ಭಾರತದ ಸಂವಿಧಾನ ಜಾರಿಗೆ ಬರುವ ಮೊದಲು ಜಾತಿ ತಾರತಮ್ಯ ಹೆಚ್ಚಾಗಿತ್ತು. ಮಹಿಳೆಯರಿಗೆ ಸಮಾನ ಅವಕಾಶಗಳಿರಲಿಲ್ಲ. 1950ರಲ್ಲಿ ಜಾರಿಗೊಂಡ ಭಾರತ ಸಂವಿಧಾನದ ಭಾಗ ಮೂರರಲ್ಲಿ ಮೂಲಭೂತ ಹಕ್ಕುಗಳ ಮೂಲಕ ಶೋಷಿತರು, ಮಹಿಳೆಯರು ಮತ್ತು ಎಲ್ಲಾ ಭಾರತೀಯರಿಗೂ ಸಮಾನ ಅವಕಾಶವನ್ನು ಸಂವಿಧಾನ ನೀಡಿದೆ ಎಂದು ಮೂಡಿಗೆರೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸವಿತಾ ರಮೇಶ್ ಹೇಳಿದರು.
ಪಟ್ಟಣದ ಡಿಎಸ್‌ಬಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಭಾರತದ ಸಂವಿಧಾನದಲ್ಲಿ ಸಮಾನತೆ ಮತ್ತು ಸ್ವಾತಂತ್ರ್ಯ, ರಾಜ್ಯಶಾಸ್ತ್ರ ವಿಷಯವಾಗಿ ವಿಶ್ಲೇಷಣೆ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಸ್ವಾತಂತ್ರ್ಯ ನೀಡಿದರೂ ಕೂಡ ಈಗಿನ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಮಿತಿಮೀರಿ ನಡೆಯುತ್ತಿರುವುದು ಕಳವಳಕಾರಿಯಾಗಿದೆ. ಇಂತಹ ದೌರ್ಜನ್ಯಗಳನ್ನು ತಡೆಗಟ್ಟಿ ಸಂವಿಧಾನ ನೀಡಿರುವ ಹಕ್ಕುಗಳನ್ನು ಮತ್ತು ಅವಕಾಶಗಳನ್ನು ಎಲ್ಲಾ ಪ್ರಜೆಗಳಿಗೂ ಒಂದೇ ರೀತಿ ಜಾರಿಗೊಳಿಸಿದರೆ ಮಾತ್ರ ಸಂವಿಧಾನಕ್ಕೆ ಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ವಿದ್ಯಾವಂತರು ಹೆಚ್ಚಾಗಿ ಜಾತಿ, ಧರ್ಮ ಎಂಬ ಕೆಲಸಕ್ಕೆ ಬಾರದ ವಿಚಾರಗಳನ್ನು ಮುಂದಿಟ್ಟು ಜನರನ್ನು ಪರಸ್ಪರ ಎತ್ತಿ ಕಟ್ಟಿ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದರಿಂದ ಅರಾಜಕತೆ ಹೆಚ್ಚಾಗುತ್ತಿದೆ. ಪದವಿ ಪಡೆಯುತ್ತಿರುವ ರತಿ ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ತರಗತಿಗಳು ಇರುವುದರಿಂದ ಸಂವಿಧಾನವನ್ನು ಸರಿಯಾಗಿ ಅರ್ಥೈಸಿ ಸಾಮಾನ್ಯ ಜನರಿಗೆ ತಿಳಿಯಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಚ್.ನೌಶಾದ್, ಉಪನ್ಯಾಸಕರಾದ ಶಿವರಾಜಕುಮಾರ್ ಗುರುರಾಜ್ ಡಾ.ಅಪೂರ್ವ ಬಿ. ರಾಜ್ ಇತರರಿದ್ದರು.



