ಚಿಕ್ಕಮಗಳೂರು ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಕೋಟೆ ರಂಗನಾಥ್ ಮೂರನೇ ಬಾರಿಗೆ ಹಾಗೂ ಉಪಾಧ್ಯಕ್ಷರಾಗಿ ವಾಜುವಳ್ಳಿ ರಮೇಶ್ ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧ ಆಯ್ಕೆಯಾಗಿದ್ದಾರೆ.
.29 ರಿಂದ ನಡೆದ ಚುನಾವಣೆಯಲ್ಲಿ ನಿರ್ದೇಶಕರುಗಳಾಗಿ 15 ಜನ ಅವಿರೋಧ ಆಯ್ಕೆಯಾಗಿದ್ದು, ಇಂದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದು ಅಧ್ಯಕ್ಷರಾಗಿ ಕೋಟೆ ರಂಗನಾಥ್, ಉಪಾಧ್ಯಕ್ಷರಾಗಿ ವಾಜುವಳ್ಳಿ ರಮೇಶ್ ಆಯ್ಕೆಯಾಗಿದ್ದಾರೆಂದು ಸಹಕಾರ ಇಲಾಖೆಯ ಸಹಾಯಕ ಉಪ ನಿಬಂಧಕರಾದ ಚುನಾವಣಾಧಿಕಾರಿ ತ್ರಿವೇಣಿ ಅವರು ಘೋಷಿಸಿದರು.
ಬಿಜೆಪಿ ಮುಖಂಡ ಈಶ್ವರಹಳ್ಳಿ ಮಹೇಶ್ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಬ್ಯಾಂಕನ್ನು ಕಳೆದ ಸಾಲಿನಲ್ಲಿ ಇಡೀ ರಾಜ್ಯದಲ್ಲೇ ಅಭಿವೃದ್ಧಿಪಡಿಸಿ ಶೇ.3 ರ ಬಡ್ಡಿ ದರದಲ್ಲಿ 10 ಕೋಟಿಗೂ ಹೆಚ್ಚು ರೈತರಿಗೆ ಅಗತ್ಯ ಸಾಲಸೌಲಭ್ಯ ನೀಡಲಾಗಿದೆ ಎಂದರು.
2024-25ನೇ ಸಾಲಿನ ಪ್ರಸಕ್ತ ಅವಧಿಯಲ್ಲಿ ರಾಜ್ಯ ಬ್ಯಾಂಕಿನಿಂದ ಹಣವನ್ನು ಪಡೆದು ತಾಲ್ಲೂಕಿನ ರೈತರಿಗೆ ಹೆಚ್ಚಿನ ಕೃಷಿ ಸಾಲ ವಿತರಿಸಲು ಮುಂದಾಗಬೇಕೆಂದು ಸಲಹೆ ನೀಡಿದ ಅವರು, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.
ನೂತನ ಅಧ್ಯಕ್ಷ ಕೋಟೆ ರಂಗನಾಥ್ ಮಾತನಾಡಿ, ಬ್ಯಾಂಕಿನ ಹಿಂದಿನ ಪದಾಧಿಕಾರಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗುತ್ತಿದ್ದೇವೆ. ರೈತರ ಸಂಕಷ್ಟಗಳಿಗೆ ನೆರವಾಗಿ ಅವರ ಅಡಿಕೆ, ಕಾಫಿ, ತೆಂಗಿನ ತೋಟ ಬರಗಾಲದಿಂದ ಒಣಗಿ ಹೋದ ಸಂದರ್ಭದಲ್ಲಿ ರೈತರಿಗೆ ತೊಂದರೆ ನೀಡದೆ ಸಾಲ ವಸೂಲಿಗೆ ಮುಂದಾಗದಂತೆ ಅಧಿಕಾರಿ ಸಿಬ್ಬಂದಿಗಳನ್ನು ತಡೆಯಲಾಗಿತ್ತು ಎಂದು ಹೇಳಿದರು.
ಈ ಅವಧಿಯಲ್ಲಿ ಸುಮಾರು 5 ಕೋಟಿ ರೂ ಸಾಲ ವಿತರಿಸಲು ಗುರಿಹೊಂದಲಾಗಿದೆ. ರಾಜ್ಯದ 172 ಬ್ಯಾಂಕ್‌ಗಳಲ್ಲಿ ಚಿಕ್ಕಮಗಳೂರಿನ ಬ್ಯಾಂಕ್ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಕಾರಣರಾದ ರೈತರು, ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಅವರು ತಮ್ಮ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ ಬಿಜೆಪಿ ಪಕ್ಷದ ಮುಖಂಡರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಯವರಿಗೆ ಕೃತಜ್ಞತೆ ಸಲ್ಲಿಸಿದರು.
ಉಪಾಧ್ಯಕ್ಷ ವಾಜುವಳ್ಳಿ ರಮೇಶ್ ಮಾತನಾಡಿ, ನನ್ನನ್ನು ಆಯ್ಕೆ ಮಾಡಿರುವ ನಿರ್ದೇಶಕರು, ಪಕ್ಷದ ಮುಖಂಡರು ಹಾಗೂ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ನೂತನ ಸಾಲಿಗೆ ನಿರ್ದೇಶಕರುಗಳಾಗಿ ದಾನಿಹಳ್ಳಿ ಮಂಜುನಾಥ್, ಮಹೇಶ್ ಈ.ಆರ್, ರವೀಶ್. ಎ.ಎನ್, ಸತೀಶ್‌ಗೌಡ ಕೆ.ಪಿ, ಸುನಿಲ್ ಎಂ.ಟಿ, ರಾಜು ಎಂ.ಈ, ಗೌರಮ್ಮ, ಶಶಿ ಚಂದ್ರೇಗೌಡ, ದಿನೇಶ್ ಟಿ.ಈ, ಹೇಮಾವತಿ, ದಿನೇಶ್ ಎ.ಎಲ್, ಈಶ್ವರಪ್ಪ ಎಲ್.ಆರ್, ರಮೇಶ್ ವಿ.ಎನ್, ಸರ್ಕಾರದ ನಾಮಿನಿ ಸದಸ್ಯ ಚಂದ್ರಶೇಖರ್ ಜೆ.ವೈ ಇವರುಗಳು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್‌ಶೆಟ್ಟಿ, ಎಂ.ಎಸ್ ನಿರಂಜನ್, ಚಂದ್ರೇಗೌಡ, ಕೆ.ಪಿ ವೆಂಕಟೇಶ್, ಪರಮೇಶ್, ಪ್ರಭು ಹಾಗೂ ಬ್ಯಾಂಕಿನ ವ್ಯವಸ್ಥಾಪಕರಾದ ಎಂ.ಕೆ ಗೀತಾ ಉಪಸ್ಥಿತದ್ದರು.



