ಸುದ್ದಿ ಮಾಡಲು ಹೋಗಿ ಯೂಟ್ಯೂಬರ್ ಒಬ್ಬ ಆನೆ ದಾಳಿಯಿಂದ ಪಾರಾದ ಘಟನೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ಬಿದಿರುತಳ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಟ್ಟ ಕಡೆಯ ಗ್ರಾಮವಾದ ಚಾರ್ಮಾಡಿ ಘಾಟ್ ತಪ್ಪಲಿನಲ್ಲಿರುವ ಬಿದರುತಳ ಗ್ರಾಮದ ವಿಡಿಯೋ ಚಿತ್ರೀಕರಣ ಮಾಡಲು ಚನ್ನರಾಯಪಟ್ಟಣ ಮೂಲದ ಯೂಟ್ಯೂಬರ್ ಅಭಿಷೇಕ್ ಮಂಗಳವಾರ ಸಂಜೆ ಗ್ರಾಮಕ್ಕೆ ಹೋಗಿದ್ದಾರೆ. ಗ್ರಾಮಕ್ಕೆ ಹೋಗಲು ರಸ್ತೆ ಇಲ್ಲದ ಕಾರಣ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾಡಾನೆ ಒಂದು ಏಕಾಏಕಿ ದಾಳಿಗೆ ಮುಂದಾಗಿದೆ. ಯೂಟ್ಯೂಬರ್ ಅಭಿಷೇಕ್ ತಕ್ಷಣ ಕಂದಕಕ್ಕೆ ಜಿಗಿದು ಕೂದಲೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆನೆಯನ್ನು ಕಂಡ ಅಭಿಷೇಕ್ ಕಂದಕಕ್ಕೆ ಜಿಗಿದಿದ್ದರಿಂದ ಕಾಲು ಹಾಗೂ ಮೂಗಿನ ಭಾಗಕ್ಕೆ ಗಂಭೀರ ಪೆಟ್ಟಾಗಿದೆ.
ಚನ್ನರಾಯಪಟ್ಟಣ ಮೂಲದ ಅಭಿಷೇಕ್ ಯುನೈಟೆಡ್ ಮೀಡಿಯಾ ಎಂಬ ಯುಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದು. ಬಿದರತಳ ಗ್ರಾಮದ ವಿಡಿಯೋ ಚಿತ್ರೀಕರಣಕ್ಕೆ ಮಂಗಳವಾರ ತೆರಳಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ಆರೀಫ್ ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಯಿತು.
ಈ ಸಂದರ್ಭದಲ್ಲಿ ಆರೀಫ್, ನವೀನ್, ಸಂಜಯ್ ಗೌಡ ಕೊಟ್ಟಿಗೆಹಾರ, ಗಿರೀಶ್, ಸುಂದರೇಶ, ಭಕ್ತೇಶ್ ಮೊದಲಾದವರು ಇದ್ದರು.



