ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಹೆಚ್ಚಿಸಿದ್ದು, ಹೊಸವರ್ಷದಲ್ಲಿ ರಾಜ್ಯದ ಬಸ್ ಪ್ರಯಾಣಿಕರಿಗೆ ಶಾಕ್ ನೀಡಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದು ಬಸ್ ಪ್ರಯಾಣ ದರ ಶೇ.15 ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಬಸ್ ಟಿಕೆಟ್ ದರ ಶೇಕಡಾ 15ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕೃತವಾಗಿ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, 2020ರಲ್ಲಿ ಬಸ್ ಟಿಕೆಟ್ ಹೆಚ್ಚಳ ಮಾಡಲಾಗಿತ್ತು. ಐದು ವರ್ಷದಲ್ಲಿ ಈಗ ಡೀಸೆಲ್ ದರ ಹೆಚ್ಚಳವಾಗಿದೆ. ಖರ್ಚು ವೆಚ್ಚ ಕೂಡ ಹೆಚ್ಚಿಗೆ ಆಗಿದೆ. ಸಿಬ್ಬಂದಿ ವೆಚ್ಚ ಕೂಡ ಶೇ.18ರಷ್ಟು ಏರಿಕೆಯಾಗಿದೆ. ಬಿಎಂಟಿಸಿ ಬಸ್ ದರ ಏರಿಕೆಯಾಗಿ 10 ವರ್ಷ ಆಗಿದ್ದರೆ ಕೆಎಸ್‌ಆರ್‌ಟಿಸಿ ದರ ಏರಿಕೆಯಾಗಿ 5 ವರ್ಷವಾಗಿದೆ ಕಳೆದ 5 ವರ್ಷಗಳಿಂದ ಟಿಕೆಟ್ ದರ ಹೆಚ್ಚಿಸಿಲ್ಲ. ಸಂಬಳ ಮತ್ತು ಸಾರಿಗೆ ಸಂಸ್ಥೆ ಉಳಿಯಬೇಕಲ್ವಾ. ಆದಾಯ ಹೆಚ್ಚಳವಾದರೂ ಖರ್ಚು ಏರಿಕೆಯಾಗಿದೆ ಎಂದು ಹೇಳಿದ್ದಾರೆ.
.ಜನವರಿ 5ರಿಂದ ಪರಿಷ್ಕೃತ ಟಿಕೆಟ್ ದರ ಅನ್ವಯ
ಇನ್ನು ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಹೆಚ್ಕೆ ಪಾಟೀಲ್, ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಚಿವ ಸಂಪುಟ ನಿರ್ಧರಿಸಿದ್ದು, ಜನವರಿ 5ರಿಂದ ಪರಿಷ್ಕೃತ ಟಿಕೆಟ್ ದರ ಅನ್ವಯವಾಗಲಿದೆ. 4 ಸಾರಿಗೆ ನಿಗಮಗಳ ಟಿಕೆಟ್ ದರ ಪರಿಷ್ಕರಿಸಿದ್ದೇವೆ. ಹಾಗಾಗಿ ಟಿಕೆಟ್ ದರ ಶೇ.15ರಷ್ಟು ಹೆಚ್ಚಿಸಲು ಅನುಮೋದಿಸಲಾಗಿದೆ. ದರ ಹೆಚ್ಚಳದಿಂದ ನಿತ್ಯ 7.84 ಕೋಟಿ ರೂ. ಆದಾಯ ಹೆಚ್ಚಳ ಸಾಧ್ಯತೆ ಇದೆ ಎಂದಿದ್ದಾರೆ.



