬರು ತರಬೇತಿಗಳ ಸದುಪಯೋಗಪಡೆದುಕೊಳ್ಳಬೇಕು.  ಕೃಷಿ ಪತ್ತಿನ ಸಹಕಾರ ಸಂಘಗಳಿಗೆ, ನಬಾರ್ಡ್, ಕೇಂದ್ರ ಬ್ಯಾಂಕ್ ಮತ್ತು ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ದೊರಕಬೇಕು. ಹೆಚ್ಚುವರಿ ಸಾಲವನ್ನು ನೀಡುವುದಾಗಿ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿದೆ ಅದು ಆದಷ್ಟು ಬೇಗ ಕಾರ್ಯರೂಪಕ್ಕೆ ಬರುಬೇಕು ಎಂದರು.

ಇದೇ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಸಹಕಾರಿ ರತ್ನ ಪ್ರಶಸ್ತಿ ವಿಜೇತ ಓ.ಎಸ್. ಗೋಪಾಲಗೌಡ ಹಾಗೂ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಕುಮಾರಿ ಮೇಘನಾ ಅವರನ್ನು ಗೌರವಿಸಲಾಯಿತು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಡಾ. ಜಿ.ಎಸ್. ಮಹಾಬಲ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ, ಸಹಕಾರಿ ಕ್ಷೇತ್ರದ ಮುಖಂಡರಾದ ಬಿ.ಸಿ.ಲೋಕಪ್ಪಗೌಡ, ಹಳಸೆ ಶಿವಣ್ಣ, ರಾಜಮ್ಮ, ವಿ.ಕೆ.ಶಿವೇಗೌಡ, ಎನ್.ಜೆ. ಜಯರಾಂ, ಬಿ.ಎಲ್. ಸಂದೀಪ್, ಜಿ.ಕೆ. ಮಂಜಪ್ಪಯ್ಯ, ಡಿ.ಬಿ.ಜಯಪ್ರಕಾಶ್, ಬಿ.ಅರ್. ಬಾಲಕೃಷ್ಣ, ಎಂ.ವಿ. ಜಗದೀಶ್ ಸೇರಿದಂತೆ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ