ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಆರೋಪದಲ್ಲಿ ಪೊಲೀಸರಿಂದ ಬಂಧಿತರಾಗಿದ್ದ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಸಿ.ಟಿ. ರವಿ ನನ್ನಗೆ ಹೈಕೋರ್ಟ್ ಜಾಮೀನು ನೀಡಿರುವುದು ಸತ್ಯಕ್ಕೆ ಸಿಕ್ಕ ಜಯವಾಗಿದೆ. ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಳಸಿಕೊಂಡು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ. ಕಾನೂನು ಪಾಲಿಸುವ ಪೊಲೀಸರೇ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ನಿನ್ನೆ ಅನುಭವಿಸಿದ ಸಂಕಷ್ಟವನ್ನು 35 ವರ್ಷಗಳ ಹಿಂದೆಯೇ ಅನುಭವಿಸಿದ್ದೆ. ಇದೆಲ್ಲಾ ಹೊಸತಲ್ಲಾ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನನ್ನ ಪರ ನಿಂತ ಪಕ್ಷದ ಶಾಸಕರು, ಸಂಸದರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಇದಕ್ಕೂ ಮುನ್ನಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ. ನನ್ನನ್ನು ರಾತ್ರಿಯಿಡಿ ಟೆರರಿಸ್ಟ್ ರೀತಿ ನೋಡಿದ್ರು. ನಾನು ಖಾನಾಪುರದಲ್ಲಿ ದೂರು ಕೊಟ್ಟರೂ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಳ್ಳಲಿಲ್ಲ. ನಾನು ಸಭಾಪತಿಗಳಿಗೂ ದೂರು ನೀಡಿದ್ದೆ. ಸದನದಲ್ಲಿ ಏನೇ ಆದರೂ ಸಭಾಪತಿಗಳು ನೋಡಿಕೊಳ್ಳುತ್ತಾರೆ. ಆದರೆ ಸುಳ್ಳು ಕೇಸ್ ಹಾಕಿಸಿ ನನ್ನನ್ನು ಬಂಧಿಸಿದ್ದಾರೆ. ಆದರೆ ನನ್ನ ವಿರುದ್ದ ಸಾಕ್ಷ್ಯಾದಾರ ಇಲ್ಲದಿದ್ದರೂ ನನ್ನ ವಿರುದ್ದ ಎಫ್ ಐಆರ್ ಹಾಕಿದ್ದಾರೆ. ನಿನ್ನೆ ಇಡೀ ರಾತ್ರಿ ಸುತ್ತಾಡಿಸುವ ಮೂಲಕ ಮಾನಸಿಕವಾಗಿ ಟಾರ್ಚರ್ ನೀಡಿದ್ದಾರೆ ಎಂದು ಆರೋಪಿಸಿದರು.
ನಾನು ರಾಜಕೀಯ ಸೈದ್ದಾಂತಿಕವಾಗಿ ಟೀಕೆ ಮಾಡುತ್ತೇನೆ. ವೈಯಕ್ತಿಕವಾಗಿ ನಾನು ಟೀಕೆ ಮಾಡಲ್ಲ ನನ್ನ ಬಗ್ಗೆ ಚಿಕ್ಕಮಗಳೂರಿನಲ್ಲಿ ಕೇಳಿ ತಿಳಿದುಕೊಳ್ಳಿ. ಡಿಕೆ ಶಿವಕುಮಾರ್ ಬಗ್ಗೆ ರಾಮನಗರದಲ್ಲಿ ಕೇಳಿ ತಿಳಿದುಕೊಳ್ಳಿ. ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬೆಳಗಾವಿಯಲ್ಲಿ ಕೇಳಿ ತಿಳಿದುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಸಂಜೆ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಮುಗಿದ ಮೇಲೆ ಅಂಬೇಡ್ಕರ್ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪೊಲೀಸರು ಬಂದು ನನ್ನನ್ನು ಪ್ರತ್ಯೇಕವಾಗಿ ಬಂಧಿಸಿದರು. ಬಂಧನ ಬಳಿಕ ಖಾನಾಪುರ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿಂದ, ಪೊಲೀಸರು ರಾತ್ರಿವಿಡೀ ಸವದತ್ತಿ, ರಾಮದುರ್ಗ, ನಂದಗಡ, ಕಿತ್ತೂರು ಸೇರಿದಂತೆ ಸುಮಾರು 420 ಕಿಮೀ ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಸುತ್ತಾಡಿಸಿದ್ದಾರೆ.
ರಾತ್ರಿಯಿಡೀ ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡುವಾಗ ಪೊಲೀಸರಿಗೆ ಕರೆಗಳು ಬರುತ್ತಿದ್ದು, ಆದೇಶಗಳನ್ನು ನೀಡಲಾಗುತ್ತಿತ್ತು, ಪೊಲೀಸರಿಗೆ ನಾನು ಪದೇ ಪದೇ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಕೇಳಿದರೆ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ. ಏನೋ ಪಿಸುಪಿಸು ಮಾತನಾಡುತ್ತಿದ್ದರು. ನನ್ನ ತಲೆಗೆ ಪೆಟ್ಟಾಗಿದ್ದರಿಂದ ತಲೆ ಸುತ್ತು ಬಂದಂತೆ, ವಾಂತಿ ಬಂದಂತೆ ಆಗುತ್ತಿತ್ತು.
ಪೊಲೀಸರಿಗೆ ಆಗಾಗ ಕರೆಗಳು ಬರುತ್ತಿತ್ತು. ಯಾರೋ ಮೇಲಿನ ಅಧಿಕಾರಿಗಳು ಅಥವಾ ಪ್ರಭಾವಿ ವ್ಯಕ್ತಿಗಳು ಕರೆ ಮಾಡಿ ಆದೇಶ ಮಾಡುತ್ತಿದ್ದರು. ನನಗೆ ಕೇಳಿಸಬಾರದು ಅಂತ ದೂರ ಹೋಗಿ ಮಾತನಾಡುತ್ತಿದ್ದರು ಎಂದು ಸಿ ಟಿ ರವಿ ಆರೋಪ ಮಾಡಿದ್ದಾರೆ.
ನನ್ನ ಕೊಲೆಗೆ ಸಂಚು ರೂಪಿಸಿದ್ದರೇ?: ರಾತ್ರಿ ಹೊತ್ತಿನಲ್ಲಿ ಪೊಲೀಸರು ನನಗೆ ಮಾಹಿತಿ ನೀಡದೆ ಸುತ್ತಾಡಿಸಿದ್ದಾರೆ, ಕೇಳಿದರೆ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ. ಮನೆಯಿಂದ ನನ್ನ ಪತ್ನಿ ಫೋನ್ ಮಾಡಿದರೆ ನಾನು ಲೈವ್ ಲೊಕೇಶನ್ ಹಾಕಿದ್ದೆ, ನಂತರ ಸ್ವಲ್ಪ ದೂರ ಹೋದ ಮೇಲೆ ಮೊಬೈಲ್ ಸಂಪರ್ಕ ಕಡಿತಗೊಂಡಿತು. ನಮ್ಮ ವಾಹನ ಹಿಂದೆ ನನ್ನ ಪಿ.ಎ ಸಿಬ್ಬಂದಿಯ ವಾಹನವನ್ನು ಸ್ವಲ್ಪ ದೂರ ಹೋದ ಮೇಲೆ ಬ್ಯಾರಿಕೇಡ್ ಹಾಕಿ ತಡೆದರು. ಅಂದರೆ ನನ್ನ ಕೊಲೆಗೆ ಸಂಚು ರೂಪಿಸಿದ್ದರೇ ಎಂಬ ಸಂದೇಹ ಬರುತ್ತಿದೆ ಎಂದರು.
ನಾನು ವಿದ್ಯಾರ್ಥಿ ದೆಸೆಯಿಂದಲೇ ಸಾರ್ವಜನಿಕ ಜೀವನಕ್ಕೆ ಬಂದವನು. ಅಧಿಕಾರ ರಾಜಕಾರಣಕ್ಕೆ ಬಂದು 20 ವರ್ಷವಾಗಿದೆ. ಅಧಿಕಾರದ ದುರ್ಬಳಕೆ ಹೇಗೆ ಮಾಡಬೇಕೆಂದು ಕಾಂಗ್ರೆಸ್ ನವರಿಂದ ಕಲಿಯಬೇಕು. ಈ ಘಟನೆಯ ಸತ್ಯಾಸತ್ಯತೆ ಹೊರಬರಬೇಕಿದ್ದರೆ ಪೊಲೀಸರ ವಾಕಿಟಾಕಿ ಮತ್ತು ಖಾಸಗಿ ಫೋನ್ ಗಳನ್ನು ತಪಾಸಣೆ ಮಾಡಬೇಕು. ನಾನು ಎಲ್ಲೆಲ್ಲಿ ಓಡಾಡಿದೆ ಎಂಬುದು ಸಿಡಿಆರ್ ನ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.



