ಸಂವಿಧಾನ, ಮೀಸಲಾತಿ ವ್ಯವಸ್ಥೆ ಹಾಗೂ ಅಂಬೇಡ್ಕರ್ ಅವರನ್ನು ವಿರೋಧಿಸುವುದು, ಅವಮಾನಿಸುವುದನ್ನೇ ಸಿದ್ಧಾಂತವನ್ನಾಗಿಸಿಕೊಂಡಿರುವ ಬಿಜೆಪಿ, ಆರ್ ಎಸ್ ಎಸ್ ಹಾಗೂ ಸಂಘಪರಿವಾರದವರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರು ಹೇಳಲೂ ನೈತಿಕತೆ ಇಲ್ಲ. ನಾವು ಅಧಿಕಾರಕ್ಕೆ ಬಂದಿರುವುದೇ ಅಂಬೇಡ್ಕರ್ ಸಂವಿಧಾನ ಬದಲಾಯಿಸಲು ಎಂದು ಪದೇ ಪದೇ ಹೇಳಿಕೆ ನೀಡಿರುವ, ಅಂಬೇಡ್ಕರ್ ಹೆಸರು ಜಪಿಸುವ ಬದಲು ದೇವರ ನಾಮ ಜಪಿಸಿ ಎಂದು ಕರೆ ನೀಡಿರುವ ಬಿಜೆಪಿ, ಆರೆಸೆಸ್ ಮುಖಂಡರು ಪರಿಶಿಷ್ಟರಿಗೆ ಅಂಬೇಡ್ಕರ್ ಬಗ್ಗೆ ಪಾಠ ಮಾಡುವ ಅಗತ್ಯವೇ ಇಲ್ಲ ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ಜಿಪಂ ಮಾಜಿ ಸದಸ್ಯ ಎಂ.ಎಸ್.ಅನಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಆರೆಸೆಸ್ ಮುಖಂಡ ಸಂತೋಷ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತಿತರ ಮುಖಂಡರು ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭೀಮಸಂಗಮ ಅಭಿಯಾನದ ಮೂಲಕ ಪ್ರತೀ ಪರಿಶಿಷ್ಟರ ಮನೆಗಳಿಗೆ ಅಂಬೇಡ್ಕರ್ ವಿಚಾರಧಾರೆಗಳನ್ನು ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಸದಾ ಅಂಬೇಡ್ಕರ್ ಹಾಗೂ ಅವರು ಬರೆದಿರುವ ಸಂವಿಧಾನದ ವಿರುದ್ಧ ಕೆಂಡ ಕಾರುತ್ತಿದ್ದ ಆರೆಸೆಸ್ ಹಾಗೂ ಬಿಜೆಪಿಯವರಿಗೆ ಅಂಬೇಡ್ಕರ್ ಅವರ ಮೇಲೆ ದಿಢೀರ್ ಪ್ರೀತಿ ಬಂದಿರುವುದರ ಹಿಂದೆ ಇರುವ ಹುನ್ನಾರ ಏನೆಂದು ಅರಿಯದಿರುವಷ್ಟು ಮುಗ್ಧರು ಪರಿಶಿಷ್ಟರಲ್ಲ, ಬಿಜೆಪಿಯವರು ಭೀಮ ಸಂಗಮ ಕಾರ್ಯಕ್ರಮದ ಹೆಸರಿನಲ್ಲಿ ದಲಿತರ ಮತಗಳ ಮೇಲೆ ಕಣ್ಣು ಹಾಕಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.
ಬಿಜೆಪಿ, ಆರೆಸೆಸ್ ಹಾಗೂ ಸಂಘಪರಿವಾರದವರು ಹಿಂದು ಧರ್ಮದ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸಿ ಇದುವರೆಗೂ ಅಧಿಕಾರದ ಗದ್ದುಗೆ ಹಿಡಿಯುತ್ತಿದ್ದರು. ಮನುವಾದ, ಜಾತಿವಾದ, ಬ್ರಾಹ್ಮಣ್ಯ ಸಿದ್ಧಾಂತದ ಮಹಾಪೋಷಕರಾಗಿರುವ ಇವರಿಗೆ ಹಿಂದಿನಿಂದಲೂ ಅಂಬೇಡ್ಕರ್ ವಿಚಾರಗಳನ್ನು ಸಹಿಸಲು ಸಾಧ್ಯವಾಗಿಲ್ಲ. ದೇಶದಲ್ಲಿ ಅಂಬೇಡ್ಕರ್ ಸಂವಿಧಾನವನ್ನು ಬದಲಾಯಿಸಿ ಮನುವಾದವನ್ನೇ ಸಂವಿಧಾನ ಮಾಡುವ ಹಿಡನ್ ಅಜೆಂಡಾವನ್ನು ಜಾರಿ ಮಾಡಲು ಹಾಗೂ ಹಿಂದೂ ರಾಷ್ಟç ನಿರ್ಮಾಣಕ್ಕೆ ಅಡ್ಡಿಯಾಗಿರುವುದೇ ಅಂಬೇಡ್ಕರ್ ವಿಚಾರಧಾರೆ ಹಾಗೂ ಅವರಿಂದಲೇ ರಚಿಸಲ್ಪಟ್ಟ ಭಾರತದ ಸಂವಿಧಾನವೇ ಆಗಿದೆ. ಈ ಕಾರಣಕ್ಕೆ ಆರೆಸೆಸ್, ಬಿಜೆಪಿ ಹಾಗೂ ಸಂಘಪರಿವಾರದವರಿಗೆ ಹಿಂದಿನಿಂದಲೂ ಅಂಬೇಡ್ಕರ್ ಹಾಗೂ ಅವರು ಬರೆದಿರುವ ಸಂವಿಧಾನದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಈ ಕ್ಷಣದವರೆಗೂ ಬಿಜೆಪಿ, ಆರೆಸೆಸ್, ಸಂಘಪರಿವಾರದವರಿಗೆ ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಕಿಂಚಿತ್ ಗೌರವ ಕಾಳಜಿಯೇ ಇಲ್ಲ. ಇಂತಹ ಮನಸ್ಥಿತಿಯ ಪಕ್ಷ, ಸಂಘಟನೆಯವರಿಗೆ ಅಂಬೇಡ್ಕರ್ ಅವರ ಮೇಲೆ ದಿಢೀರ್ ಪ್ರೀತಿ ಬಂದಿರುವುದರ ಹಿಂದೆ ಆರೆಸೆಸ್, ಬಿಜೆಪಿಯವರು ಮತ್ತೊಂದು ಹಿಡನ್ ಅಜೆಂಡಾ ಹೊಂದಿರುವಂತಿದೆ ಎಂದು ಟೀಕಿಸಿದ್ದಾರೆ.
ಆರೆಸೆಸ್, ಬಿಜೆಪಿ ಸಂತತಿಯವರು ಈ ಹಿಂದೆ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕುವ ಮೂಲಕ ತಮ್ಮ ಅಸಹನೆಯನ್ನು ತೋರಿಸಿದ್ದಾರೆ. ಪದೇ ಪದೇ ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ಸಿಕ್ಕಿರುವ ಮೀಸಲಾತಿ ಸೌಲಭ್ಯವನ್ನು ತೆಗೆದು ಹಾಕುವುದಾಗಿ ಹೇಳಿಕೆ ನೀಡಿದ್ದಾರೆ. ದೇಶಾದ್ಯಂತ ಅಂಬೇಡ್ಕರ್ ಪ್ರತಿಮೆಗಳನ್ನು ವಿರೂಪಗೊಳಿಸಿರುವ ಘಟನೆಗಳಲ್ಲಿ ಬಿಜೆಪಿ, ಸಂಘಪರಿವಾರದವರು ಮುಂಚೂಣಿಯಲ್ಲಿದ್ದಾರೆ. ನಾವು ಅಧಿಕಾರಕ್ಕೆ ಬಂದಿರುವುದೇ ಅಂಬೇಡ್ಕರ್ ಸಂವಿಧಾನ ಬದಲಾಯಿಸಲು ಎಂದು ಬಿಜೆಪಿ ಪಕ್ಷದ ಹಲವುಮಂದಿ ಶಾಸಕರು, ಸಂಸದರು, ಸಚಿವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಸಂಸತ್‌ನಲ್ಲಿ ಗೃಹಮಂತ್ರಿ ಅಮಿತ್ ಶಾ, ಅಂಬೇಡ್ಕರ್ ಹೆಸರು ಜಪಿಸುವುದನ್ನು ಬಿಟ್ಟು ದೇವರ ಹೆಸರನ್ನು ಜಪಿಸಿದ್ದರೇ ಮೋಕ್ಷ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳಿಕೆ ನೀಡಿರುವ ಮೂಲಕ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಇಂತಹ ಮನಸ್ಥಿತಿಯವರು ಈಗ ಭೀಮ ಸಂಗಮ ಅಭಿಯಾನದ ಮೂಲಕ ಪರಿಶಿಷ್ಟರ ಮನೆಗಳಿಗೆ ಅಂಬೇಡ್ಕರ್ ವಿಚಾರಗಳನ್ನು ತಲುಪಿಸುತ್ತೇವೆಂದು ಹೊರಟಿರುವುದು ಹಾಸ್ಯಾಸ್ಪದ. ಪರಿಶಿಷ್ಟರು ಬಿಜೆಪಿಯ ಹುನ್ನಾರಗಳನ್ನು ಅರ್ಥೈಸಿಕೊಂಡ ಸಂವಿಧಾನದ ಪರ ಇರುವ ಪಕ್ಷದತ್ತ ಮುಖ ಮಾಡುತ್ತಿರುವ ಭಯ ಆರೆಸೆಸ್ ಹಾಗೂ ಬಿಜೆಪಿಯವರನ್ನು ಕಾಡುತ್ತಿರುವುದರಿಂದ ಮನುವಾದಿಗಳು ದಲಿತರ ಮನೆಗಳತ್ತ ಮುಖ ಮಾಡಿ ಪರಿಶಿಷ್ಟರನ್ನು ಓಲೈಸುವ ನೀಚತನಕ್ಕೆ ಕೈ ಹಾಕಿದ್ದಾರೆ. ಬಿಜೆಪಿಯವರ ಈ ಸಂಚಿಗೆ ಪ್ರಜ್ಞಾವಂತರಾಗಿರುವ ಪರಿಶಿಷ್ಟರ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.
ದಲಿತರ ಮೇಲಿನ ಹಲ್ಲೆಗಳು, ಅಂತರ್ಜಾತಿ ವಿವಾಹ ಆದವರ ಕೊಲೆ, ಜಾತೀಯತೆ, ನದಿ, ಬಾವಿ ನೀರು ಮುಟ್ಟಲೂ ಬಿಡದಿರುವುದು, ಹಿಂದುಗಳ ದೇವಾಲಯಗಳಿಗೆ ದಲಿತರ ಪ್ರವೇಶ ನಿರಾಕರಣೆ, ದಲಿತ ಮಹಿಳೆಯರ ಅತ್ಯಾಚಾರದಂತಹ ಘಟನೆಗಳು ಜಾತಿ ಹೆಸರಿನಲ್ಲಿ ಇಂದಿಗೂ ನಡೆಯುತ್ತಿದ್ದರೂ ಈ ಬಗ್ಗೆ ಎಂದೂ ಬೀದಿಗಿಳಿದು ಹೋರಾಟ ಮಾಡದ ಬಿಜೆಪಿ, ಆರೆಸೆಸ್, ಸಂಘಪರಿವಾರದವರು ಈಗ ಪರಿಶಿಷ್ಟರ ಮನೆಯತ್ತ ಮುಖ ಮಾಡಿರುವುದರ ಹಿಂದೆ ದಲಿತ ಮತಗಳಿಕೆಯ ಹುನ್ನಾರವಿದೆಯೇ ಹೊರತು ದಲಿತರ ಬಗ್ಗೆ ಕಾಳಜಿಯಿಂದಲ್ಲ. ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಗಳಾಗಿರುವ ಇವರು ಅಂಬೇಡ್ಕರ್ ಅವರ ವಿಚಾರಗಳನ್ನು ತಿರುಚಿ ಹೇಳುವ ಅಪಾಯ ಇದೆ, ಈ ಬಗ್ಗೆ ಪರಿಶಿಷ್ಟರ ಎಚ್ಚರಿಕೆಯಿಂದಿರಬೇಕು. ಅಂಬೇಡ್ಕರ್ ಹೆಸರು ಜಪಿಸದೇ ದೇವರ ಹೆಸರು ಜಪಿಸಿ ಎಂದು ಹೇಳಿರುವ, ಸಂವಿಧಾನ ಬದಲಾಯಿಸುತ್ತೇವೆ ಎಂದಿರುವ ಬಿಜೆಪಿಯವರ ಪರಿಶಿಷ್ಟರ ಮನೆಗಳಿಗೆ ಅಂಬೇಡ್ಕರ್ ಹೆಸರು ಹೇಳಿಕೊಂಡು ಹೋಗುವಂತಹ ಹೀನಾಯ ಸ್ಥಿತಿಗೆ ತಲುಪಿರುವುದು ನಾಚಕೆಗೇಡು ಎಂದು ಅನಂತ್ ಟೀಕಿಸಿದ್ದಾರೆ.



