ಚಿಕ್ಕಮಗಳೂರು ತಾಲ್ಲೂಕಿನ ಮೈಲಿಮನೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ರಮ್ಯ ಪೂರ್ಣೇಶ್ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹೆಚ್.ಡಿ ರೇವಣ್ಣ ಘೋಷಿಸಿದರು.
ಗುರುವಾರ ನಡೆದ ಅಧ್ಯಕ್ಷರು ಆಯ್ಕೆ ಚುನಾವಣೆಯಲ್ಲಿ ಬೇರಾರು ನಾಮಪತ್ರ ಸಲ್ಲಿಸದೇ ಇದ್ದುದರಿಂದ ರಮ್ಯ ಪೂರ್ಣೇಶ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಪ್ರಪಂಚದಲ್ಲೇ ಅತೀ ದೊಡ್ಡ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ ಭಾರತ, ಈ ಸಂವಿಧಾನದಡಿ ಎಲ್ಲರೂ ಹೇಗೆ ಕೂಡಿ ಬಾಳಬೇಕೆಂಬ ಬಗ್ಗೆ ಅಧಿಕಾರ ವಿಕೇಂದ್ರೀಕರ ವ್ಯವಸ್ಥೆಯನ್ನು ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಜಾರಿಮಾಡಿದ್ದಾರೆಂದು ಹೇಳಿದರು.
ಇಂದು ಅದರ ಭಾಗವಾಗಿ ಎಲ್ಲರೂ ಅಧಿಕಾರ ಅನುಭವಿಸುತ್ತಿದ್ದೇವೆ. ಮೈಲಿಮನೆ ಗ್ರಾಮ ಪಂಚಾಯಿತಿಗೆ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯಾಗಿ ರಮ್ಯ ಪೂರ್ಣೇಶ್ ಆಯ್ಕೆಯಾಗಿದ್ದಾರೆ, ಅಧಿಕಾರ ಸಿಕ್ಕಿದ ಈ ಸಂದರ್ಭದಲ್ಲಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಮುಂದಿನ ಪೀಳಿಗೆ ನಿಮ್ಮನ್ನು ಗುರ್ತಿಸುವ ನಿಟ್ಟಿನಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯಿತಿಯ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಅಭಿವೃದ್ಧಿ ಸಾಧಿಸಿ ಮುಂದಿನ ಅಧ್ಯಕ್ಷರಿಗೆ ಮಾದರಿಯಾಗಿ, ಮಾರ್ಗದರ್ಶಕರಾಗಿ ಎಂದು ಹಾರೈಸಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿ ಹಲವು ಬಡ ಜನರು ವಾಸಿಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಇದು ಕಾರ್ಯರೂಪಕ್ಕೆ ಬಂದಾಗ ಜನ ನಿಮ್ಮನ್ನು ಗುರ್ತಿಸಲು ಸಹಕಾರಿಯಾಗುತ್ತದೆ ಎಂದರು.
ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಮಾತನಾಡಿ, ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸಿರುವುದು ರಮ್ಯ ಪೂರ್ಣೇಶ್‌ರವರ ಜನಪ್ರಿಯತೆಗೆ ಸಾಕ್ಷಿ ಎಂದು ಹೇಳಿದರು.
ಜನಸೇವೆಗೆ ಗ್ರಾ.ಪಂ ಅಧಿಕಾರ ಮುಖ್ಯ, ಅದಕ್ಕೆ ಪೂರಕವಾಗಿ ಸರ್ಕಾರ ಅಭಿವೃದ್ಧಿಗೆ ಸಹಕಾರ ನೀಡಬೇಕು, ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಮತ್ತು ಮನೆಗಳ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ಕ್ರಿಯಾಯೋಜನೆ ತಯಾರಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿಪಡಿಸಲು ಸಲಹೆ ನೀಡಿದರು.
ನೂತನ ಅಧ್ಯಕ್ಷೆ ರಮ್ಯ ಪೂರ್ಣೇಶ್ ಮಾತನಾಡಿ, ಗ್ರಾಮದ ಮುಖಂಡರಿಗೆ ಹಾಗೂ ಪಂಚಾಯಿತಿ ಸದಸ್ಯರಿಗೆ ನನ್ನನ್ನು ಆಯ್ಕೆಮಾಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ ಎಂದರು.
ಸರ್ಕಾರದಿಂದ ಅನುದಾನ ತಂದು ತಮ್ಮ ಅಧಿಕಾರವಧಿಯಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಮನೆ ವಿತರಣೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಶ್ರಮಿಸುವುದಾಗಿ ಭರವಸೆ ನೀಡಿದ ಅವರು, ಈ ಪಂಚಾಯಿತಿಗೆ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಟಿ.ಮಂಜುನಾಥ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಅರ್ಪಿತಪ್ರದೀಪ್, ಮಾಜಿ ಅಧ್ಯಕ್ಷ ಚೇತನ್, ಸಮಾಜ ಸೇವಕ ಮೈಲಿಮನೆ ಪೂರ್ಣೇಶ್, ಗ್ರಾಮಸ್ಥ ಜಯಚಂದ್ರ ರುದ್ರೇಗೌಡ, ಸಿದ್ಧಯ್ಯ, ಕಿಶನ್, ರತೀಶ್‌ಕುಮಾರ್, ಟಿ.ಡಿ.ಮಲ್ಲೇಶ್, ಶ್ಯಾಮ್, ವಿಕ್ರಾಂತ್, ರಾಜೇಂದ್ರ, ನಿರಂಜನ್, ಚಂದನ್ ಗೌಡ, ರವಿ ಬಸರವಳ್ಳಿ, ಗೋಪಾಲ್ ಗೌಡ, ಸೋಮೇಶ್, ಪ್ರದೀಪ್.ಬಿ.ಆರ್, ಸತೀಶ್, ಗ್ರಾ.ಪಂ ಉಪಾಧ್ಯಕ್ಷೆ ವಿಂದ್ಯಾ ಜೆ.ಎಸ್, ಸದಸ್ಯರುಗಳಾದ ಹೇಮಾವತಿ, ಚೇತನ್‌ಗೌಡ.ಎಂ.ಸಿ, ಪರಮೇಶ್ ಜಿ.ಡಿ, ಶಿವಕುಮಾರ್, ಕಾರ್ತಿಕ್ ಜಿ.ಆರ್, ಸುನೀಲ್‌ಕುಮಾರ್ ಜೆ.ಎಸ್, ಹೊನ್ನಮ್ಮ ಮಂಜುನಾಥ್, ಸವಿತ ಹೆಚ್.ಎಸ್ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಫರಿದಾಬಾನು ಸ್ವಾಗತಿಸಿ ಅಶೋಕ್ ನಿರೂಪಿಸಿದರು.



