ಸ್ನೇಹ ಆಟೋ ಚಾಲಕರ ಹಾಗೂ ಮಾಲೀಕರ ಸಂಘ ಗೋಣಿಬೀಡು ಇವರ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ ಮಾತನಾಡಿ ; ಕನ್ನಡ ಭಾಷೆ ಅತ್ಯಂತ ಪುರಾತನವಾದ ಭಾಷೆಯಾಗಿದ್ದು, ಶ್ರೇಷ್ಠವಾದ ಭಾಷೆಯಾಗಿದೆ. ಇಂದು ಕನ್ನಡ ಭಾಷೆಯ ಬಗ್ಗೆ ಯುವಪೀಳಿಗೆಯಲ್ಲಿ ಅಸಡ್ಡೆ ಮೂಡುತ್ತಿದ್ದು, ನಗರ ಪ್ರದೇಶಗಳಲ್ಲಿ ಮತ್ತು ಸಿರಿವಂತರ ಮನೆಗಳಲ್ಲಿ ಕನ್ನಡ ಬಳಕೆ ಕಡಿಮೆಯಾಗುತ್ತಿದೆ. ಇಂದು ಕನ್ನಡ ಸಾಮಾನ್ಯ ಜನರ ಸತತ ಬಳಕೆಯಿಂದ ಉಳಿದು ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಆಟೋ ಚಾಲಕರು ಕನ್ನಡ ಭಾಷೆಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಆಟೋ ಚಾಲಕರ ಕನ್ನಡ ಪ್ರೇಮ ಶ್ಲಾಘನೀಯವಾಗಿದೆ. ಗೋಣಿಬೀಡು ಆಟೋ ಚಾಲಕರು ಮತ್ತು ಮಾಲೀಕರ ಸಂಘವು ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿರುವುದು ಅವರ ಕನ್ನಡ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.
ಗೋಣಿಬೀಡು ಪಿಎಸ್ಐ ಹರ್ಷವರ್ಧನ್ ಮಾತನಾಡಿ ; ಆಟೋ ಚಾಲಕರು ನಿಜವಾದ ಸಮಾಜ ಸೇವಕರು, ಕನ್ನಡದ ಕಟ್ಟಾಳುಗಳು. ಅತಿ ಕಡಿಮೆ ದುಡಿಮೆಯಲ್ಲಿ ಉತ್ತಮ ಸೇವೆ ಒದಗಿಸುವ ಆಟೋ ಚಾಲಕರ ಕಾರ್ಯ ಶ್ರೇಷ್ಠವಾದುದು. ಆಟೋ ಚಾಲಕರು ಸೇರಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಉತ್ತಮ ಕಾರ್ಯ ಎಂದರು.
ಸಂಘದ ಅಧ್ಯಕ್ಷರಾದ ಪೂರ್ಣೇಶ್ ಅಧ್ಯಕ್ಷತೆ ವಹಿಸಿದ್ದರು. ಗೋಣಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಿನೇಶ್, ಮುಖ್ಯ ಶಿಕ್ಷಕಿ ಶ್ರೀಮತಿ ಶಕುಂತಲಾ, ಹಿರಿಯ ಶಿಕ್ಷಕಿ ಶ್ರೀಮತಿ ಶಶಿಕಲ, ದೈಹಿಕ ಶಿಕ್ಷಕ ಜಗದೀಶ್, ವರ್ತಕರ ಸಂಘದ ಕಾರ್ಯದರ್ಶಿ ಪರಮೇಶ್, ಎಸ್‌ಡಿಎಂಸಿಯ ಮಾಜಿ ಅಧ್ಯಕ್ಷರಾದ ಪ್ರವೀಣ್, ಗ್ರಾಮ ಪಂಚಾಯಿತಿ ಸದಸ್ಯ ಆನಂದ್ ಮುಂತಾದವರು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಎಲ್ಲಾ ಸದಸ್ಯರು ಸೇರಿ ಗೋಣಿಬೀಡು ಪೊಲೀಸ್ ಠಾಣಾಧಿಕಾರಿ ಹರ್ಷವರ್ಧನ್ ಹಾಗೂ ದೈಹಿಕ ಶಿಕ್ಷಕ ಜಗದೀಶ್ ರವರ ಕಾರ್ಯವೈಖರಿಯನ್ನು ಮೆಚ್ಚಿ ಸನ್ಮಾನಿಸಿದರು.



