ಭೀಮ ಕೋರೆಂಗಾವ್ ವಿಜಯೋತ್ಸವ ಸಮಿತಿ ವತಿಯಿಂದ ಜನವರಿ 3ರಂದು ಶುಕ್ರವಾರ 207ನೇ ಭೀಮಾ ಕೋರೆಂಗಾವ್ ವಿಜಯೋತ್ಸವವನ್ನು ಮೂಡಿಗೆರೆ ಪಟ್ಟಣದ ಲಯನ್ಸ್ ವೃತ್ತದಲ್ಲಿ ಅದ್ದೂರಿಯಾಗಿ ನಡೆಸಲಾಗುವುದು ಎಂದು ಸಮಿತಿ ಅಧ್ಯಕ್ಷ ಸಿದ್ದೇಶ್ ಕೆಸವೊಳಲು ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದಲ್ಲಿ ಭೀಮ ಕೋರೆಂಗಾವ್ ವಿಜಯೋತ್ಸವ ಆಚರಿಸಲು ಕಳೆದ 2 ತಿಂಗಳಿಂದ ಸಮಿತಿ ಸದಸ್ಯರು ತಾಲೂಕಿನ ಎಲ್ಲಾ ಹಳ್ಳಿಗಳಿಗೆ ತೆರಳಿ ಪ್ರಚಾರ ನಡೆಸಲಾಗಿದೆ. ಸುಮಾರು 5 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ.
ಜನವರಿ 2ರಂದು ಆಲ್ದೂರು, ಗೋಣಿಬೀಡು, ಬಣಕಲ್ ಹೋಬಳಿಯಿಂದ ಬೈಕ್ ಜಾಥಾದ ಮೂಲಕ ಪಟ್ಟಣದ ಕೊಲ್ಲಿಬೈಲ್ ಸರ್ಕಲ್‍ಗೆ ಆಗಮಿಸಿ ನಂತರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಲಯನ್ಸ್ ವೃತ್ತದಲ್ಲಿ ಅಂತ್ಯಗೊಳ್ಳಲಿದೆ ಎಂದು ಹೇಳಿದರು.
ಜನವರಿ 3ರಂದು ಸಂಜೆ 4 ಗಂಟೆಗೆ ವಿಜಯೋತ್ಸವ ಸ್ತಂಭದೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ 7ಗಂಟೆಗೆ ಸಭಾ ಕಾರ್ಯಕ್ರಮ ನೆರವೇರಲಿದೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಬೌದ್ಧ ಸಮಾಜದ ರಾಜ್ಯಾಧ್ಯಕ್ಷ ಡಾ.ಹ.ರಾ.ಮಹೇಶ್, ಉಪನ್ಯಾಸಕ ಭಾಸ್ಕರ್ ವಿಟ್ಲಾ, ಖ್ಯಾತ ಚಲನಚಿತ್ರ ನಟ ದುನಿಯಾ ವಿಜಯ್ ಆಗಮಿಸಲಿದ್ದು, ತಾಲೂಕಿನ ಪ್ರಮುಖ ಜನಪ್ರತಿನಿಧಿಗಳು ಎಲ್ಲಾ ಪಕ್ಷ ಹಾಗೂ ಪ್ರಗತಿಪರ ಸಂಘಟನೆ ನಾಯಕರು ಭಾಗವಹಿಸಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದ ಅವರು, ಪಟ್ಟಣದಲ್ಲಿ ಇದೇ ಕಾರ್ಯಕ್ರಮ ಜ.10ರಂದು ನಡೆಸಲು ಇನ್ನೊಂದು ಸಂಘದ ನಾಯಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಅವರೆಲ್ಲರೂ ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಗಿರೀಶ್ ಹೆಸಗಲ್, ಉಪಾಧ್ಯಕ್ಷ ಸುರೇಂದ್ರ ಉಗ್ಗೇಹಳ್ಳ, ರಮೇಶ್ ಹೊಸ್ಕೆರೆ, ಸುಧೀರ್ ಚಕ್ರಮಣಿ, ರತನ್ ಊರುಬಗೆ, ಕೆಂಚಯ್ಯ ಜೇನುಬೈಲ್, ಅಶ್ವಥ್ ಹೊಸ್ಕೆರೆ, ಅಭಿಜಿತ್, ಅಖಿಲೇಶ್ ಉಪಸ್ಥಿತರಿದ್ದರು.



