ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಸಿದ್ದರಾಮಯ್ಯ ಮುಂದೆ ಶರಣಾಗಿದ್ದ ಆರು ನಕ್ಸಲೀಯರಿಗೆ ನ್ಯಾಯಾಲಯ ಜನವರಿ 31ರ ವರೆಗೆ ನ್ಯಾಯಾಂಗ ಬಂಧನ ವಿದಿಸಿದೆ. ನಕ್ಸಲ್ ನಾಯಕರಾದ ಮುಂಡಗಾರು ಲತಾ, ಸುಂದರಿ ಕೊತ್ಲೂರು, ವನಜಾಕ್ಷಿ ಬಾಳೆಹೊಳೆ, ಜಿಶಾ, ವಸಂತ್ ಟಿ.ಎನ್, ಮಾರೆಪ್ಪ ಅರೋಲಿ ಅವರಿಗೆ ಎನ್‌ಐಎ ವಿಶೇಷ ಕೋರ್ಟ್ ಜನವರಿ 31ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಚಿಕ್ಕಮಗಳೂರು ಡಿವೈಎಸ್‌ಪಿ ನಕ್ಸಲ್ ನಾಯಕರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಎನ್‌ಐಎ ವಿಶೇಷ ಕೋರ್ಟ್‌ನ ನ್ಯಾಯಾಧೀಶರಾದ ಗಂಗಾಧರ್ ಅವರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆರು ನಕ್ಸಲರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಹೀಗಾಗಿ ನಕ್ಸಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ.
ನಿನ್ನೆ ಆರು ಮಂದಿ ನಕ್ಸಲೀಯರು ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಶರಣಾದರು. ಇದರ ಸಂಕೇತವಾಗಿ ಮುಂಡಗಾರು ಲತಾ ನಕ್ಸಲ್ ಸಮವಸ್ತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಪ್ಪಿಸಿದರು. ಬಳಿಕ ಸಿದ್ದರಾಮಯ್ಯ ಸಂವಿಧಾನದ ಪ್ರತಿ ಹಾಗೂ ಹೂಗಳನ್ನು ಅವರಿಗೆ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಮಾಡಿಕೊಂಡಿದ್ದರು. ನಂತರ ನಕ್ಸಲ್ ನಾಯಕರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಮೂವರು ಮಹಿಳೆಯರನ್ನು ಡೈರಿ ಸರ್ಕಲ್ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದರೆ ಮೂವರು ಪುರುಷರನ್ನು ಮಡಿವಾಳದ ಎಫ್ ಎಸ್ ಎಲ್ ವಿಶೇಷ ಘಟಕದಲ್ಲಿ ಇರಿಸಿದ್ದರು.



