ಟಿ.ಟಿ.ಫೋಸ್೯ ವಾಹನವೊಂದು ಅಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಕಾರ್ಕಳದಿಂದ ಕಳಸ ಕಡೆಗೆ ಸಾಗುತ್ತಿದ್ದ ವಾಹನದಲ್ಲಿ ಕುದುರೆಮುಖ ಸಮೀಪ ಎಸ್ ಕೆ ಬಾರ್ಡರ್ ಹತ್ತಿರ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಗಾಬರಿಗೊಂಡು ವಾಹನವನ್ನು ತಕ್ಷಣ ನಿಲ್ಲಿಸಿ ಅದರಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ನೋಡನೋಡುತ್ತಿದ್ದಂತೆ ಬೆಂಕಿ ಇಡೀ ವಾಹನಕ್ಕೆ ವ್ಯಾಪಿಸಿದೆ. ವಾಹನದ ಚಾಲಕ ಮತ್ತು ಪ್ರಯಾಣಿಕರು ಅಸಹಾಯಕರಾಗಿ ಬೆಂಕಿ ಹೊತ್ತಿ ಉರಿಯುವುದನ್ನು ನೋಡುವಂತಾಗಿದೆ.
ವಾಹನ ಕಾರ್ಕಳ ಸಮೀಪದ ಕಟಪಾಡಿಯ ಪ್ರಶಾಂತ ಎಂಬವರಿಗೆ ಸೇರಿದ ವಾಹನ ಅದಾಗಿತ್ತು.ಯಾತ್ರಾರ್ಥಿಗಳು ಕಳಸಕ್ಕೆ ಹೋಗುತ್ತಿದ್ದಾಗ ಎಸ್ ಕೆ ಬಾರ್ಡರ್ ದಾಟಿ ಮುಂದೆ ಹೋಗುತ್ತಿದ್ದಾಗ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ಇದರ ಬೆನ್ನಲ್ಲೇ ಕಾಣಿಸಿಕೊಂಡ ಬೆಂಕಿಯ ಜ್ವಾಲೆ ಇಡೀ ಹೊತ್ತಿ ಭಸ್ಮವಾಗಿದೆ.
ಘಟನಾ ಸ್ಥಳದಲ್ಲಿ ಮೊಬೈಲ್ ಸಂಪರ್ಕ ಸಿಗದೇ ಇದ್ದುದರಿಂದ ಮಾಹಿತಿ ಬೆಳಕಿಗೆ ಬರಲು ಒಂದಿಷ್ಟು ತಡವಾಗಿತ್ತು.ಎಸ್ ಕೆ ಬಾರ್ಡರ್ ನಲ್ಲಿ ಕಾರ್ಯ ನಿರ್ವಹಿಸುವ ಅರಣ್ಯ ಇಲಾಖಾ ಸಿಬ್ಬಂದಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿದ್ದು, ಅದಾಗಲೇ ವಾಹನ ಸಂಪೂರ್ಣ ಹೊತ್ತಿ ಉರಿದಿದೆ.
ವಾಹನ ಹೊತ್ತಿ ಉರಿಯಲು ನಿಖರ ಕಾರಣ ತಿಳಿದುಬಂದಿಲ್ಲ.



