nagaraj

 

 

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಸ್ವಯಂ ನಿವೃತ್ತಿ ಪಡೆದಿರುವ ಕೆಎಎಸ್ ಅಧಿಕಾರಿ ಡಾ.ಎಚ್.ಎಲ್.ನಾಗರಾಜ್ ಅವರು ಶುಕ್ರವಾರ ನೇಮಕವಾಗಿದ್ದಾರೆ.

ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪಟ್ಟಾಧಿಕಾರ ವಹಿಸಿಕೊಳ್ಳಲಿದ್ದಾರೆ. ಇನ್ನು ಮುಂದೆ ಅವರು ‘ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ’ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಮಠದ ಪೀಠಾಧ್ಯಕ್ಷ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದ್ದಾರೆ.

ಶನಿವಾರದಿಂದ ಆರಂಭವಾಗುವ ವಿಧಿ ವಿಧಾನಗಳು, ಇತರೆ ಕಾರ್ಯಕ್ರಮಗಳು  ಸಂಜೆವರೆಗೂ ನಡೆಯಲಿವೆ. ಶನಿವಾರ ಬೆಳಗ್ಗೆ 6 ಗಂಟೆಗೆ ಪಟ್ಟಾಭಿಷೇಕ ನಡೆಯಲಿದೆ. ಹತ್ತು ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಆದಿಚುಂಚನಗಿರಿ ಪೀಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಿಡುಮಾಮಿಡಿ ಜಗದ್ಗುರು ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಸೇರಿ ನಾಡಿನ ಅನೇಕ ಮಠಗಳ ಪೀಠಾಧ್ಯಕ್ಷರ ಸಮ್ಮುಖದಲ್ಲಿ ಮಠದ ಉತ್ತರಾಧಿಕಾರಿಯಾಗಿ ನೇಮಿಸಲಾಗುತ್ತದೆ ಎಂದು ಚಂದ್ರಶೇಖರನಾಥ ಸ್ವಾಮೀಜಿ ಹೇಳಿದ್ದಾರೆ. ಗಣಪತಿ ಪೂಜೆ, ಶಿವಪಾರ್ವತಿಯರ ಪೂಜೆ, ಗಂಗೆಪೂಜೆ, ರಕ್ಷಾ ಬಂಧನ, ಸ್ವಸ್ತಿ ಪುಣ್ಯಾಹ ವಾಚನ, ನಾಂದಿ ಸಮಾರಾಧನೆ, ಪೋಷಕರಿಂದ ರಕ್ತ ಸಂಬಂಧದ ತ್ಯಾಗ ಮತ್ತು ಸಮಾಜಕ್ಕೆ ಉತ್ತರಾಧಿಕಾರಿಯ ಸಮರ್ಪಣೆ ಇತ್ಯಾದಿ ಕಾರ್ಯಗಳು ನಡೆಯಲಿವೆ.

‘ನನಗೀಗ 81 ವರ್ಷ ವಯಸ್ಸು. ಹೀಗಾಗಿ, ನಮ್ಮ ಮಠದೊಂದಿಗೆ ಅನೇಕ ವರ್ಷಗಳಿಂದ ಸಂಪರ್ಕದಲ್ಲಿರುವ, ಸೇವಾ ಕಾರ್ಯಗಳನ್ನು ಮಾಡುತ್ತ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾಗರಾಜ್ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ಇದು ಭಗವಂತನ ಇಚ್ಛೆ. ಈ ಆಯ್ಕೆಗೆ ಮಠದ ಟ್ರಸ್ಟ್‌ನ ಎಲ್ಲ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ. ಮಠದ ಉತ್ತರಾಧಿಕಾರಿಯಾಗಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಗಳನ್ನು ‘ನಾಥ’ ಪರಂಪರೆಯಂತೆ ನಡೆಸಿಕೊಂಡು ಹೋಗಲಿದ್ದಾರೆ’ ಎಂದು ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದ್ದಾರೆ.

ಯಾರಿವರು ನಾಗರಾಜ್ ?

ತುಮಕೂರು ಜಿಲ್ಲೆ ಕುಣಿಕಲ್ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಲಿಂಗಯ್ಯ ಮತ್ತು ಗಂಗಮ್ಮನವರ ಪುತ್ರರಾದ ನಾಗರಾಜ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಿದ್ದಗಂಗಾಮಠದಲ್ಲಿ ಪೂರೈಸಿರುತ್ತಾರೆ. ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ, ಮೈಕ್ರೋ ಫೈನಾನ್ಸ್ ವಿಷಯದಲ್ಲಿ ಪಿಹೆಚ್ ಡಿ ಪದವಿ ಪಡೆದಿದ್ದಾರೆ. ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಹಸೀಲ್ದಾರ್ ಮತ್ತು ಎಸಿಯಾಗಿ ರಾಜ್ಯದ ವಿವಿದೆಡೆ ಸೇವೆ ಸಲ್ಲಿಸಿದ್ದಾರೆ. ಇವರು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಪವಿಭಾಗಾಧಿಕಾರಿಯಾಗಿ(ಎಸಿ) ಸುಮಾರು 2 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ನಾಗರಾಜು ಅವರು 2011ರಲ್ಲಿ ನಾಗಮಂಗಲ ತಾಲೂಕಿನ ತಹಸೀಲ್ದಾರ್‌ ಆಗಿದ್ದಾಗ ಏಕಾಏಕಿ ಹುದ್ದೆಗೆ ರಾಜೀನಾಮೆ ನೀಡಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಸೇರಿ ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದರು. ಅವರ ಈ ನಿರ್ಧಾರದಿಂದ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಆತಂಕಗೊಂಡಿದ್ದರು. ಬಳಿಕ ಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿ, ನಾಗರಾಜು ಅವರನ್ನು ಮಠದಿಂದ ವಾಪಸ್‌ ಕಳುಹಿಸುವಂತೆ ಕೇಳಿಕೊಂಡಿದ್ದರು. ಬಳಿಕ ನಾಗರಾಜು ಅವರ ಮನವೊಲಿಸುವಲ್ಲೂ ಯಶಸ್ವಿಯಾಗಿದ್ದರು.

ದೀಕ್ಷೆ ಸ್ವೀಕಾರದ ನಂತರ ಒಂದು ತಿಂಗಳ ಕಾಲ ತಮಿಳುನಾಡಿನ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ನಂತರ ಆದಿಚುಂಚನಗಿರಿ ಮಠಕ್ಕೆ ಮರಳಿ ಸನ್ಯಾಸ ದೀಕ್ಷೆಯನ್ನು ತ್ಯಜಿಸಿದ್ದರು. ಆದರೆ, ಅಂದಿನಿಂದಲೂ ಸನ್ಯಾಸತ್ವದತ್ತ ಸೆಳೆಯುತ್ತಲೇ ಇತ್ತು. ಹೀಗಾಗಿ ಮದುವೆಯಾಗದೆ ಜೀವನ ಸಾಗಿಸುತ್ತಿದ್ದರು.

ಸಿದ್ದಗಂಗಾ ಮಠದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಸಂದರ್ಭದಲ್ಲಿ ನಾಗರಾಜ್ ಅವರು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಆಗ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಆದರ್ಶವಾಗಿ ತೆಗೆದುಕೊಂಡಿದ್ದರು. ಬಳಿಕ ಸ್ಪರ್ಧಾತಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಾಗ ನಾಗರಾಜ್ ಅವರು ಆದಿಚುಂಚನಗಿರಿ ಮಠದ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಈ ಅವಧಿಯಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸೇವಾ ಕಾರ್ಯಗಳಿಂದ ಪ್ರಭಾವಿತರಾಗಿದ್ದರು. ಇದೀಗ ಸನ್ಯಾಸತ್ವ ಸ್ವೀಕರಿಸಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇವಾ ಕಾರ್ಯ ಮಾಡಬೇಕು ಎಂದು ನಿರ್ಧರಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ